Jootoor Designs

Arrow Up

Arrow Down

ಕೂಡ್ಲಿಗಿ

ಕೂಡ್ಲಿಗಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬೆಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ಕಂಡುಬರುವ ಕೂಡ್ಲಿಗಿ ಪಟ್ಟಣ ಧಾರ್ಮಿಕ, ಐತಿಹಾಸಿಕ, ರಾಜಕೀಯವಾಗಿ ಪ್ರಸಿದ್ಧಿ ಪಡೆದ ಸ್ಥಳ.ಕೂಡ್ಲಿಗಿಯ ಇತಿಹಾಸವನ್ನು ಗಮನಿಸುತ್ತ ಬಂದಾಗ ಮೌರ್ಯರು, ಶಾತವಾಹನರು, ಪಲ್ಲವರು, ಕದಂಬರು, ಚಾಳುಕ್ಯರ ಆಳ್ವಿಕೆಗೆ ಈ ಭಾಗ ಒಳಪಟ್ಟದ್ದೆಂದು ತಿಳಿದುಬರುತ್ತದೆ. ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಇದು ಅವರ ಸಾಮಂತರಾದ ಗಂಗರ ಆಳ್ವಿಕೆಯಲ್ಲಿತ್ತು. ನಂತರ ವಿಜಯನಗರ ಅರಸರು, ಹೈದರಾಲಿ, ಟಿಪ್ಪೂಸುಲ್ತಾನರ ಆಳ್ವಿಕೆ. ನಂತರ ಬ್ರಿಟೀಶರ ಅಧಿಪತ್ಯಕ್ಕೊಳಪಟ್ಟಿತ್ತು. ಸ್ವಾತಂತ್ರ್ಯಾನಂತರ ೧೯೫೩ರ ಅಕ್ಟೋಬರ್ ನಲ್ಲಿ ಬಳ್ಳಾರಿ ಜಿಲ್ಲೆಯೊಂದಿಗೆ ಇದು ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟಿತು. ೧೯೫೬ರಲ್ಲಿ ಕರ್ನಾಟಕದಲ್ಲಿ ವಿಲೀನವಾಯಿತು.

ಕೂಡ್ಲಿಗಿಯ ಭೌಗೋಳಿಕ ಪರಿಸರ : ಕೂಡ್ಲಿಗಿ ತಾಲೂಕು ಮಧ್ಯದಲ್ಲಿ ಸಣ್ಣ ಬೆಟ್ಟಗುಡ್ಡಗಳನ್ನು ಹೊಂದಿದ್ದು, ಉಳಿದಂತೆ ಪ್ರಸ್ಥಭೂಮಿಯನ್ನು ಹೊಂದಿದೆ. ಕೆಂಪು-ಬಿಳಿ ಮಿಶ್ರಿತವಾದ ಮಣ್ಣನ್ನೂ ಭೂಮಿ ಹೊಂದಿದೆ. ಹವಾಮಾನ ಆರೋಗ್ಯಕರವಾಗಿದ್ದು, ಚಳಿಗಾಲ ಬಿಟ್ಟರೆ ಉಳಿದಂತೆ ಉಷ್ಣತೆ ಹೆಚ್ಚು. ತಾಲೂಕಿನ ಪ್ರಮುಖ ಬೆಳೆಗಳೆಂದರೆ ಜೋಳ, ಸಜ್ಜೆ, ನವಣೆ, ನೆಲಗಡಲೆ, ಹತ್ತಿ, ಬೇಳೆಕಾಳುಗಳು, ನೀರಿನ ಆಶ್ರಯವಿರುವಕಡೆ ಭತ್ತ, ಮೆಣಸಿನಕಾಯಿ, ಈರುಳ್ಳಿ, ಕಬ್ಬು ಬೆಳೆಯಲಾಗುತ್ತದೆ. ಕೂಡ್ಲಿಗಿ ತಾಲೂಕು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಪ್ರದೇಶ. ಕೂಡ್ಲಿಗಿ ಪಟ್ಟಣದಲ್ಲಿಯೇ ಮಹಾತ್ಮ ಗಾಂಧಿಯವರ ಚಿತಾಭಸ್ಮ ಸ್ಮಾರಕವಿದೆ. ಇದಕ್ಕೆ ಸಾಕಷ್ಟು ಇತಿಹಾಸವಿದ್ದು, ಸದ್ಯಕ್ಕೆ ಗಾಂಧಿ ಸ್ಮಾರಕ ಸಮಿತಿಯ ಅಧ್ಯಕ್ಶರಾಗಿ ಶ್ರೀ.ಅಂಗಡಿ ಸಿದ್ಧಣ್ಣ ಕಾರ್ಯನಿರ್ವಹಿಸುತ್ತಿದ್ದಾರೆ.

ಅಮರದೇವರಗುಡ್ಡ : ಕೂಡ್ಲಿಗಿ ಕೇಂದ್ರ ಸ್ಥಳದಿಂದ ಸುಮಾರು ೩ ಕಿ.ಮೀ ದೂರದಲ್ಲಿ ಇರುವ ಪುಟ್ಟ ಗ್ರಾಮ ಅಮರದೇವರಗುಡ್ದ. ಊರಿನ ಬೆಟ್ಟದ ಮೇಲೆ ಅಮರೇಶ್ವರಲಿಂಗವಿದ್ದು ಅದರಿಂದಲೇ ಊರಿಗೆ ಈ ಹೆಸರು ಬರಲು ಕಾರಣವೆಂದು ಜನರ ನಂಬಿಕೆ. ಗ್ರಾಮದ ಸಮೀಪದಲ್ಲೇ ಸುಮಾರು ೧.೭೧ ಎಕರೆಯಷ್ಟು ವಿಶಾಲವಾಗಿ ಆವರಿಸಿದ ಆಲದ ಮರ ವಿಹಾರದ ಸ್ಥಳವಾಗಿದೆ. ಈಗ ಅರಣ್ಯ ಇಲಾಖೆಯ ವತಿಯಿಂದ ಅದೊಂದು ಸುಂದರ ವಿಹಾರ ಸ್ಥಳವಾಗಿ ರೂಪುಗೊಂಡಿದೆ.

ಚಿಕ್ಕಜೋಗಿಹಳ್ಳಿ : ಕೂಡ್ಲಿಗಿಯಿಂದ ಸುಮಾರು ೨೬ ಕಿ.ಮೀ ದೂರದಲ್ಲಿರುವ ಚಿಕ್ಕಜೋಗಿಹಳ್ಳಿ ಗ್ರಾಮ ರಾಷ್ಟ್ರೀಯ ಹೆದ್ದಾರಿ ೧೩ರ ಚಿತ್ರದುರ್ಗ ಮಾರ್ಗದಲ್ಲಿ ಬರುತ್ತದೆ. ಹಿಂದೆ ದೇಶದಲ್ಲಿಯೇ ಮಾದರಿಗ್ರಾಮವೆನಿಸಿತ್ತು. ಚಿಕ್ಕಜೋಗಿಹಳ್ಳಿ ಮೊದಲು ಚಿಕ್ಕದಾದ ಹಳ್ಳಿಯಾಗಿದ್ದು, ಅಲ್ಲಿಯೇ ಹುಟ್ಟಿ ಬೆಳೆದ ದಿ.ಕೆ.ವೆಂಕಟಸ್ವಾಮಿಯವರು ಬೆಂಗಳೂರಿನಲ್ಲಿ ವಾಸಿಸತೊಡಗಿದ ನಂತರ, ಅವರ ದೂರದರ್ಶಿತ್ವ, ಸ್ಥಳೀಯ ಜನತೆಯ ಸಹಕಾರ, ಸರ್ಕಾರದ ನೆರವಿನೊಂದಿಗೆ ಅದೊಂದು ಮಾದರಿ ಗ್ರಾಮವಾಗಿ ರೂಪುಗೊಂಡಿತು. ರೇಷ್ಮೇ ಸಂಕೀರ್ಣ, ಅಂಚೆ ಕಚೇರಿ, ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಶಾಲೆ, ಚಿತ್ರಮಂದಿರ, ಕೋಳಿ ಸಾಕಾಣಿಕೆ, ಕಂಬಳಿ ನೇಯ್ಗೆ, ಬ್ಯಾಂಕ್ ಹೀಗೆ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಕೂಡಿರುವ ಗ್ರಾಮ. ಇಲ್ಲಿ ಈಗೆ ನವೋದಯ ವಸತಿ ಶಾಲೆಯೂ ಇದೆ.

ಗುಡೇಕೋಟೆ : ಹಿಂದೊಮ್ಮೆ ಪಾಳೇಗಾರರ ಕೇಂದ್ರಸ್ಥಾನವಾಗಿದ್ದ ಗುಡೇಕೋಟೆ ಅಭೇದ್ಯವಾದ ಕೋಟೆಯಿಂದ ಕೂಡಿದೆ. ೧೬ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪತನಾನಂತರ ಉಂಟಾದ ಅನಿಶ್ಚಿತ ಪರಿಸ್ಥಿತಿ ಬಳಸಿಕೊಂಡು ಪಾಳೇಗಾರರು ಪ್ರಬಲರಾದರು. ಹೈದರಾಲಿಯು ಚಿತ್ರದುರ್ಗಕ್ಕೆ ಮುತ್ತಿಗೆ ಹಾಕಿದಾಗ ಚಿತ್ರದುರ್ಗದ ಪರವಾಗಿ ಪಾಳೇಗಾರರು ಹೋರಾಡಿದರು. ಕ್ರಿ.ಶ. ೧೭೭೭ರಲ್ಲಿ ಹೈದರಾಲಿಯು ಗುಡೇಕೋಟೆಯನ್ನು ವಶಪಡಿಸಿಕೊಂಡನು. 'ಇಷ್ಟು ಬೃಹತ್ ಗಾತ್ರದ ಬಂಡೆಗಳನ್ನು ಬಳಸಿ ಕಟ್ಟಿದ ಕೋಟೆಗೋಡೆಗಳನ್ನು ಇಡೀ ದಕ್ಷಿಣ ಭಾರತದಲ್ಲಿಯೇ ಕಂಡಿಲ್ಲ' ಎಂದು ಪ್ರಾಕ್ತನ ಶಾಸ್ತ್ರದ ಬ್ರೂಸ್ ಫುಟ್ ಹೇಳಿದ್ದಾರೆ. ಗ್ರಾಮದಲ್ಲಿ ಈಗಲೂ ಹಳೆಯ ದೇವಾಲಯಗಳಿವೆ. ಶಿಥಿಲವಾದ ಕೋಟೆಯಿದೆ. ಬೃಹತ್ ಗಾತ್ರದ ನಾಗರ ಶಿಲಾಮೂರ್ತಿಗಳಿವೆ. ಎಲ್ಲದಕ್ಕೂ ಮಿಗಿಲಾಗಿ ಎಲ್ಲಿಯೂ ಕಾಣಸಿಗದ ಅಪರೂಪದ ಶಿವಪಾರ್ವತಿ ಮೂರ್ತಿಯಿರುವ ದೇವಸ್ಥಾನವಿದೆ. ಏಕಶಿಲೆಯಲ್ಲಿರುವ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿರುವ ಅಪೂರ್ವವಾದ ಕಪ್ಪುಶಿಲೆಯ ಮೂರ್ತಿಯಿದೆ.

ಗುಣಸಾಗರ : ಕೂಡ್ಲಿಗಿಯಿಂದ ೨೦ ಕಿ.ಮೀ ದೂರದಲ್ಲಿರುವ ಗ್ರಾಮ. ಸುಂದರವಾದ ಹಾಗು ಪುರಾತನವಾದ ಒಂದೆ ಶಿಲೆಯಿಂದ ನಿರ್ಮಿಸಿರುವ ಶ್ರೀವೇಣುಗೋಪಾಲಕೃಷ್ಣನ ಮೂರ್ತಿಯಿಂದ ಈ ಸ್ಥಳ ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯವು ಮಹಾನ್ ಶಿಲ್ಪಿ ಜಕಣಾಚಾರಿಯಿಂದ ಕೆತ್ತಲ್ಪಟ್ಟಿದೆಯೆಂದು ಪ್ರತೀತಿ.

ಕೈವಲ್ಯಾಪುರ : ಕೂಡ್ಲಿಗಿಯಿಂದ ಹೊಸಪೇಟೆ ಮಾರ್ಗದಲ್ಲಿ ೪ ಕಿ.ಮೀ ದೂರವಿರುವ ಗ್ರಾಮ. ಇಲ್ಲಿನ ಶ್ರೀರಂಗನಾಥನ ಮೂರ್ತಿ, ಶ್ರೀರಂಗಪಟ್ಟಣದ ಮೂರ್ತಿಯನ್ನೇ ಹೋಲುತ್ತದೆ. ಕಪ್ಪುಶಿಲೆಯ ಮೂರ್ತಿಯಲ್ಲಿ ಕುಸುರಿ ಕೆಲಸ ಸುಂದರವಾದುದು.

ಜರಿಮಲೆ : ಕೂಡ್ಲಿಗಿಯಿಂದ ಸುಮಾರು ೧೪ ಕಿ.ಮೀ ದೂರವಿರುವ ಐತಿಹಾಸಿಕ ಸ್ಥಳ. ಇಲ್ಲಿಯೂ ಪಾಳೇಗಾರರ ಆಳ್ವಿಕೆಯಿತ್ತು. ಸುಮಾರು ೮೦೦ ಅಡಿ ಎತ್ತರದಲ್ಲಿನ ಗುಡ್ಡದ ಮೇಲೆ ಜರಿಮಲೆ ಪಾಳೇಗಾರರ ಶಿಥಿಲಗೊಂಡ ಕೋಟೆಯ ಅವಶೇಷಗಳಿವೆ. ಜರಿಮಲೆ ಪಲೆಯ ಸ್ಥ್ಪಾಪಕ ಪೆನಪ್ಪ ನಾಯಕ . ಪಾಳೇಗಾರರ ಕೊನೆಯ ತಲೆಮಾರಿನ ಶ್ರೀ ಸಿದ್ದಪ್ಪನಾಯಕರು ಈಗಲೂ ಇದ್ದಾರೆ. ಜರಿಮಲೆಯ ಸೀತಾಫಲ ಹಣ್ಣು ಈ ಭಾಗದಲ್ಲಿ ಪ್ರಸಿದ್ಧ. ಅದರಲ್ಲೂ ಉಪ್ಪರಿಗೆ ಹಣ್ಣುಗಳು ಗಾತ್ರದಲ್ಲಿ, ಸಿಹಿಯಲ್ಲಿ ಮಧುರವಾದವುಗಳು.

ಕಾನಾಮಡುಗು : ಕೂಡ್ಲಿಗಿಯಿಂದ ಸುಮಾರು ೩೫ ಕಿ.ಮೀ ದೂರವಿರುವ ಇಲ್ಲಿ ಶಿವಶರಣ ಶ್ರೀ ಶರಣಬಸವೇಶ್ವರರ ಯೋಗಸಮಾಧಿಯ ಗದ್ದುಗೆಯಿದೆ. ಜಾಗೃತ ಸ್ಥಳವೆಂದು ಕರೆಯಲ್ಪಟ್ಟಿದೆ. ಇಲ್ಲಿನ ದಾಸೋಹ ಮಠದಲ್ಲಿ ನಾಡಿನ ಹಿರಿಯರು ರೂಪುಗೊಂಡಿದ್ದಾರೆ. ಮಠದಿಂದ ನಡೆಯುವ ಶಿಕ್ಷಣಸಂಸ್ಥೆಗಳು, ದಾಸೋಹ ಸುತ್ತುಮುತ್ತಲಿನ ಜನತೆಗೆ ಅಪ್ಯಾಯಮಾನವಾಗಿವೆ.

ಕೊಟ್ಟೂರು : ಕೂಡ್ಲಿಗಿಯಿಂದ ಹರಪನಹಳ್ಳಿ ಮಾರ್ಗವಾಗಿ ಸುಮಾರು ೧೮ ಕಿ.ಮೀ ದೂರವಿರುವ ಕೊಟ್ಟೂರಿಗೆ ಆ ಹೆಸರು ಬರಲು ಕಾರಣ ಕೊಟ್ಟವ್ವೆ ಎಂಬ ಗ್ರಾಮದೇವತೆ ಎಂಬುದು ವಿದ್ವಾಂಸರ ಅಭಿಮತವಾಗಿದೆ. ಇದೊಂದು ದ್ರಾವಿಡ ದೇವತೆಯೆಂದು ಡಾ.ಶಿವರಾಮ ಕಾರಂತರು ಗುರುತಿಸಿದ್ದಾರೆ. ಇದು ಮೊದಲು ಹರಪನಹಳ್ಳಿ ಪಾಳೇಗಾರರ ಆಡಳಿತಕ್ಕೊಳಪಟ್ಟಿತ್ತು. ಈಗ ಸ್ವಾತಂತ್ರ್ಯಾನಂತರ ಪ್ರಮುಖ ವ್ಯಾಪಾರೀ ಕೇಂದ್ರವಾಗಿದ್ದು ಕೈಮಗ್ಗಕ್ಕೆ ಹೆಸರುವಾಸಿಯಾದದ್ದು. ಧಾರ್ಮಿಕವಾಗಿ ಈ ಊರು ಬಸವೇಶ್ವರರ ದೇವಸ್ಥಾನದಿಂದ ಪ್ರಸಿದ್ಧವಾಗಿದೆ. ಊರಿನಲ್ಲಿ ೪ ಮಠಗಳಿದ್ದು, ಗಚ್ಚಿನ ಮಠ, ತೊಟ್ಟಿಲು ಮಠ, ಮೂರ್ಕಲ್ಲು ಮಠ, ಹಿರೇಮಠಳಿವೆ. ಕ್ರಿ.ಶ ೧೬೭೯ರಲ್ಲಿ ಬಸವಲಿಂಗ ಕವಿಯು ಬರೆದ ಕೊಟ್ಟೂರು ಬಸವೇಶ್ವರ ಪುರಾಣದಲ್ಲಿ ಬಸವೇಶ್ವರ ಮಹಿಮೆ ವರ್ಣಿತವಾಗಿದೆ.

ಉಜ್ಜಯಿನಿ : ಕೊಟ್ಟೂರಿನಿಂದ ಸುಮಾರು ೧೫ ಕಿ.ಮೀ ಹಾಗೂ ಕೂಡ್ಲಿಗಿಯಿಂದ ಸುಮಾರು ೩೫ ಕಿ.ಮೀ ದೂರವಿರುವ ಉಜ್ಜಯಿನಿ ವೀರಶೈವರ ಪಂಚಪೀಠಗಳಲ್ಲೊಂದು. ಉಳಿದ ನಾಲ್ಕು ಕ್ಷೇತ್ರಗಳು ಕೇದಾರ, ಕಾಶಿ, ಶ್ರೀಶೈಲ, ಬಾಳೆಹೊನ್ನೂರು. ಉಜ್ಜಯಿನಿಯ ಶ್ರೀ ಮರುಳುಸಿದ್ದೇಶ್ವರ ದೇವಸ್ಥಾನವು ಸುಂದರ ಕೆತ್ತನೆಗಳಿಂದ ಕೂಡಿದೆ. 'ಹಂಪಿಯನ್ನು ಹೊರಗೆ ನೋಡು, ಉಜ್ಜಯನಿಯನ್ನು ಒಳಗೆ ನೋಡು' ಎಂಬುದು ಇಲ್ಲಿನ ಜನಜನಿತ ಮಾತು. ದೇವಾಲಯದ ಮಹಾದ್ವಾರವನ್ನು ಉಚ್ಚಂಗಿಯ ಪಾಂಡ್ಯರು ಕಟ್ಟಿಸಿರುವರೆಂದು ತಿಳಿದುಬರುತ್ತದೆ. ಬೃಹತ್ತಾಗಿರುವ ನಂದಿನ ಮೂರ್ತಿಯೂ ಇಲ್ಲಿನ ಆಕರ್ಶಣೆಗಳಲ್ಲೊಂದು. ಒಂದು ಅಂಕಣವನ್ನೇ ನಂದಿ ಆವರಿಸಿರುವುದರಿಂದಾಗಿ ಇದಕ್ಕೆ 'ಅಂಕಣದ ಬಸವಣ್ಣ' ಎಂದೇ ಹೆಸರು. ಎಪ್ರೀಲ್-ಮೇ ತಿಂಗಳಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಹೀಗೆ ತಾಲೂಕಿನ ಈ ಸ್ಥಳಗಳು ಪ್ರವಾಸಿಗರಿಗೆ ಕಾಯುತ್ತಿವೆ.

ಬೊಮ್ಮಘಟ್ಟ : ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ , ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದ ದಶಮಿಯಂದು ರತೋತ್ಸವ ಇರುತ್ತದೆ.

ಕೂಡ್ಲಿಗಿ ತಾಲೂಕಿನ ಯುವ ಬರಹಗಾರರು :ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಯುವ ಬರಹಗಾರರು ಬರೆಯುತ್ತಿದ್ದಾರೆ. ಅವರಲ್ಲಿ ಪ್ರಮುಖವಾದವರನ್ನು ಇಲ್ಲಿ ಗುರುತಿಸಲಾಗಿದೆ.

ಮಲ್ಲಿಕಾರ್ಜುನ ಗೌಡ ತೂಲಹಳ್ಳಿ : ಇವರು ಶರೀಪನ ಬೊಗಸೆ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ.ಕನ್ನಡ ಕಾವ್ಯದಲ್ಲಿ ಹೊಸ ಪ್ರಯೋಗಗಳನ್ನು ಗೌಡರ ಕಾವ್ಯದಲ್ಲಿ ಕಾಣಬಹುದು.ಅವರೀಗ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದವರಾಗಿದ್ದು, ಈ ನಾಡು ನುಡಿಯ ಬಗ್ಗೆ ಅಪಾರ ಕಾಳಜಿಯನ್ನು ಇಟ್ಟುಕೊಂಡವರಾಗಿದ್ದಾರೆ.

ಸಿದ್ದು ದೇವರಮನಿ :ಕೊಟ್ಟೂರಿನಲ್ಲಿ ಲೂಬ್ರಿಕೆಂಟ್ಸ ಇಟ್ಟುಕೊಂಡು ಕಾವ್ಯಾಸಕ್ತಿಯನ್ನು ಉಳಿಸಿಕೊಂಡ ಅಪರೂಪದ ಯುವ ಸಾಹಿತಿ ಇವರು. ಇವರ ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ ಎನ್ನುವ ಕವನ ಸಂಕಲನ ಹೊಸ ರೂಪಕ ಹೊಸ ನುಡಿಗಟ್ಟಿನಿಂದಾಗಿ ಕಾವ್ಯವೇ ಹೊಸ ಸ್ಪರ್ಶವನ್ನು ಪಡೆದಿದೆ.

ಹುಡೇಂ ಕೃಷ್ಣಮೂರ್ತಿ :ಇವರು ಪತ್ರಕರ್ತರಾಗಿದ್ದು, ಚಳುವಳಿ ಮುಂತಾಗಿ ಲವಲವಿಕೆಯಿಂದ ಓಡಾಡಿಕೊಂಡಿದ್ದು ಕಾವ್ಯ ಬರೆಯುತ್ತಿರುವವರು.ಬಿಡಿ ಬಿಡಿಯಾಗಿ ಕಾವ್ಯವನ್ನು ಬರೆದಿದ್ದಾರಾದರೂ ಇನ್ನೂ ಕೃತಿರೂಪದಲ್ಲಿ ಪ್ರಕಟಣೆಯನ್ನು ಮಾಡಿಲ್ಲ.

ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ್ಲಿಗಿಯ ಪಾತ್ರ : ಜನತೆಯದೂ ಪ್ರಮುಖ ಪಾತ್ರವಿದೆ. ಅನೇಕ ಸ್ವಾತಂತ್ರ್ಯ ಪ್ರೇಮಿಗಳು ಈ ಮಹಾನ್ ಕಾರ್ಯದಲ್ಲಿ ಭಾಗಿಗಳಾದರು. ಕೊಟ್ಟೂರಿನ ಗೊರ್ಲಿ ಶರಣಪ್ಪನವರು ಕಟ್ಟಿ ಬೆಳೆಸಿದ ಕೊಟ್ಟೂರು ವ್ಯಾಯಾಮ ಶಾಲೆ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರ ಸ್ಥಾನವಾಗಿ ಬೆಳೆಯಿತು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದುದರಲ್ಲಿ ಬಣಕಾರ ಸಿದ್ದಲಿಂಗಪ್ಪ, ಸುತ್ರಾವೆ ಗೋವಿಂದರಾವ್, ಗೊರ್ಲಿ ಶರಣಪ್ಪ, ಕೆಲಸಿಗರ ತಿಮ್ಮಪ್ಪ, ಪರಶುರಾಮಪ್ಪ, ಅಡವಿಗೌಡ, ಯಲಿಗಾರ ಅಜ್ಜಯ್ಯ, ಸಿರಿಗೆರೆ ರಾಮಶೆಟ್ಟಿ, ಡಾ.ನಂಜಪ್ಪ, ಉಜ್ಜಿನಿ ಸಿದ್ದನಗೌಡ, ಅಯ್ಯನಹಳ್ಳಿ ಕೊಟ್ರಯ್ಯ, ಉಜ್ಜಿನಿ ಮರುಳನಗೌಡ, ಗೂಳೆಪ್ಪ, ರಾಟೆ ರುದ್ರಪ್ಪ, ಹಾರಕಬಾವಿ ಬಸಯ್ಯ, ಮುಂತಾದವರು ಪ್ರಮುಖರು. ದಿ.ಸುಮಿತ್ರಪ್ಪ ಎಂಬ ಹೋರಾಟಗಾರರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಅನುಯಾಯಿಯಾಗಿ ಅವರೊಂದಿಗೆ ಕಾರ್ಯನಿರ್ವಹಿಸಿದವರು. ಆ ಸಂದರ್ಭದಲ್ಲಿ ಭೂಗತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೂ ಇದ್ದಾರೆ.