Jootoor Designs

Arrow Up

Arrow Down

  

ಮೈಸೂರು ಸಂಸ್ಥಾನ

ಮೈಸೂರು ಸಂಸ್ಥಾನ (೧೩೯೯ - ೧೯೪೭) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. ೧೩೯೯ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. ೧೫೬೫ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು. ೧೭ನೇ ಶತಮಾನದಲ್ಲಿ ಸಂಸ್ಥಾನದ ವಿಸ್ತರಣೆ ಸಕ್ರಿಯಯವಾಗಿತ್ತು. ನರಸರಾಜ ಒಡೆಯರ್ ಮತ್ತು ಚಿಕ್ಕ ದೇವರಾಜ ಒಡೆಯರ್ ಆಳ್ವಿಕೆಯಲ್ಲಿ ಹೆಚ್ಚಿನ ವಿಸ್ತರಣೆ ನಡೆದು ಮೈಸೂರು ಸಂಸ್ಥಾನವು ದಕ್ಷಿಣ ಡೆಕ್ಕನ್ ಪ್ರಸ್ತಭೂಮಿಯಲ್ಲಿ ಶಕ್ತಿಯುತ ರಾಜ್ಯಾವಾಗಿ ಬೆಳೆಯಯಿತು. ಮೈಸೂರು ಸಂಸ್ಥಾನವು ಈಗಿನ ದಕ್ಷಿಣ ಕರ್ನಾಟಕ ಹಾಗು ತಮಿಳುನಾಡಿನ ಕೆಲವು ಜಿಲ್ಲೆಗಳನ್ನು ಹೊಂದಿತ್ತು.

ಹೈದರ್ ಆಲಿ ಹಾಗು ಅವನ ಪುತ್ರ ಟಿಪ್ಪು ಸುಲ್ತಾನರು ೧೮ನೇ ಶತಮಾನದಲ್ಲಿ ಒಡೆಯರರನ್ನು ಗದ್ದುಗೆಯಿಂದ ಇಳಿಸಿ, ಮೈಸೂರು ಸಂಸ್ಥಾನವನ್ನು ತಮ್ಮ ಆಳ್ವಿಕೆಯಲ್ಲಿ ತೆಗೆದುಕೊಂಡರು. ಇವರ ಆಳ್ವಿಕೆಯಲ್ಲಿ ಸಂಸ್ಥಾನವು ತನ್ನ ಸೇನೆಯ ಬಲಾಡ್ಯತೆಯ ತುತ್ತತುದಿ ತಲುಪಿತು. ಇವರ ಆಳ್ವಿಕೆಯ ಸಮಯದಲ್ಲಿ ಸಮರಗಳು ಹೆಚ್ಚಾಗೆ ಸಾಗಿದ್ದವು - ಮರಾಠರ ವಿರುದ್ಧ, ಆಂಗ್ಲರ ವಿರುದ್ಧ ಹಾಗು ಗೋಲ್ಕೊಂಡದ ನಿಝಾಮರ ವಿರುದ್ಧ. ಈ ಸಮಯದಲ್ಲಿ ನಾಲ್ಕು ಆಂಗ್ಲೊ-ಮೈಸೂರು ಸಮರಗಳು ನಡೆದವು. ಮೊದಲೆರಡು ಆಂಗ್ಲೊ-ಮೈಸೂರು ಸಮರಗಳಲ್ಲಿ ಮೈಸೂರು ಜಯಗಳಿಸಿತು ಹಾಗು ಕೊನೆಯರಡರಲ್ಲಿ ಸೋಲಪ್ಪಿತು. ೧೭೯೯ರಲ್ಲಿ ನಾಲ್ಕನೇ ಸಮರದಲ್ಲಿ ಟಿಪ್ಪುವಿನ ಸಾವಿನ ನಂತರ ಸಂಸ್ಥಾನದ ಸಿಂಹಪಾಲು ಆಂಗ್ಲರ ಪಾಲಾಯಿತು. ತದನಂತರ ಆಂಗ್ಲರು ಒಡೆಯರನ್ನ ಮೈಸೂರು ಸಂಸ್ಥಾನದ ದೊರೆಗಳನ್ನಾಗಿ ಮಾಡಿದರು. ಒಡೆಯರ ಆಳ್ವಿಕೆಯು ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ ಮುನಂದುವರೆಯಿತು.

೧೭೯೯-೧೯೪೭ರ ಅವಧಿಯಲ್ಲಿ ಒಡೆಯರ ಆಳ್ವೆಕಯಲ್ಲಿ ಆಂಗ್ಲರ ರಾಜ್ಯವಾಗಿದ್ದ ಮೈಸೂರು ಆಧುನೀಕರಣಕ್ಕೆ ಪ್ರಖ್ಯಾತಿ ಹೊಂದಿತ್ತು. ಮೈಸೂರು ರಾಜರು ಸಂಗೀತ ಮತ್ತು ಚಿತ್ರಕಲೆಯಲ್ಲಿ ಅತಿಯಾದ ಆಸಕ್ತಿ ಹೊಂದಿದ್ದರಿಂದ ಮೈಸೂರಿನಲ್ಲಿ ಈ ದಿನಕ್ಕೊ ಪ್ರಖ್ಯಾತಿ ಹೊಂದಿರುವ ಚಿತ್ರಕಲೆಗಳು ಮತ್ತು ಸಂಗೀತ ಸಂಸ್ಕೃತಿ ಬೆಳಿಯಿತು.

ಮೈಸೂರು ಸಂಸ್ಥಾನವನ್ನು ಆಳಿದ ಅರಸರು

 • ಯದುರಾಯರು (ಸುಮಾರು ೧೩೯೯-೧೪೨೩)
 • ಬೆಟ್ಟದ ಚಾಮರಾಜ ಒಡೆಯರು (೧೪೨೩-೧೪೫೯)
 • ತಿಮ್ಮರಾಜ ಒಡೆಯರು (೧೪೫೯-೧೪೭೮)
 • ಹಿರಿಯ ಚಾಮರಾಜ ಒಡೆಯರು (೧೪೭೮-೧೫೧೩)
 • ಹಿರಿಯ ಬೆಟ್ಟದ ಚಾಮರಾಜ ಒಡೆಯರು (೧೫೧೩-೧೫೫೩)
 • ತಿಮ್ಮರಾಜ ಒಡೆಯರು
 • ಬೋಳ ಚಾಮರಾಜ ಒಡೆಯರು
 • ಬೆಟ್ಟದ ಚಾಮರಾಜ ಒಡೆಯರು ( ಈ ಮೂರೂ ಜನ ೧೫೫೩-೧೫೭೮)
 • ರಾಜ ಒಡೆಯರು (೧೫೭೮-೧೬೧೮) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
 • ಚಾಮರಾಜ ಒಡೆಯರು (೧೬೧೭-೧೬೩೭)
 • ಎರಡನೆ ರಾಜ ಒಡೆಯರು (೧೬೩೭-೧೬೩೮)ಕೇವಲ ೧ ವರ್ಷದ ಆಳ್ವಿಕೆ
 • ರಣಧೀರ ಕಂಠೀರವ ನರಸರಾಜ ಒಡೆಯರು (೧೬೩೮-೧೬೫೯)
 • ದೊಡ್ಡದೇವರಾಜ ಒಡೆಯರು (೧೬೫೯-೧೬೭೩)
 • ಚಿಕ್ಕದೇವರಾಜ ಒಡೆಯರು (೧೬೭೩-೧೭೦೪)
 • ಚಿಕ್ಕದೇವರಾಜ ಒಡೆಯರ ಮೂಕ ಮಗ (೧೭೦೪-೧೭೧೪ ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
 • ದೊಡ್ಡ ಕೃಷ್ಣರಾಜ ಒಡೆಯರು (೧೭೧೪-೧೭೩೪)
 • ಅಂಕನಹಳ್ಳಿ ಚಾಮರಾಜ ಒಡೆಯರು
 • ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು,೧೭೬೬ರರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
 • ನಂಜರಾಜ ಒಡೆಯರು (೧೭೬೬- ೧೭೭೦)
 • ಬೆಟ್ಟದ ಚಾಮರಾಜ ಒಡೆಯರು (೧೭೭೦-೧೭೭೬)
 • ಖಾಸಾ ಚಾಮರಾಜ ಒಡೆಯರು (೧೭೭೬-೧೭೯೬) (ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, ೧೭೮೨ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು, ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)
 • ಮುಮ್ಮಡಿ ಕೃಷ್ಣರಾಜ ಒಡೆಯರು (೧೭೯೯ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ ೫ ವರ್ಷದವರು) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು ೧೮೧೦ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆಬಿಟ್ಟುಕೊಡಬೇಕಾಯಿತು.
 • ಚಾಮರಾಜ ಒಡೆಯರು (೧೮೮೧-೧೯೦೨)
 • ನಾಲ್ವಡಿ ಕೃಷ್ಣರಾಜ ಒಡೆಯರು (೧೯೦೨-೧೯೪೦)
 • ಜಯಚಾಮರಾಜ ಒಡೆಯರು (೧೯೪೦ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ,ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)


ಮುಮ್ಮಡಿ ಕೃಷ್ಣರಾಜ ಒಡೆಯರು (೧೭೯೪ - ಮಾರ್ಚ್ ೨೭, ೧೮೬೮)

ಮುಮ್ಮಡಿ ಕೃಷ್ಣರಾಜ ಒಡೆಯರುಮೈಸೂರು ಸಂಸ್ಥಾನದ ಮಹಾರಾಜರಾಗಿದ್ದವರು. ಮೈಸೂರು ರಾಜ್ಯದ ಇತಿಹಾಸದಲ್ಲಿ ತುಂಬಾ ಕಷ್ಟಕರ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದವರು ಮುಮ್ಮಡಿ ಕೃಷ್ಣರಾಜ ಒಡೆಯರು. ಬ್ರಿಟಿಷರೊಡನೆ ೧೭೯೯ರ ಎರಡನೇ ಮೈಸೂರು ಯುದ್ಧದಲ್ಲಿ ಟಿಪ್ಪೂವಿನ ಮರಣಾನಂತರ, ಮೈಸೂರು ರಾಜ್ಯದ ಆಡಳಿತವನ್ನು ಪುನಃ ಮೈಸೂರು ಅರಸು ಮನೆತನಕ್ಕೆ ವಹಿಸಬೇಕೆಂಬ ಒಪ್ಪಂದವಾಯಿತು. ಅದಕ್ಕೆ ಆಂತರಿಕ ವಿರೋಧಗಳು ತುಂಬಾ ಬಲವಾಗಿದ್ದವು. ಮಹಾರಾಣಿ ಲಕ್ಷ್ಮಮ್ಮಣ್ಣಿಯವರ ದಕ್ಷ ಮತ್ತು ವಿಚಕ್ಷಣಾ ಮನೋಭಾವದಿಂದ ಒಪ್ಪಂದವು ಕೈಗೂಡಿತು. ಆಗ ಕೇವಲ ಐದು ವರ್ಷದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ ಪರವಾಗಿ, ಮಹಾರಾಣಿಯವರೂ ಮತ್ತು ದಿವಾನ್ ಪೂರ್ಣಯ್ಯನವರೂ ಆಡಳಿತ ನಡೆಸಬೇಕೆಂದು ಒಪ್ಪಂದವಾಯಿತು.

ಕಂಪೆನಿ ಸರಕಾರದ ಶರತ್ತುಗಳು : ಬ್ರಿಟಿಷರು ಒಪ್ಪಂದದಲ್ಲಿ ಆಂತರಿಕ ಆಡಳಿತವನ್ನು ಮಾತ್ರ ನಿರ್ವಹಿಸತಕ್ಕದ್ದೆಂದೂ; ಉಳಿದ ಎಲ್ಲಾ ಹೊರ ವ್ಯವಹಾರಗಳೂ ಈಸ್ಟ್ ಇಂಡಿಯ ಕಂಪನಿ ಸರ್ಕಾರದವೆಂದೂ ಷರತ್ತು ವಿಧಿಸಿದರು. ಮತ್ತು ವಾರ್ಷಿಕವಾಗಿ ಕಂಪನಿ ಸರ್ಕಾರಕ್ಕೆ ಏಳುಲಕ್ಷ ಪಗೋಡಾಗಳನ್ನು ಕಪ್ಪವಾಗಿ ಕೊಡಬೇಕೆಂದು ತೀರ್ಮಾನಿಸಲಾಯಿತು. ಒಪ್ಪಂದದ ಕಾಲದಲ್ಲಿ ಅರಮನೆಯ ಅಪಾರ ಐಶ್ವರ್ಯ ಬ್ರಿಟಿಷರ ಪಾಲಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ ವಿದ್ಯಾಭ್ಯಾಸ ಮತ್ತು ತರಬೇತಿಯ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಮಹಾರಾಣಿಯವರು ೧೮೧೦ ರಲ್ಲಿ ಮರಣಿಸಿದರು. ನಂತರ ಅಧಿಕಾರ ವಹಿಸಿಕೊಂಡ ಮುಮ್ಮಡಿ ಕೃಷ್ಣರಾಜ ಒಡೆಯರು ಹೆಚ್ಚುಕಾಲ ಅಧಿಕಾರ ನಡೆಸಲು ಬ್ರಿಟಿಷ್ ಆಡಳಿತ ಅವಕಾಶ ಕೊಡಲಿಲ್ಲ. ಸರಿಯಾಗಿ ಕಪ್ಪ ಕೊಡಲಿಲ್ಲವೆಂಬ ನೆಪದಿಂದ ಆಗಿನ ಗೌರ್ನರ್ ಜನರಲ್ ವಿಲಿಯಂ ಬೆಂಟಿಂಕ್, ಆಡಳಿತ ನಡೆಸಲು ಲುಷಿಂಗ್ಟನ್ ಕಬ್ಬನ್ ಎಂಬ ಅಧಿಕಾರಿಗಳನ್ನು ನೇಮಿಸಿದನು.

ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತ : ಅತ್ಯಂತ ಸೀಮಿತ ಅವಧಿಯಲ್ಲಿಯೇ ಮುಮ್ಮಡಿ ಕೃಷ್ಣರಾಜರ ಆಡಳಿತ ತುಂಬಾ ಜನಪರವಾಗಿತ್ತು. ಅವರ ಕಾಲದಲ್ಲಿಯೇ ಮೈಸೂರು ನಗರದಲ್ಲಿ ಪ್ರಥಮವಾಗಿ ಸಾರ್ವಜನಿಕ ಉಚಿತ ವೈದ್ಯಶಾಲೆಗಳು ಆರಂಭವಾದವು. ಆಂಗ್ಲ ವಿದ್ಯಾಭ್ಯಾಸಕ್ಕಾಗಿ ಶಾಲೆಗಳು ಆರಂಭವಾದವು. ಶಿವನಸಮುದ್ರದ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣವಾಯಿತು. ಮೈಸೂರು ನಗರದಲ್ಲಿ ಅನೇಕ ಹೊಸ ಬಡಾವಣೆಗಳು ತಲೆ ಎತ್ತಿದವು . ಸಾಹಿತ್ಯಕ್ಷೇತ್ರಕ್ಕೆ ಅವರ ಸೇವೆ ಅತ್ಯಂತ ಗಣನೀಯವಾಗಿತ್ತು. ಹೊಸಗನ್ನಡದ ಮೊದಲ ಗದ್ಯ ಗ್ರಂಥವೆಂದು ಮನ್ನಣೆಗೆ ಪಾತ್ರವಾಗಿರುವ 'ಮುದ್ರಾ ಮಂಜೂಷ' ಕೃತಿಯ ಕರ್ತೃ ಕೆಂಪುನಾರಾಯಣನು ಮುಮ್ಮಡಿ ಕೃಷ್ಣರಾಜರ ಆಶ್ರಿತನಾಗಿದ್ದನು. Italic text==ಗ್ರಂಥ ರಚನಾಕಾರ== ಈ ಎಲ್ಲ ಗ್ರಂಥಗಳ ಕರ್ತೃ ಮುಮ್ಮಡಿ ಕೃಷ್ಣ ರಾಜ ಒಡೆಯರೆಂಬ ಪ್ರತೀತಿ ಇದೆ.

'ತತ್ವನಿಧಿ',
'ಗಣಿತ ಸಂಗ್ರಹ',
'ಸೌಗಂಧಿಕಾ ಪರಿಣಯ',
'ಸೂರ್ಯ ಚಂದ್ರವಂಶಾವಳಿ',
'ಶ್ರೀ ಚಾಮುಂಡಿಕಾ ಲಘು ನಿಘಂಟು',
'ಕೃಷ್ಣ ಕಥಾ ಸಾರ ಸಂಗ್ರಹ',
'ಚತುರಂಗ ಸಾರ ಸರ್ವಸ್ವ,
'ದೇವತಾನಾಮ ಕುಸುಮ ಮಂಜರಿ',
'ದಶವಿಭಾಗ ಪದಕ',
'ಮಹಾ ಕೋಶ ಸುಧಾಕರ',
'ಸಂಖ್ಯರತ್ನ ಕೋಶ',
'ಸ್ವರ ಚೂಡಾಮಣಿ',


ನಾಲ್ವಡಿ ಕೃಷ್ಣರಾಜ ಒಡೆಯರು

ನಾಲ್ವಡಿ ಕೃಷ್ಣರಾಜ ಒಡೆಯರುನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ವಡೆಯರು ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ರವರೆಗೆ ನಡೆಯಿತು.

ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ , ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.

೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ಆಗ ದಿವಾನರಾಗಿದ್ದ ಸರ್. ಕೆ. ಶೇಷಾದ್ರಿ ಐಯರ್ ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ದರಾದರು, ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ ,ಮೈಸೂರು ಸಂಸ್ಥಾನಕ್ಕೆ ' ಮಾದರಿ ಮೈಸೂರು' ಎಂಬ ಕೀರ್ತಿ ಪ್ರಾಪ್ತವಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು. ಆದುದರಿಂದ ಅವರ ಕಾಲದಲ್ಲಿ , ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ 'ಪ್ರಜಾ ಪ್ರತಿನಿಧಿ ಸಭೆ'ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಅದಕ್ಕಾಗಿ ೧೯೨೩ರರಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದು, ಪ್ರಜಾ ಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆಯನ್ನಾಗಿ ಮಾರ್ಪಡಿಸಿದರು. ಇದು ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು. ಪ್ರಜಾ ಪ್ರತಿನಿಧಿ ಸಭೆಯು ವರ್ಷಕ್ಕೆ ಎರಡು ಬಾರಿ (೧ ಜೂನ್ - ಮಹಾರಾಜರ ವರ್ಧಂತಿ, ೨ ಅಕ್ಟೋಬರ್ - ದಸರಾ ಮಹೋತ್ಸವ ) ಸಮಾವೇಶಗೊಂಡು ಕಲಾಪಗಳನ್ನು ನಡೆಸುತ್ತಿತ್ತು ಅಲ್ಲಿ ವಾರ್ಷಿಕ ಆಯ ವ್ಯಯ ಪರಿಶೀಲನೆ,ಪ್ರಶ್ನೋತ್ತರಗಳು ,ಠರಾವುಗಳನ್ನು ಮಂಡಿಸುವುದು ಮುಂತಾದ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು .ಪ್ರತಿನಿಧಿ ಸಭೆಯಲ್ಲಿದ್ದ ೨೭೫ ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು .

ಇದರ ಜೊತೆಗೆ ೧೯೦೭ ರಲ್ಲಿ 'ನ್ಯಾಯ ವಿಧಾಯಕ' ಸಭೆಯನ್ನೂ ಸಹ ಸ್ಥಾಪಿಸಲಾಯಿತು.ಇದರ ಸದಸ್ಯರ ಸಂಖ್ಯೆ ೫೦ , ಇದರಲ್ಲಿ ಜನರಿಂದ ಆಯ್ಕೆಯಾದವರು ೨೨ ಸದಸ್ಯರು .ಮೇಲ್ಮನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ ,ಜೂನ್ ಮತ್ತು ಡಿಶಂಬರ್ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು .ಪ್ರಜಾ ಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನೂ ಸಹ ವಿಮರ್ಶಿಸುವ ಅಧಿಕಾರ ಆ ಸಭೆಗೆ ಇದ್ದಿತು .ಮುಖ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಆ ಸಭೆಯ ಅನುಮತಿ ಅಗತ್ಯವಾಗಿತ್ತು .ಆ ಸಭೆಗೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇದ್ದಿತು .

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ ,ಸ್ಥಳೀಯ ಸಂಸ್ಥೆಗಳನ್ನು ರಚಿಸಿ , ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟುದು .ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು .ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ ,ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು .

ಇವರ ಕಾಲದಲ್ಲಿ ೧)ಗ್ರಾಮ ನಿರ್ಮಲೀಕರಣ ೨) ವೈದ್ಯ ಸಹಾಯ ೩)ವಿದ್ಯಾ ಪ್ರಚಾರ ೪) ನೀರಿನ ಸೌಕರ್ಯ ೫) ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು .

ಹೊಸ ರೈಲು ದಾರಿಗಳ ನಿರ್ಮಾಣ

೧) ಮೈಸೂರು - ಅರಸೀಕೆರೆ ೨) ಬೆಂಗಳೂರು - ಚಿಕ್ಕಬಳ್ಳಾಪುರ ೩) ಚಿಕ್ಕಜಾಜೂರು - ಚಿತ್ರದುರ್ಗ ೪) ನಂಜನಗೂಡು - ಚಾಮರಾಜನಗರ ೫) ತರೀಕೆರೆ - ನರಸಿಂಹರಾಜಪುರ ೬)ಶಿವಮೊಗ್ಗ - ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು ೧೯೩೧ ರ ವೇಳೆಗೆ ಪೂರೈಸಲಾಯಿತು .

ನೀರಾವರಿ

೧೯೦೭ ರಲ್ಲಿ 'ವಾಣೀವಿಲಾಸ ಸಾಗರ' (ಮಾರಿ ಕಣಿವೆ) ಕಟ್ಟಲ್ಪಟ್ಟಿತು , ೧೯೧೧ ರಲ್ಲಿ ಆರಂಭವಾದ 'ಕೃಷ್ಣರಾಜ ಸಾಗರ' ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. ೧೯೦೦ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು , ಇದು ಭಾರತದ ಮೊದಲ ಜಲ ವಿದ್ಯುತ್ ಕೇಂದ್ರ .

ವಿದ್ಯಾಭ್ಯಾಸ

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು .ನಾಲ್ವಡಿ ಕೃಷ್ಣರಾಜರ ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದುದು. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ೨೭೦ ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು . ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು.

ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. ೧೯೦೬ ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.


ಜಯ ಚಾಮರಾಜ ಒಡೆಯರ್

ಜಯ ಚಾಮರಾಜ ಒಡೆಯರ್ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ನಿವೃತ್ತರ ಸ್ವರ್ಗ ಶ್ರೀಗಂಧದ ತವರು ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಮೈಸೂರು ಇಲ್ಲಿ ನಡೆಯುವ ದಸರಾದಿಂದ ವಿಶ್ವ ವಿಖ್ಯಾತಿಯಾಗಿದೆ. ಇವತ್ತು ಮೈಸೂರು ಹಲವು ರೀತಿಯಲ್ಲಿ ವಿಶ್ವದಲ್ಲಿ ಮೊದಲ ಸ್ಥಾನಪಡೆದಿದ್ದರೆ ಅದಕ್ಕೆ 1399 ರಲ್ಲಿ ಯದುರಾಯನಿಂದ ಆರಂಭಗೊಂಡು 1947ರ ತನಕ ಐದೂವರೆ ಶತಕಗಳ ಕಾಲ ಈ ನಾಡನ್ನು ವೈಭವದಿಂದ ಆಳಿದ ರಾಜರುಗಳ ಕೊಡುಗೆಯಿರುವುದನ್ನು ನಾವು ಅಲ್ಲಗಳೆಯುವಂತಿಲ್ಲ. ಪ್ರಜಾಪಾಲಕರಾಗಿ ಮೆರೆದ ಇಪ್ಪತ್ತೈದು ಯದುಕುಲದರಸರ ಪೈಕಿ ಶ್ರೀ ಜಯಚಾಮರಾಜ ಒಡೆಯರ್ರವರೇ ಕೊನೆಯವರು. ದಸರಾ ಸಂದರ್ಭ ಅವರು ಮೈಸೂರಿಗೆ ನೀಡಿದ ಕೊಡುಗೆಗಳನ್ನು ನಾವು ಸ್ಮರಿಸುವುದು ಅಗತ್ಯವಾಗಿದೆ.

ಹಾಗೆ ನೋಡಿದರೆ ಮೈಸೂರು ರಾಜವಂಶದ ಕೊನೆಯ ರಾಜರಾದ ಇವರೊಂದಿಗೆ ಒಂದು ರೀತಿಯಲ್ಲಿ ಸತ್ಯ, ಧರ್ಮಗಳ ಕಾಲವೂ ಜೊತೆಯಲ್ಲಿಯೇ ಕೊನೆಗೊಂಡಿತೆಂದರೆ ತಪ್ಪಾಗಲಾರದು. ಮೊದಲ ದೊರೆ ಯದುರಾಯನಿಂದ ಹಿಡಿದು ಎಲ್ಲಾ ದೊರೆಗಳೂ ತಮ್ಮದೇ ಆದ ಒಂದೊಂದು ವಿಶಿಷ್ಟ ವ್ಯಕ್ತಿತ್ವಗಳನ್ನು ಹೊಂದಿದ್ದು ತಮ್ಮ ನಿಶ್ಪೃಹ ಸೇವೆಯಿಂದ ತಾವೂ ಬೆಳಗಿ ನಾಡನ್ನೂ ಬೆಳಗಿಸಿದ್ದರು. ಪ್ರಜೆಗಳ ಕಷ್ಟ-ನಷ್ಟಗಳನ್ನು ಅರಿತು, ಅವರ ಸುಖ-ದುಃಖಗಳಲ್ಲಿ ಬೆರೆತು ಅವರ ಕಂಬನಿ ಒರೆಸುವಲ್ಲಿ ಮೈಸೂರು ಅರಸೊತ್ತಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲದಲ್ಲಿಯೇ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೆ ತಂದವರಿವರು. ಇವರು ಅಂದು ಸ್ಥಾಪಿಸಿದ ಪ್ರಜಾಪ್ರತಿನಿಧಿ ಸಭೆಯೇ ಮುಂದೆ ಸ್ವತಂತ್ರ ಭಾರತದ ರಾಜಕೀಯಕ್ಕೆ ನಾಂದಿಯಾಯಿತು. ಪ್ರಜೆಗಳ ಪಾಲಿಗೆ ಪ್ರತ್ಯಕ್ಷ ದೈವದಂತೆಯೇ ಇದ್ದ ಶ್ರೀ ಜಯಚಾಮರಾಜ ಒಡೆಯರ್ರವರ ಕಾಲವೂ ಅಷ್ಟೇ ಸುವರ್ಣಯುಗವಾಗಿತ್ತು.

ಮಹಾರಾಜರಾಗಷ್ಟೇ ಇರದೆ ಸ್ವತಃ ಸಾಹಿತಿಯೂ, ಕೀರ್ತನಕಾರರೂ, ಸಂಗೀತಗಾರರೂ, ವಾಗ್ಗೇಯಕಾರರೂ, ಸಂಸ್ಕೃತ ಪಂಡಿತರೂ, ಜ್ಯೋತಿಷ್ಯಶಾಸ್ತ್ರಜ್ಞರೂ, ಉಪನ್ಯಾಸಕರೂ, ಶಿಕ್ಷಣ ತಜ್ಞರೂ, ಛಾಯಾಚಿತ್ರಕಾರರೂ, ಸಂಶೋಧಕರೂ, ವೇದಾಂತಿಗಳೂ, ತತ್ವಜ್ಞಾನಿಗಳೂ, ದಾರ್ಶನಿಕರೂ ಆಗಿ ಒಟ್ಟಾರೆ ಮಹಾನ್ ಮಾನವತಾವಾದಿಯಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಹುಟ್ಟು ಈ ನಾಡಿನ ಭಾಗ್ಯವೆಂದೇ ಹೇಳಬಹುದು. ಮಹಾರಾಜ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸಹೋದರ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಹಾಗೂ ಯುವರಾಣಿ ಕೆಂಪು ಚೆಲುವಾಜಮ್ಮಣ್ಣಿಯವರ ಸುಪುತ್ರರಾಗಿ 1919 ರ ಜುಲೈ 18 ರಂದು ಶ್ರೀ ಜಯಚಾಮರಾಜ ಒಡೆಯರ್ ಜನಿಸಿದಾಗ ಬಂಡಿ ಬಂಡಿಗಳಲ್ಲಿ ಮೂಟೆಗಟ್ಟಲೆ ತುಂಬಿದ ಸಕ್ಕರೆ ನಾಡಿನ ತುಂಬಾ ಊರು ಊರಿಗೆ, ಕೇರಿ ಕೇರಿಗೆ ಹಂಚಲ್ಪಟ್ಟಿದ್ದನ್ನು ಈಗಲೂ ಕಣ್ಣಿಗೆ ಕಟ್ಟಿದಂತೆ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಒಡೆಯರ ಜನನ ಆಗ ಅಂಥ ಸಿಹಿ ಸಂಭ್ರಮವಾಗಿತ್ತು.

ಬಾಲ್ಯದಿಂದಲೇ ಓದಿನೊಡನೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಯೋಗ.... ಹೀಗೆ ಎಲ್ಲವನ್ನೂ ಕಲಿಯತೊಡಗಿದರು. ಯೋಗದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರಿಗೆ ವಿದ್ವಾನ್ ಕೃಷ್ಣಮಾಚಾರ್ಯರು ಯೋಗಾಸನದ ಗುರುಗಳಾಗಿದ್ದರು. ಹಾಗೆಯೇ ಸಂಗೀತ ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಯಲು ತಾಯಿ ಕೆಂಪು ಚೆಲುವಾಜಮ್ಮಣ್ಣಿ ಕಾರಣವಾದರೆ ಮಾನವೀಯ ಮೌಲ್ಯಗಳ ಮಾರ್ಗದರ್ಶನ ಅವರಿಗೆ ಅಜ್ಜಿ ವಾಣಿವಿಲಾಸ ಸನ್ನಿಧಾನದ ಕೆಂಪನಂಜಮ್ಮಣ್ಣಿಯವರಿಂದ ಬಂದ ಬಳುವಳಿಯಾಗಿತ್ತು. ರಾಜಪರಂಪರೆಯ ಪದ್ಧತಿಯಂತೆ ಅರಮನೆಯ ರಾಯಲ್ ಶಾಲೆಯಲ್ಲೇ ಎಸ್ಸೆಸ್ಸೆಲ್ಸಿ ತನಕ ಕಲಿತ ಜಯಚಾಮರಾಜ ಒಡೆಯರ್ ಇಂಗ್ಲೀಷ್, ಸಂಸ್ಕೃತದೊಂದಿಗೆ ಪ್ರೌಢ ವೇದಾಂತ ಗ್ರಂಥಗಳ ಜ್ಯೋತಿಷ್ಯಶಾಸ್ತ್ರದ ಅಭ್ಯಾಸವನ್ನೂ ನಡೆಸಿದ್ದರು. ಆ ನಂತರ ರಾಜಪುತ್ರರೆಂಬ ಗತ್ತು, ದವಲತ್ತು, ಗಾಂಭೀರ್ಯ, ದೊಡ್ಡಸ್ಥಿಕೆ ಇದಾವುದೂ ಇಲ್ಲದೆ ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಬೆರೆತು, ಕಲಿತು ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಸ್ಥಾಪಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದಿಂದಲೇ ಕನ್ನಡ, ಇಂಗ್ಲೀಷ್, ಇತಿಹಾಸ, ರಾಜ್ಯಶಾಸ್ತ್ರದೊಂದಿಗೆ 1938 ರಲ್ಲಿ ಐದು ಚಿನ್ನದ ಪದಕಗಳ ಜೊತೆ ಬಿ.ಎ. ಪದವಿ ಗಳಿಸಿದರು. ಇದಕ್ಕೆ ಪೂರಕವಾಗಿ ಅವರಿಗೆ ಗುರುಗಳಾದ ರಾಲೋ, ವಾಡಿಯಾ, ಸತ್ಯಗಿರಿನಾಥನ್ ಅವರುಗಳಿಂದ ಉತ್ತಮ ಶಿಕ್ಷಣ ದೊರಕಿತ್ತು.

ತಮ್ಮ 18 ನೆಯ ವಯಸ್ಸಿಗೆ 1938 ರಲ್ಲಿ ಸತ್ಯಪ್ರೇಮ ಕುಮಾರಿ ದೇವಿಯವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಯಚಾಮರಾಜ ಒಡೆಯರ್, ನಂತರದ ದಿನಗಳಲ್ಲಿ ತಮ್ಮ 21 ನೇ ವಯಸ್ಸಿಗೆ 1982 ರಲ್ಲಿ ತ್ರಿಪುರ ಸುಂದರಮ್ಮಣ್ಣಿಯವರೊಡನೆ ಎರಡನೇ ವಿವಾಹವಾದರು. ಹೀಗೆ ದ್ವಿಪತ್ನಿಯರನ್ನು ಹೊಂದಿದ್ದ ಅವರು ಸಾಂಸಾರಿಕ ಜೀವನದಲ್ಲಿ ಐವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಒಟ್ಟು ಆರು ಮಕ್ಕಳನ್ನು ಪಡೆದಿದ್ದರು. ಅವರುಗಳೆಂದರೆ ಗಾಯಿತ್ರಿದೇವಿ, ಮೀನಾಕ್ಷಿದೇವಿ, ಕಾಮಾಕ್ಷಿದೇವಿ, ವಿಶಾಲಾಕ್ಷಿದೇವಿ, ಇಂದ್ರಾಕ್ಷಿದೇವಿ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರು. 1940 ರಲ್ಲಿ ತಂದೆ ಕಂಠೀರವ ನರಸಿಂಹರಾಜ ಒಡೆಯರ್ ಮತ್ತು ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಧನಾನಂತರ 1940ರ ಸೆಪ್ಟೆಂಬರ್ 8ರಂದು 21 ವರ್ಷದ ಜಯಚಾಮರಾಜ ಒಡೆಯರ್ ಕರ್ನಾಟಕ ರತ್ನ ಸಿಂಹಾಸನಾಧೀಶರಾಗಿ ಪಟ್ಟಾಭಿಷಿಕ್ತರಾದರು. ಆ ಕಾಲಕ್ಕೆ 80 ಲಕ್ಷ ಮಹಾ ಪ್ರಜೆಗಳ ಕ್ಷೇಮಪಾಲನೆಯ ಜವಾಬ್ದಾರಿಯನ್ನು ಮಹಾಪ್ರಭುಗಳಾಗಿ ಅವರು ಹೊತ್ತಿದ್ದರು. ಆ ಕ್ಷಣದಿಂದ ಅವರು ನಾಡಪ್ರಭುವಾಗಿ ನಾಡಿನ ಸರ್ವತೋಮುಖ ಪ್ರಗತಿಗಾಗಿ ಅಹನರ್ಿಶಿ ದುಡಿಯಲು ಕಂಕಣ ಕಟ್ಟಿ ನಿಂತಿದ್ದರು. ದೊಡ್ಡಪ್ಪ ನಾಲ್ವಡಿಯವರನ್ನು ಮಾದರಿಯನ್ನಾಗಿ ಮಾಡಿಕೊಂಡಿದ್ದ ಅವರು ತಮ್ಮ ದೊಡ್ಡಪ್ಪನಂತೆಯೇ ಪ್ರಜೆಗಳು ಮೆಚ್ಚಿದ ಪ್ರಭುವಾಗಿ ಎಲ್ಲದರಲ್ಲೂ ಸೈ ಎನಿಸಿಕೊಂಡರು. ದೊಡ್ಡಪ್ಪನಷ್ಟು ಸುದೀರ್ಘಕಾಲ ಆಳ್ವಿಕೆ ನಡೆಸುವ ಅವಕಾಶ ಮತ್ತು ಅದೃಷ್ಟ ಇವರಿಗಿರಲಿಲ್ಲ. ಆದರೆ ಇದ್ದಷ್ಟು ಕಾಲ ಅಂದರೆ ಕೇವಲ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಇವರಿತ್ತ ಕೊಡುಗೆ ಅಪಾರ. ಅದರಲ್ಲೂ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಶಿಲ್ಪ, ಸಂಸ್ಕೃತಿ, ನಾಟಕ, ದೃಶ್ಯ... ಹೀಗೆ ಒಟ್ಟಾರೆ ಕನ್ನಡದ ಅಭಿವೃದ್ಧಿಗೆ ತಮ್ಮನ್ನೇ ಅರ್ಪಿಸಿಕೊಂಡಿದ್ದ ಇವರು ಪ್ರಜೆಗಳ ಕಣ್ಣಲ್ಲಿ ಕನ್ನಡ ಕಣ್ಮಣಿಯಾಗಿದ್ದರು.

ಜಯಚಾಮರಾಜ ಒಡೆಯರ್ ವರು ಸ್ವತಃ ಸಾಹಿತಿಯೂ ಆಗಿದ್ದರಿಂದ ಕವಿ, ಸಾಹಿತಿಗಳನ್ನು ಪ್ರೋತ್ಸಾಹಿಸಲೆಂದೇ ಜಯಚಾಮರಾಜ ಒಡೆಯರ್ ಅವರು ಜಯಚಾಮರಾಜೇಂದ್ರ ಗ್ರಂಥಮಾಲ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, ಸಂಸ್ಕೃತ ರತ್ನ ಹೆಚ್. ಗಂಗಾಧರಶಾಸ್ತ್ರಿಗಳಂತಹ ಅನೇಕ ಪಂಡಿತರಿಂದ ಋಗ್ವೇದದ ವೇದಭಾಗದ ಮೂವತ್ತೈದು ವಿಭಾಗವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಇಷ್ಟೇ ಅಲ್ಲದೆ ಸಂಸ್ಕೃತದ ಅನೇಕ ಉತ್ಕೃಷ್ಟ ಗ್ರಂಥಗಳನ್ನು ಮತ್ತು ಶ್ರೀ ಶಂಕರಾಚಾರ್ಯರ ಅನೇಕ ಸ್ತೋತ್ರಗಳನು ಅವರು ಕನ್ನಡಕ್ಕೆ ಅನುವಾದ ಮಾಡಿಸಿದ್ದಾರೆ. ಇನ್ನು ಸಂಗೀತದ ವಿಷಯದಲ್ಲಂತೂ ಜಯಚಾಮರಾಜ ಒಡೆಯರ್ ಹೆಸರು ವಿಶ್ವಪ್ರಸಿದ್ಧಿಯೇ ಸರಿ. ಜಗತ್ಪ್ರಸಿದ್ಧ ಸಂಗೀತರತ್ನ ಪಿಟೀಲು ಟಿ. ಚೌಡಯ್ಯ ಸೇರಿದಂತೆ ಸಂಗೀತ ದಿಗ್ಗಜಗಳಾದ ಚೆನ್ನಕೇಶವಯ್ಯ, ತಿಟ್ಟೆ ಕೃಷ್ಣ ಅಯ್ಯಂಗಾರ್, ಡಾ. ದೇವೇಂದ್ರಪ್ಪ, ಎಸ್.ಎನ್.ಮರಿಯಪ್ಪ, ಪಿಟೀಲು ಶಿವರುದ್ರಪ್ಪ, ಎಂ.ಎಸ್.ಚಂದ್ರಶೇಖರಯ್ಯ, ಸ್ವರಮೂರ್ತಿ, ಮೃದಂಗ ವೆಂಕಟೇಶ ದೇವರು, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಕೊಳಲು ದೇಶಿಕಾಚಾರ್ ಮುಂತಾದವರು ಇವರ ಆಸ್ಥಾನದಲ್ಲಿ ಬೆಳೆದು ಅರಳಿದ ಸಂಗೀತ ಪುಷ್ಪಗಳಾಗಿವೆ.

ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತಗಳೆರಡರಲ್ಲೂ ಪ್ರಭುತ್ವ ಸಾಧಿಸಿದ್ದ ಜಯಚಾಮರಾಜ ಒಡೆಯರ್ ಶ್ರೇಷ್ಟ ಪಿಯಾನೊ ವಾದಕರಾಗಿದ್ದರಷ್ಟೇ ಅಲ್ಲದೆ, ಪೈಪ್ ಆರ್ಗನ್ ನುಡಿಸುವುದರಲ್ಲಿ ನಿಸ್ಸೀಮರಾಗಿದ್ದರು. ಪಾಶ್ಚಾತ್ಯ ಸಂಗೀತದ ಘಟಾನುಘಟಿಗಳಾದ ವ್ಯಾಗ್ನರ್, ಮೆಹ್ಲರ್, ಬಾಬ್, ಬಿಥೋಮವನ್ ಮುಂತಾದವರ ಬಗ್ಗೆ ಒಲವು ಹೊಂದಿದ್ದ ಒಡೆಯರ್ ರವರು 1937 ರಲ್ಲಿ ಲಂಡನ್ನ ಗಿಲ್ಫ್ಹಾಲ್ ಸ್ಕೂಲ್ ಆಫ್ ಮ್ಯೂಸಿಕ್ನ ಲೈಸೆನ್ಸಿಯೇಟ್ ಪದವೀಧರರಾಗಿದ್ದು, 1945 ರಲ್ಲಿ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಲಂಡನ್ನ ಆನರರಿ ಫೆಲೋ ಪದವಿಗೆ ಪಾತ್ರರಾಗಿದ್ದರಲ್ಲದೆ, ಭಾರತದ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದ ಹೆಗ್ಗಳಿಕೆ ಇವರ ಹೆಸರಿನಲ್ಲಿದೆ. ಇವರ ಅಗಾಧವಾದ ಸಂಗೀತ ಪ್ರತಿಭೆಗೆ 1965 ರಲ್ಲಿ ಹಂಪೆಯಲ್ಲಿ ನಡೆದ ಪ್ರತಿಷ್ಠಿತ ಪುರಂದರದಾಸರ ಚತುರ್ಥ ಶತಮಾನೋತ್ಸವದ ಅಧ್ಯಕ್ಷತೆಯ ಗೌರವ ಕಿರೀಟ ಇವರ ಸಿರಿಮುಡಿಗೇರಿತ್ತು.

ನಾಟಕ ಕಲೆಗೆ ಉತ್ತೇಜನ ನೀಡಲೆಂದೇ ಶ್ರೀ ಜಯಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾವನ್ನು ಸ್ಥಾಪಿಸಿದ್ದ ಒಡೆಯರು ತನ್ಮೂಲಕ ಕಲಾ ಸೇವೆಗೂ ಹೆಚ್ಚಿನ ಮನ್ನಣೆ ನೀಡಿದ್ದರು. ಗುಬ್ಬಿ ಕಂಪನಿ, ಕೊಟ್ಟೂರು ಬಸಪ್ಪನವರ ಕಂಪನಿ, ಎಂ.ಸಿ. ಮಹದೇವಸ್ವಾಮಿಯವರ ಕನ್ನಡ ಥಿಯೇಟರ್, ಶ್ರೀ ಚಾಮುಂಡೇಶ್ವರಿ ಕಂಪನಿಗಳು ಸೇರಿದಂತೆ ನಾಡಿನ ಉತ್ತರ ಕರ್ನಾಟಕದ ಅನೇಕ ನಾಟಕ ಕಂಪನಿಗಳು ಇವರ ಕಾಲದಲ್ಲಿ ಉನ್ನತ ಸ್ಥಿತಿಯಲ್ಲಿದ್ದವು. ರಾಜನರ್ತಕಿ ನಾಟ್ಯಮಯೂರಿ ಜಟ್ಟಿ ತಾಯಮ್ಮನವರಂತಹ ಸುಪ್ರಸಿದ್ಧ ನೃತ್ಯಗಾರ್ತಿಯರು ಇವರ ಆಸ್ಥಾನದಲ್ಲಿದ್ದರು. ಶಿಲ್ಪ ಮತ್ತು ಚಿತ್ರಕಲೆಗೂ ಮಹತ್ತರ ಕಾಣಿಕೆಯನ್ನು ನೀಡಿರುವ ಜಯಚಾಮರಾಜ ಒಡೆಯರ್ ಅರಮನೆಯ ಕೋಟೆಯೊಳಗೆ ಮತ್ತು ಮೈಸೂರಿನ ರಾಮಾನುಜಾ ರಸ್ತೆಯಲ್ಲಿ ಹೊಯ್ಸಳ ಶೈಲಿಯಲ್ಲಿ ಅನೇಕ ಚೆಂದದ ದೇವಾಲಯಗಳನ್ನು ನಿರ್ಮಿಸಿದ್ದು ಇವುಗಳಲ್ಲಿ ಶ್ರೀ ಭುವನೇಶ್ವರಿ ದೇವಸ್ಥಾನ, ಶ್ರೀ ಕಾಮಕಾಮೇಶ್ವರಿ ದೇವಸ್ಥಾನ, ಶ್ರೀ ಗಾಯಿತ್ರಿ ದೇವಸ್ಥಾನಗಳು ಪ್ರಮುಖವಾಗಿವೆ. ಖ್ಯಾತ ಶಿಲ್ಪಿಗಳಾದ ಶಿಲ್ಪ ಸಿದ್ಧಾಂತಿ ಸಿದ್ದಲಿಂಗಸ್ವಾಮಿ, ಶಿಲ್ಪಕಲಾ ರತ್ನ ಅಪ್ಪಾಜಿಸ್ವಾಮಿ, ಶಿಲ್ಪಕಲಾ ನಿಪುಣ ನಾಗೇಂದ್ರ ಸ್ಥಪತಿ, ಕಶ್ಯಪ ಶಿಲ್ಪಿ ಬಸವಣ್ಣ ಮತ್ತು ಹೆಸರಾಂತ ಚಿತ್ರಕಲಾವಿದರಾದ ಸ್ಥಪತಿ ನಂಜುಂಡಸ್ವಾಮಿ, ವೈ.ನಾಗರಾಜು, ರಾಮನರಸಯ್ಯ, ಶಂಕರರಾಜು, ಎಸ್.ಎನ್.ಸ್ವಾಮಿ ಮುಂತಾದವರು ಒಡೆಯರ್ರವರ ಪ್ರೀತಿ ಪಾತ್ರ ಪ್ರತಿಭೆಗಳಾಗಿದ್ದರು.

ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ, ಸ್ಕೌಟ್ ಮಹಾರಾಜರೆನಿಸಿ 1942 ರಲ್ಲಿ ಕಾಶಿ ವಿಶ್ವವಿದ್ಯಾನಿಲಯದಿಂದ ಎಲ್.ಎಲ್.ಬಿ. ಪದವಿ, 1945 ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಜೆಸಿಎಸ್ಐ, 1958 ರಲ್ಲಿ ಜಿಸಿಬಿ ಗೌರವಗಳನ್ನು ಹಾಗೂ 1945 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಪದವಿಗೆ ಪಾತ್ರರಾಗಿ ವಿದ್ವತ್ತಿನ ಮೇರುಪರ್ವತವಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ರವರು ಉತ್ತಮ ವಾಗ್ಮಿಗಳೂ ಆಗಿದ್ದರು. 1947 ಆಗಸ್ಟ್ 15 ರಂದು ದೇಶ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯದ ಗಾಳಿ ಕುಡಿದಾಗ ಸಿಂಹಾಸನದಿಂದ ಕೆಳಗಿಳಿದ ಜಯಚಾಮರಾಜ ಒಡೆಯರ್, ಬದಲಾದ ವ್ಯವಸ್ಥೆಗೆ ಬಹುಬೇಗ ಹೊಂದಿಕೊಂಡರು.

ಸ್ವಾತಂತ್ರ್ಯ ನಂತರ ಭಾರತದ ಅದೆಷ್ಟೋ ಸಂಸ್ಥಾನಗಳ ಮಹಾರಾಜರು ಪ್ರಭುತ್ವವನ್ನು ತ್ಯಜಿಸಿದ್ದರು. ಆಗ ಮಹಾರಾಜರ ಜಂಬೂ ಸವಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕೂಡ ಜನತಾ ದಸರೆಯಾಗಿ ಮಾರ್ಪಾಡು ಹೊಂದಿತು. 1948 ರಿಂದ 1956 ರವರೆಗೆ ರಾಜ ಪ್ರಮುಖರಾಗಿದ್ದ ಒಡೆಯರು ನಂತರ ಏಕೀಕೃತ ಕರ್ನಾಟಕದ ಮೊದಲ ರಾಜ್ಯಪಾಲರಾಗಿ, ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾರ್ ರ ಸಮ್ಮುಖದಲ್ಲಿ 1956 ರ ನವೆಂಬರ್ 1 ರಂದು ಪ್ರಮಾಣವಚನ ಸ್ವೀಕರಿಸಿದರು. ಒಂದು ರೀತಿಯಲ್ಲಿ ಅವರ ಪ್ರಭುತ್ವ ಹೋದರೂ ಮತ್ತೊಂದು ರೀತಿಯಲ್ಲಿ ಅವರು ತಾವು ಬದುಕಿರುವ ತನಕವೂ ಪ್ರಭುಗಳಾಗಿಯೇ ಬದುಕಿದ್ದರು. ಯುಗಪುರುಷ ಜಯಚಾಮರಾಜ ಒಡೆಯರ್ ರವರು 1974 ರ ಸೆಪ್ಟೆಂಬರ್ 23 ರಂದು ಬೆಂಗಳೂರು ಅರಮನೆಯಲ್ಲಿ ಕೊನೆಯುಸಿರೆಳೆದಾಗ ಇಡೀ ವಿಶ್ವವೇ ಕಂಬನಿಗರೆದಿತ್ತು. ಕಾಕತಾಳೀಯವೆಂದರೆ ಇವರ ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ 1940 ರಲ್ಲಿ ಇದೇ ಬೆಂಗಳೂರು ಅರಮನೆಯಲ್ಲಿ ಪ್ರಾಣ ಬಿಟ್ಟಿದ್ದರು. ಇನ್ನೊಂದು ಆಶ್ಚರ್ಯಕರ ವಿಚಾರವೆಂದರೆ ಶಂಕರ ಭಗವತ್ಪಾದರ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟಿದ್ದ ಜಯಚಾಮರಾಜ ಒಡೆಯರ್ ನಿಧನರಾಗುವ ಒಂದೆರಡು ದಿನಗಳ ಮುಂಚೆ ಶೃಂಗೇರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಪವಿತ್ರ ತಾಣವಾದ ಶ್ರೀ ಶಂಕರಮಠವನ್ನೂ, ತಾಯಿ ಶೃಂಗೇರಿ ಶಾರದೆಯನ್ನೂ ದರ್ಶನ ಮಾಡಿ ಬಂದಿದ್ದರು.

ಬನ್ನೂರು ಕೆ. ರಾಜು


ಒಂದನೆಯ ಮೈಸೂರು ಯುದ್ಧ

ನಾಲ್ವಡಿ ಕೃಷ್ಣರಾಜ ಒಡೆಯರುಒಂದನೆಯ ಮೈಸೂರು ಯುದ್ಧ (೧೭೬೬-೧೭೬೯) ಮೈಸೂರು ರಾಜ್ಯ ಕ್ಕೂ ಬ್ರಿಟೀಷರಿಗೂ ನಡೆದ ಯುದ್ಧ. ಈ ಯುದ್ಧ ಸರಣಿಯಲ್ಲಿ ಮೊದಲನೆಯದು.

ಮೈಸೂರಿನ ಆಡಳಿತಾಧಿಕಾರಿ ಹೈದರಾಲಿಯ ಚಟುವಟಿಕೆಗಳನ್ನು ಮದರಾಸು ಪ್ರಾಂತದ ಬ್ರಿಟೀಷರು ಗಂಭೀರವಾಗಿ ಪರಿಗಣಿಸಿದರು. ೧೭೬೬ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮನೊಂದಿನ ಒಪ್ಪಂದ ಮಾಡಿಕೊಂಡು , ಅದರ ಪ್ರಕಾರ , ತಮ್ಮಿಬ್ಬರ ಸಮಾನ ಶತ್ರುವಾಗಿದ್ದ ಹೈದರಾಲಿಯ ವಿರುದ್ಧ ಬಳಸಲಿಕ್ಕಾಗಿ ಸೈನ್ಯವನ್ನು ಪೂರೈಸಿದರು. ಆದರೆ , ಈ ಒಪ್ಪಂದವಾದ ಸ್ವಲ್ಪ ಸಮಯದಲ್ಲಿಯೇ, ಹೈದರಾಲಿ ಮತ್ತು ನಿಜಾಮ ರಹಸ್ಯ ಒಪ್ಪಂದಕ್ಕೆ ಬಂದು , ಬ್ರಿಟೀಷರ ಕರ್ನಲ್ ಸ್ಮಿತ್ ನ ಸಣ್ಣ ಸೇನೆ ಯ ಮೇಲೆ ತಮ್ಮ ಒಕ್ಕೂಟದ ೫೦,೦೦೦ ಸಿಪಾಯಿಗಳು ಮತ್ತು ೧೦೦ ತುಪಾಕಿಗಳ ಸೇನೆಯನ್ನು ನುಗ್ಗಿಸಿದರು. ಸಂಖ್ಯೆಯಲ್ಲಿ ಸಣ್ಣದಿದ್ದರೂ, ಬ್ರಿಟೀಷ್ ಪಡೆಗಳು,ಶಿಸ್ತು ಮತ್ತು ಉತ್ತಮ ತರಬೇತಿಯಿಂದಾಗಿ, ಒಕ್ಕೂಟದ ಸೇನೆಯನ್ನು ಮೊದಲು ಚೆಂಗಮ್ ಎಂಬಲ್ಲಿಯೂ ( ಸೆಪ್ಟೆಂರ್‍ ೩, ೧೭೬೭) ಮತ್ತೆ , ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ತಿರುವಣ್ಣಾಮಲೈಯಲ್ಲಿಯೂ ಹಿಮ್ಮೆಟ್ಟಿಸಿದರು.

ಪಶ್ಚಿಮ ತೀರದ ತನ್ನ ನವೀನ ನೌಕಾಪಡೆ ಮತ್ತು ಕೋಟೆಗಳನ್ನು ಕಳೆದುಕೊಂಡ ನಂತರ ಹೈದರಾಲಿಯು ಸಂಧಾನಕ್ಕೆ ಬಂದನು. ಈ ಸಂಧಾನದ ಕೋರಿಕೆ ತಿರಸ್ಕೃತವಾಗಲು, ಹೈದರಾಲಿಯು ತನ್ನೆಲ್ಲ ಅಳಿದುಳಿದ ಸೈನ್ಯವನ್ನು ಒಗ್ಗೂಡಿಸಿ ಬ್ರಿಟೀಷರ ಮೇಲೇರಿ ಹೋದನು. ಕರ್ನಲ್ ಸ್ಮಿತ್ ಬೆಂಗಳೂರಿಗೆ ಹಾಕಿದ್ದ ಮುತ್ತಿಗೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದಲ್ಲದೆ, ತನ್ನ ಸೇನೆಯೊಡನೆ ಮದರಾಸು ನಗರದ ಐದು ಮೈಲಿಯಷ್ಟು ಸಮೀಪದವರೆಗೂ ಬಂದು ತಲುಪಿದನು. ಈ ಯುದ್ಧದ ಪರಿಣಾಮವಾಗಿ ಏಪ್ರಿಲ್ ೧೭೬೯ರಲ್ಲಿ , ಎರದೂ ಪಕ್ಷಗಳೂ ತಾವು ಆಕ್ರಮಿಸಿದ ಪ್ರದೇಶಗಳನ್ನು ವಾಪಸು ಮಾಡಬೇಕೆಂದು ಮತ್ತು ಯುದ್ಧಗಳಲ್ಲಿ ಪರಸ್ಪರರ ಸಹಾಯಕ್ಕೆ ಬರುವಂತೆಯೂ ಒಪ್ಪಂದವಾಯಿತು.


ಎರಡನೆಯ ಮೈಸೂರು ಯುದ್ಧ

ಎರಡನೆಯ ಮೈಸೂರು ಯುದ್ಧ (೧೭೮೦-೧೭೮೪) ಮೈಸೂರು ಸಂಸ್ಥಾನಕ್ಕೂ ಬ್ರಿಟಷರಿಗೂ ನಡೆದ ಯುದ್ಧದ ಸರಣಿಯಲ್ಲಿ ಎರಡನೆಯದು. ಅಮೆರಿಕದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಹೋರಾಟದ ಫಲವಾಗಿ ಬ್ರಿಟಷರು ಮತ್ತು ಫ್ರೆಂಚರ ನಡುವೆ ನಡೆದ ಕದನದ ಸುಳಿಯಲ್ಲಿ ಫ್ರೆಂಚರ ಸ್ನೇಹದಲ್ಲಿದ್ದ ಮೈಸ ೂರು ಕೂಡಾ ಸಿಕ್ಕಿತು.

ಆ ಕಾಲದಲ್ಲಿ ಮೈಸೂರನ್ನು ಆಳುತ್ತಿದ್ದವನು (ರಾಜಾ ಎಂಬ ಗೌರವನಾಮ ಇಲ್ಲದಿದ್ದರೂ) ಹೈದರ್‍ ಆಲಿ. ಹಿಂದೊಮ್ಮೆ ಮರಾಠರ ವಿರುದ್ಧದ ಯುದ್ಧದಲ್ಲಿ ಬ್ರಿಟಿಷರ ವಿಶ್ವಾಸಘಾತುಕತನವನ್ನು ಕಂಡು ಕಿಡಿಕಿಡಿಯಾಗಿದ್ದ ಹೈದರ್‍ ಆಲಿ ಬ್ರಿಟಿಷರೊಂದಿಗೆ ಸೇಡು ತೀರಿಸಿಕೊಳ್ಳಲು , ಫ್ರೆಂಚರ ಸಹಾಯಕ್ಕೆ ಒಮ್ಮನಸ್ಸಿನಿಂದ ಧುಮುಕಿದ. ೧೭೭೮ರಲ್ಲಿ ಬ್ರಿಟನ್ ಮೇಲೆ ಯುದ್ಧ ಸಾರಿದಾಗ, ಈಗಾಗಲೇ ಮದರಾಸಿನಲ್ಲಿ ಬಲವಾಗಿ ಬೇರುಬಿಟ್ಟಿದ್ದ ಬ್ರಿಟೀಷರು ,ಫ್ರೆಂಚರನ್ನು ಭಾರತದಿಂದ ಓಡಿಸುವ ಪಣ ತೊಟ್ಟರು. ಮಲಬಾರ್‍ ತೀರದ ಮಾಹೆಯನ್ನು ಗೆದ್ದುಕೊಂಡ ಬ್ರಿಟೀಷರು , ಹೈದರ ಆಶ್ರಿತನೊಬ್ಬನ ಕೆಲ ಭೂಭಾಗಗಳನ್ನೂ ಸ್ವಾಧೀನಕ್ಕೆ ತೆಗೆದುಕೊಂಡರು.

ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಹೈದರಾಲಿಯು , ಮರಾಠರು ತನ್ನಿಂದ ಕಿತ್ತುಕೊಂಡ ಪ್ರದೇಶಗಳನ್ನು ಮರುಪಡೆಯುವುದರಲ್ಲಿ ಯಶಸ್ವಿಯಾದನು. ಕೃಷ್ಣಾ ನದಿಯವರೆಗ ಹರಡಿದ್ದ ತನ್ನ ರಾಜ್ಯದಿಂದ , ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ರಾಮಗಳ ಮದ್ಯೆ , ಕಣಿವೆ, ಘಟ್ಟಗಳನ್ನು ಬಳಸಿಕೊಂಡು, ಮದರಾಸಿನಿಂದ ಕೇವಲ ೪೫ ಮೈಲಿ (೭೨ ಕಿ.ಮೀ) ದೂರದ ಕಾಂಜೀವರವನ್ನು ಒಂದಷ್ಟೂ ಪ್ರತಿರೋಧವಿಲ್ಲದೆ ತಲುಪಿದನು. ಮದರಾಸಿನ ಸೈಂಟ್ ಥಾಮಸ್ ಮೌಂಟಿನಲ್ಲಿ ೫೨೦೦ ಸೈನಿಕರೊಂದಿಗೆ ಬೀಡುಬಿಟ್ಟಿದ್ದ , ಸರ್‍ ಹೆಕ್ಟರ್‍ ಮನ್ರೋಗೆ ಬೆಂಕಿಯ ಜ್ವಾಲೆಗಳು ಕಾಣಿಸಿದ ನಂತರವೇ ಬ್ರಿಟೀಷರ ಪ್ರತಿಕ್ರಿಯೆಗೆ ಚಾಲನೆ ಸಿಕ್ಕಿತು. ಗುಂಟೂರಿಂದ ವಾಪಸು ಕರೆಸಿದ್ದ ಕರ್ನಲ್ ಬೈಲೀಯ ಕೈಕೆಳಗಿನ ಸಣ್ಣ ಸೈನ್ಯವನ್ನು ಹೈದರಾಲಿಯನ್ನು ಎದುರಿಸಲು ಕಳುಹಿಸಲಾಯಿತು. ಅಪ್ರತಿಮ ಧೈರ್ಯದಿಂದ ಕಾದಾಡಿದರೂ, ಬೈಲಿಯ ೨೮೦೦ ಜನರ ಸೇನೆ ಸಂಪೂರ್ಣ ಸೋಲಪ್ಪಿತು. ಆದಿನ ೧೭೮೦ರ ಸೆಪ್ಟೆಂಬರ್‍ ೧೦.

ಚಿತ್ತೂರಿನ ಪುನರ್‍ ಸ್ವಾಧೀನ

ಹೈದರಾಲಿಯ ಹಿರಿಯ ಮಗ , ಟಿಪ್ಪು ಸುಲ್ತಾನನು ೧೭೬೯-೭೨ರಲ್ಲಿ ನಡೆದ ಮೈಸೂರು ಮರಾಠಾ ಯುದ್ಧದಲ್ಲಿ ಅತೀವ ಆಸಕ್ತಿ ತೋರಿದ್ದನು. ೧೭೭೨ರಲ್ಲಿ ಪೇಶ್ವೆ ಮಾಧವರಾಯನು ಅಳಿದ ಮೇಲೆ, ಮರಾಠರು ಹೈದರನಿಂದ ಕಿತ್ತುಕೊಂಡಿದ್ದ ಪ್ರದೇಶಗಳನ್ನು ಮತ್ತೆ ವಾಪಸು ಗಳಿಸಿಕೊಳ್ಳಲು , ಮೈಸೂರಿನ ಉತ್ತರ ಭಾಗಕ್ಕೆ ಟಿಪ್ಪುವನ್ನು ಕಳುಹಿಸಲಾಯಿತು. ಎರಡನೆಯ ಮೈಸೂರು ಯುದ್ಧದ ಸಮಯದಲ್ಲಿಯಾಗಲೇ ಯುದ್ಧನೀತಿಯಲ್ಲೂ, ಮುತ್ಸದ್ದಿತನದಲ್ಲಿಯೂ ಟಿಪ್ಪು ಬಹಳಷ್ಟು ಪರಿಣತಿ ಸಂಪಾದಿಸಿದ್ದ. ೧೭೮೦ರ ಸೆಪ್ಟೆಂಬರಿನ ಪೊಳಿಲೂರಿನ ಯುದ್ಧದಲ್ಲಿ ಕರ್ನಲ್ ಬೈಲಿಯ ಸೈನ್ಯವನ್ನು ಬಗ್ಗುಬಡಿದನು. ಬ್ರಿಟೀಷರು ಭಾರತದಲ್ಲಿ ಎದುರಿಸಿದ ಮೊಟ್ಟಮೊದಲ ಮತ್ತು ಗಂಭೀರ ಸೋಲು ಇದಾಗಿತ್ತು. ಸಂಪೂರ್ಣ ಬ್ರಿಟೀಷ್ ಸೇನೆ ಹತವಾಯಿತು ಅಥವಾ ಸೆರೆ ಸಿಕ್ಕಿತು. ಇದ್ದ ೮೬ ಸೇನಾಧಿಕಾರಿಗಳಲ್ಲಿ ೩೬ ಜನ ಸತ್ತರು. ಸೆರೆ ಸಿಕ್ಕ ೩೮೨೦ ಸೈನಿಕರಲ್ಲಿ ೫೦೮ ಯೂರೋಪಿಯನ್ನರಿದ್ದರು. ಕರ್ನಲ್ ಬೈಲೀ ಸ್ವತಃ ಸೆರೆಸಿಕ್ಕಿದ. ಇದರಿಂದ ಬ್ರಿಟೀಷರಲ್ಲಿ ಉಂಟಾದ ತಲ್ಲಣದ ಪರಿಣಾಮವಾಗಿ ಮದರಾಸಿನ ಬ್ಲಾಕ್ ಟೌನ್ ಅರ್ಧಕ್ಕರ್ಧ ಖಾಲಿಯಾಯಿತು. ಭಾರತದ ಮೂರು ಮಹಾರಾಜರು, ಮೊಘಲ್ ಚಕ್ರವರ್ತಿ ಶಾ ಅಲಂ, ಔಂಧಿನ ನವಾಬ ಶುಜಾ ಉದ್ದೌಲಾ ಮತ್ತು ಬಂಗಾಳದ ನವಾಬ ಮೀರ್‍ ಕಾಸೀಮರನ್ನು ಒಂದೇ ಯುದ್ಧದಲ್ಲಿ ಸೋಲಿಸಿದ್ದ , ಬಕ್ಸಾರ್‍ ಯುದ್ಧದ ವೀರ, ಸರ್‍ ಹೆಕ್ಟರ್‍ ಮನ್ರೋ ಟಿಪ್ಪುವಿನ ಎದುರು ಬರಲಿಲ್ಲ. ತನ್ನೆಲ್ಲ ಫಿರಂಗಿಗಳನ್ನು ಕಾಂಜೀವರಂನ ಕೆರೆಯಲ್ಲಿ ಎಸೆದು ಆತ ಮದರಾಸು ಬಿಟ್ಟು ಪರಾರಿಯಾದ.

೧೭೮೨ರ ಫೆಬ್ರುವರಿ ೧೮ರಂದು ಟಿಪ್ಪು ಕರ್ನಲ್ ಬ್ರೈತ್ ವೈಟನನ್ನು ತಂಜಾವೂರಿನ ಹತ್ತಿರದ ಅನ್ನಗುಡಿ ಎಂಬಲ್ಲಿ ಸೋಲಿಸಿದ.ಬ್ರಿಟೀಷ್ ಸೈನ್ಯದಲ್ಲಿ ೧೦೦ ಯೂರೋಪಿಯನ್ನರೂ, ೩೦೦ಅಶ್ವಸೈನಿಕರೂ, ೧೪೦೦ ಕಾಲಾಳುಗಳೂ ಮತ್ತು ೧೪ ಇತರ ಶಸ್ತ್ರಾಸ್ತ್ರಗಳೂ ಇದ್ದವು. ಎಲ್ಲಾ ಸೈನಿಕರನ್ನು ಸೆರೆ ಹಿಡಿದ ಟಿಪ್ಪು, ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡ. ಆಗ ಸಾಮಾನ್ಯವಾಗಿದ್ದ, ಕೆಲವೇ ನೂರು ಯೂರೋಪಿಯನ್ ಸೈನಿಕರ ತುಕಡಿಗಳು ಹೈದರ್‍ ಮತ್ತು ಟಿಪ್ಪು ಬರುವವರೆಗೆ ಭಾರತಲ್ಲಿ ವ್ಯಾಪಕ ಹಾನಿಯೆಸಗಿದ್ದವು. ೧೭೮೧ರ ಡಿಸೆಂಬರಿನಲ್ಲಿ ಟಿಪ್ಪು ಬ್ರಿಟೀಷರಿಂದ ಚಿತ್ತೂರನ್ನು ಯಶಸ್ವಿಯಾಗಿ ಗೆದ್ದುಕೊಂಡ. ಈ ಎಲ್ಲ ಯುದ್ಧಗಳಿಂದ , ಡಿಸೆಂಬರಿ ೧೭೮೨ರಲ್ಲಿ ಹೈದರ್‍ ಕೊನೆಯುಸಿರೆಳೆಯುವ ವೇಳೆಗಾಗಲೇ ಟಿಪ್ಪು ಸಾಕಷ್ಟು ಯುದ್ಧಾನುಭವ ಗಳಿಸಿಕೊಂಡಿದ್ದ.

ಮಂಗಳೂರಿನ ಒಪ್ಪಂದ

ಮಂಗಳೂರಿನ ಒಪ್ಪಂದದೊಂದಿಗೆ ಎರಡನೆರಯ ಮೈಸೂರು ಯುದ್ಧ ಕೊನೆಗೊಂಡಿತು. ಭಾರತದ ಇತಿಹಾಸದಲ್ಲಿ ಇದೊಂದು ಮುಖ್ಯ ದಾಖಲೆ. ಭಾರತದ ವ್ಯಕ್ತಿಯೊಬ್ಬ ಬ್ರಿಟಿಷರಿಗೆ ಪಾಠ ಕಲಿಸಿ, ಅವರನ್ನು ದೀನ ಸ್ಥಿತಿಗೆ ತಂದದ್ದು ಇದೇ ಕೊನೆಯ ಬಾರಿಯಾಗಿತ್ತು. ವಾರನ್ ಹೇಸ್ಟಿಂಗ್ಸ್ ಇದನ್ನು ಅವಮಾನಕಾರೀ ಶಾಂತಿಸ್ಥಾಪನೆ ಎಂದು ಕರೆದು, ”ಬ್ರಿಟೀಷ್ ದೇಶದ ವಿಶ್ವಾಸ ಮತ್ತು ಗೌರವವನ್ನು ಭಂಗಿಸಿದ” ಮದರಾಸು ಸರಕಾರಕ್ಕೆ ತಕ್ಕ ಶಿಕ್ಷೆ ನೀಡುವಂತೆ ಬಬ್ರಿಟನ್ನಿನ ರಾಜನಿಗೂ, ಪಾರ್ಲಿಮೆಂಟಿಗೂ ಆಗ್ರಹಿಸಿದ. ಈ ಸೋಲಿನಿಂದ ಮುಖಭಂಗಿತರಾದ ಬ್ರಿಟೀಷರು ಅಂದಿನಿಂದಲೇ ಅಂದರೆ ೧೭೮೪ರ ಮಾರ್ಚ್ ೧೧ ರಿಂದ ಟಿಪ್ಪುವಿನ ಶಕ್ತಿಹರಣಕ್ಕೆ ತೀವ್ರ ಪ್ರಯತ್ನ ನಡೆಸಿದರು.

ಮಂಗಳೂರಿನ ಒಪ್ಪಂದ ಟಿಪ್ಪುವಿನ ಮುತ್ಸದ್ದಿನತನಕ್ಕೆ ಸಾಕ್ಷಿಯಾಗಿದೆ.ದೀರ್ಘ ಯುದ್ಧವನ್ನು ಯಶಸ್ವಿಯಾಗಿ ಮುಗಿಸಿದ್ದಷ್ಟೇ ಅಲ್ಲ, ಉತ್ತರದ ಪ್ರದೇಶಗಳ ಮೇಲೆ ಕಣ್ಣಿಟ್ಟಿದ್ದ ಮರಾಠರ ಪ್ರಯತ್ನಗಳನ್ನೂ ಅವನು ವಿಫಲಗೊಳಿಸಿದನು.


ಮೂರನೇ ಮೈಸೂರು ಯುದ್ಧ

ಮೂರನೇ ಮೈಸೂರು ಯುದ್ಧಯುದ್ಧದಲ್ಲಿ ಭಾಗಿಯಾದ ರಾಜ್ಯಗಳು
ಕಾಲ : ೧೭೮೯ - ೧೭೯೨
ಸ್ಥಳ : ದಕ್ಷಿಣ ಭಾರತ
ಪರಿಣಾಮ : ಮೈಸೂರು ಸಂಸ್ಥಾನದ ಸೋಲು. ಶ್ರೀರಂಗಪಟ್ಟಣದ ಒಪ್ಪಂದ.
ಪ್ರದೇಶಗಳ ಕೈಬದಲು : ಮೈಸೂರು ಸಂಸ್ಥಾನದ ಅರ್ಧ ಪ್ರದೇಶ ನಷ್ಟ
ಕದನಕಾರರು : ಮೈಸೂರು ಸಂಸ್ಥಾನ ಬ್ರಿಟಿಷ್ ಸಾಮ್ರಾಜ್ಯ
ಸೇನಾಧಿಪತಿಗಳು : ಟಿಪ್ಪು ಸುಲ್ತಾನ

ಮೂರನೆಯ ಮೈಸೂರು ಯುದ್ಧ (೧೭೮೯-೧೭೯೨) ಮೈಸೂರು ರಾಜ್ಯಕ್ಕೂ ಬ್ರಿಟಿಷರಿಗೂ ನಡೆದ ಯುದ್ಧ. ನಾಲ್ಕು ಬಾರಿ ನಡೆದ ಯುದ್ಧ ಸರಣಿಯಲ್ಲಿ ಇದು ಮೂರನೆಯದು.

ಫ್ರೆಂಚರೊಂದಿಗೆ ಮೈತ್ರಿಯಿದ್ದ ಮೈಸೂರಿನ ರಾಜ ಟಿಪ್ಪು ಸುಲ್ತಾನನು ಬ್ರಿಟಿಷ್ ಅಧೀನದಲ್ಲಿದ್ದ ಟ್ರಾವಂಕೂರಿನ ಮೇಲೆ ೧೭೮೯ರಲ್ಲಿ ದಂಡೆತ್ತಿ ಹೋದನು. ಆಗ ಪ್ರಾರಂಭವಾದ ಯುದ್ಧ ಮುಂದಿನ ಮೂರು ವರ್ಷಗಳವರೆಗೆ ಮುಂದುವರೆದು ಟಿಪ್ಪೂ ಸುಲ್ತಾನನ ಪರಾಭವದೊಂದಿಗೆ ಪರ್ಯವಸಾನಗೊಂಡಿತು. ತಮ್ಮದೇ ದೇಶದ ಫ್ರೆಂಚ್ ಕ್ರಾಂತಿಯನ್ನು ಎದುರಿಸುವುದರಲ್ಲಿ ಮಗ್ನರಾದ ಫ್ರೆಂಚರು, ಬ್ರಿಟಿಷರ ನೌಕಾದಳದಿಂದಲೂ ಹಿಮ್ಮೆಟ್ಟಿಸಲ್ಪಟ್ಟುದರಿಂದ, ಟಿಪ್ಪು ಸುಲ್ತಾನನ ನಿರೀಕ್ಷೆಯಂತೆ ಬೆಂಬಲ ನೀಡಲಿಲ್ಲ.

ಟಿಪ್ಪು ಸುಲ್ತಾನ ರಾಕೆಟ್ಟುಗಳ ಪಡೆಯಿಂದ ಧಾಳಿ ಮಾಡಿದ್ದು ಈ ಯುದ್ಧದ ಹೆಗ್ಗಳಿಕೆ. ಈ ಧಾಳಿಯ ಪರಿಣಾಮ ನೋಡಿ ಮಾರುಹೋದ ಬ್ರಿಟಿಷ್ ವಿಜ್ಞಾನಿ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್ ರಾಕೆಟುಗಳನ್ನು ಸಂಶೋಧಿಸಿದನು.

ಈ ಯುದ್ಧದ ಪರಿಣಾಮವಾಗಿ ಟಿಪ್ಪುವು ತನ್ನ ರಾಜ್ಯದ ಕೆಲ ಭಾಗಗಳನ್ನು ಬ್ರಿಟಿಷರ ಬೆಂಬಲಿಗರೋ, ಏಜಂಟರೋ ಆಗಿದ್ದ ಮರಾಠರು, ಹೈದರಾಬಾದಿನ ನಿಜಾಮ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳವರಿಗೆ ಹಂಚಿಕೊಡಬೇಕಾಗಿ ಬಂದು , ಇದರಿಂದ ಮೈಸೂರು ರಾಜ್ಯದ ವಿಸ್ತೀರ್ಣ ತೀವ್ರವಾಗಿ ಕುಸಿಯಿತು. ಮಲಬಾರ್‍, ಸೇಲಂ, ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಹೋದವು. ಈ ಯುದ್ಧದ ಕೊನೆಯಲ್ಲಿ ಶ್ರೀರಂಗಪಟ್ಟಣದ ಒಪ್ಪಂದವಾಗಿ, ಅದರ ಪ್ರಕಾರ ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದ್ದಷ್ಟೇ ಅಲ್ಲದೇ, ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಗಿ ಬಂದಿತು.


ನಾಲ್ಕನೆಯ ಮೈಸೂರು ಯುದ್ಧ

ನಾಲ್ಕನೆಯ ಮೈಸೂರು ಯುದ್ಧವು (೧೭೯೮ - ೧೭೯೯) ಬ್ರಿಟೀಶರಿಗೂ ಮೈಸೂರು ರಾಜ್ಯಕ್ಕೂ ನಡೆದ ಯುದ್ಧ ಸರಣಿಯಲ್ಲಿ ನಾಲ್ಕನೆಯ ಹಾಗೂ ಕಡೆಯ ಯುದ್ಧ. ಆಗಿನ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಪದವಿಯು ಲಾರ್ಡ್ ಕಾರ್ನವಾಲೀಸನಿಂದ ಜನರಲ್ ಹ್ಯಾರಿಸನಿಗೆ ಹಸ್ತಾಂತರ ಗೊಂಡಿತ್ತು.

೧೭೯೮ರಲ್ಲಿ ನೆಪೋಲಿಯನ್ , ಭಾರತವನ್ನು ಹೆದರಿಸುವ ಉದ್ದೇಶದಿಂದ , ಈಜಿಪ್ಟಿನಲ್ಲಿ ಬಂದಿಳಿದ. ಈ ಉದ್ದೇಶ ಸಾಧನೆಗೆ , ಫ್ರಾನ್ಸಿನ ಮಿತ್ರನಾಗಿದ್ದ , ಮೈಸೂರಿನ ದೊರೆ ಟಿಪ್ಪು ಸುಲ್ತಾನ ಮುಖ್ಯವಾಗಿದ್ದ.

ಹೊರಾಷಿಯೋ ನೆಲ್ಸನ್ನನು ನೆಪೋಲಿಯನ್ನನನ್ನು ನೈಲ್ ಯುದ್ಧದಲ್ಲಿ ಸೋಲಿಸಿ, ಈ ಆಸೆಯನ್ನು ಭಂಗಗೊಳಿಸಿದರೂ, ಮೂರು ಸೇನೆಗಳು ( ಒಂದು ಬಾಂಬೆ, ಎರಡು ಬ್ರಿಟೀಶ್ ) ಅಷ್ಟಕ್ಕೆ ನಿಲ್ಲದೆ ಮುನ್ನುಗ್ಗಿ ೧೭೯೯ರಲ್ಲಿ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದವು. ಮೇ ನಾಲ್ಕರಂದು ಈ ಸೇನೆಗಳು ಕೋಟೆಯ ಭಾಗವೊಂದನ್ನು ಭಗ್ನಮಾಡಿ , ಒಳನುಗ್ಗತೊಡಗಿದರು. ಅಲ್ಲಿಗೆ ಧಾವಿಸಿದ ಟಿಪ್ಪು ಸುಲ್ತಾನ ಗುಂಡೇಟಿನಿಂದ ಅಸುನೀಗಿದ. ಈ ಕಾರ್ಯದಲ್ಲಿ ಟಿಪ್ಪುವಿನ ಸೇನಾಧಿಕಾರಿ ಮೀರ್ ಸಾದಕ್ ಎಂಬಾತ , ಬ್ರಿಟೀಷರೊಂದಿಗೆ ಶಾಮೀಲಾಗಿ , ಟಿಪ್ಪುವಿಗೆ ಎರಡು ಬಗೆದನು. ಯುದ್ಧದ ತೀವ್ರವಾಗಿದ್ದ ಸಮಯದಲ್ಲಿ ಮೀರ್ ಸಾದಕನು , ತನ್ನ ಸೇನಾ ತುಕಡಿಯನ್ನು ಸಂಬಳ ಪಡೆದುಕೊಳ್ಳಲು ಕಳುಹಿಸಿ, ಆ ಮೂಲಕ , ಬ್ರಿಟೀಷರು ಗೋಡೆ ಒಡೆದು ಒಳಬರಲು ಅನುವುಮಾಡಿಕೊಟ್ಟನು. ಅಷ್ಟೇ ಅಲ್ಲ, ನೆಲಮಾಳಿಗೆಯಲ್ಲಿ ಶೇಖರಿಸಿದ್ದ ಮದ್ದುಗುಂಡುಗಳ ಮೇಲೆ ನೀರು ಹೊಯ್ದು, ಅವು ನಿರುಪಯುಕ್ತವಾಗುವಂತೆ ಮಾಡಿದನು.

ಈ ಯುದ್ಧದಲ್ಲಿ ಟಿಪ್ಪು ಸುಲ್ತಾನನು ರಾಕೆಟ್ಟುಗಳ ಉಪಯೋಗ ಮಾಡಿದ್ದು ಗಮನಾರ್ಹವಾಗಿತ್ತು. ಮೂರನೆಯ ಮತ್ತು ನಾಲ್ಕನೆಯ ಮೈಸೂರು ಯುದ್ಧಗಳಲ್ಲಿ ಈ ರಾಕೆಟ್ಟುಗಳ ಪರಿಣಾಮದಿಂದ ಪ್ರಭಾವಿತನಾದ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್ ರಾಕೆಟ್ಟುಗಳನ್ನು ಸಂಶೋಧಿಸಿದನು.

ಈ ಯುದ್ಧದ ಪರಿಣಾಮವಾಗಿ ಮೈಸೂರು ಬ್ರಿಟೀಷರ ವಶಕ್ಕೆ ಬಂದಿತು. ವೊಡೆಯರ್ ವಂಶಕ್ಕೆ ಮರಳಿ ಅಧಿಕಾರ ದೊರೆತು, ಅವರಿಗೆ ಸಲಹಾಕಾರರಾಗಿ ಬ್ರಿಟೀಷ್ ಕಮೀಷನರು ನೇಮಿಸಲ್ಪಟ್ಟರು. ಟಿಪ್ಪುವಿನ ಎಳೆಯ ಮಗ ಮತ್ತು ಉತ್ತರಾಧಿಕಾರಿ ಫತೇ ಆಲಿಯನ್ನು ಗಡೀಪಾರು ಮಾಡಲಾಯಿತು. ಮೈಸೂರು ರಾಜ್ಯವು ಬ್ರಿಟೀಷ್ ಅಧೀನ ಸಂಸ್ಥಾನವಾಯಿತು. ಕೊಯಮತ್ತೂರು , ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಬ್ರಿಟೀಷ್ ಭಾರತದ ಭಾಗವಾದವು.