Jootoor Designs

Arrow Up

Arrow Down

  

ಅರ್ಜುನ ಸಾ. ನಾಕೋಡ್

ಅರ್ಜುನ ಸಾ. ನಾಕೋಡ್ಹಲವಾರು ಜನ ಸಾಹಿತಿಗಳನ್ನು ಕೊಟ್ಟ ಬೆಟಗೇರಿಯೇ ಅರ್ಜುನ ಸಾ. ನಾಕೋಡರ ಹುಟ್ಟಿದೂರು. ತಂದೆ ವೆಂಕೂಸಾ, ತಾಯಿ ನಾಗೂಬಾಯಿ. ತಂದೆಗೆ ನೇಕಾರಿಕೆಯ ಉದ್ಯೋಗದ ಜೊತೆಗೆ ಶಿವಣ್ಣ ಮಾನ್ವಿಯವರ ಅಂಗಡಿಯಲ್ಲಿ ಗುಮಾಸ್ತೆ ಕೆಲಸ. ಮಕ್ಕಳು ಶಾಲೆ ಕಲಿತು ಒಳ್ಳೆಯ ಉದ್ಯೋಗ ಮಾಡಬೇಕೆಂಬ ಆಸೆ. ಬಡತನದ ಬಾಳು. ಮನೆಗೆ ನೆಯ್ಗೆ ಕೆಲಸಕ್ಕೆ ಬರುತ್ತಿದ್ದ ಚಿಂತಾಮಣಿ ಸಾ ಎನ್ನುವವರಿಂದ ಕಲಿತ ಜಾನಪದ ಗೀತೆಗಳು. ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಹಾಡಿದಾಗ ಅತಿಥಿಗಳಾಗಿ ಬಂದಿದ್ದ ಪಂಚಾಕ್ಷರಿ ಗವಾಯಿಗಳಿಂದ ಅರ್ಜುನ ಸಾ. ನಾಕೋಡರಿಗೆ ತಮ್ಮ ಆಶ್ರಮದಲ್ಲಿ ಸಂಗೀತ ಕಲಿಯಲು ಕೊಟ್ಟ ಕರೆ. ಸಂಗೀತ ಕಲಿಯಲು ವೀರೇಶ್ವರ ಪುಣ್ಯಾಶ್ರಮಕ್ಕೆ ಪಯಣ. ಸಂಗೀತ ಶಿಕ್ಷಣ ಪ್ರಾರಂಭ.

ಪಂ. ಪುಟ್ಟರಾಜ ಗವಾಯಿಗಳ ಶಿಷ್ಯತ್ವ ಪಡೆದು ಗ್ವಾಲಿಯರ್ ಘರಾಣೆಯ ಅನೇಕ ರಾಗಗಳ ಸಾಕ್ಷತ್ಕಾರ. ಇವರ ಜೊತೆಯಲ್ಲಿ ಕಲಿತವರೆಲ್ಲರೂ ಪ್ರತಿಭಾನ್ವಿತರೇ, ಶಿವಮೂರ್ತಿ ಸ್ವಾಮಿ ದೇವಗಿರಿ, ಶೇಷಾದ್ರಿ ಗವಾಯಿಗಳು, ದೊಡ್ಡ ಬಸವಾಚಾರ್ಯ ಜಾಲಿಬೆಂಚಿ, ಪಂಚಯ್ಯಸ್ವಾಮಿ ಮತ್ತಿಗಟ್ಟಿ, ಮರಿಯಪ್ಪರೋಣ, ಮುರುಡಯ್ಯ, ಸಿದ್ಧರಾಮ ಜಂಬಲದಿನ್ನಿ, ಬಸವರಾಜ ತಾಳೆಗೇರಿ ಮುಂತಾದವರು.

ಪಂಚಾಕ್ಷರಿ ಗವಾಯಿಗಳು ಪ್ರಾರಂಭಿಸಿದ ‘ಶ್ರೀ ಕುಮಾರೇಶ್ವರ ನಾಟ್ಯ ಸಂಘ’ದಲ್ಲಿ ಅಭಿನಯದೊಂದಿಗೆ ಹಾಡುಗಾರರಾಗಿ, ನಟರಾಗಿ, ಕಲಾಪ್ರಪಂಚ ಪ್ರವೇಶ. ಸ್ತ್ರೀ ಪಾತ್ರಗಳನ್ನು ಪುರುಷರೇ ಮಾಡಬೇಕಿದ್ದ ಅಂದಿನ ಸ್ಥಿತಿಯಲ್ಲಿ ಸೀರೆಯುಟ್ಟು ಅರ್ಜುನ ಸಾರವರು ವಹಿಸಿದ ಸ್ತ್ರೀಪಾತ್ರ. ತಂದೆಯವರು ಮನೆಮಾರಿ ಪ್ರಾರಂಭಿಸಿದ ಶ್ರೀ ಜಗದಾಂಬ ನಾಟಕ ಮಂಡಲಿ. ಮುಂದೆ ವಸಂತ ನಾಟ್ಯ ಕಲಾಸಂಘ ಎಂದು ಪಡೆದ ಪ್ರಸಿದ್ಧಿ. ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರಾಗಿ ಆಯ್ಕೆ. ಆಕಾಶವಾಣಿಯಲ್ಲಿ ಹಾಡಿದ್ದಲ್ಲದೆ ಹಿಂದೂಸ್ತಾನಿ ಸಂಗೀತದ ಕಂಪನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ದೆಹಲಿ, ಕಲ್ಕತ್ತ, ನಾಗಪುರ, ಮುಂಬೈ, ಲಖನೌ, ಇಂದೋರ್, ಮದರಾಸ್, ಭೂಪಾಲ್ ಮುಂತಾದ ಕಡೆಗಳಲ್ಲಿ ಕಚೇರಿ ನಡೆಸಿ ಜಯಭೇರಿ. ಹಲವಾರು ಶಿಷ್ಯರ ತಯಾರಿ.

ಗಳಿಸಿದ ಅಪಾರ ಜನ ಪ್ರಿಯತೆಯ ಜೊತೆಗೆ ಸಂದ ಬಿರುದುಗಳು ಹಲವಾರು. ಕರ್ನಾಟಕ ಸಂಗೀತ ನಾಟಕ ಅಕಾಡಮಿ ‘ಸಂಗೀತ ಕಲಾತಿಲಕ’, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇಳಕಲ್ ಮಹಂತೇಶ ಮಠದ ಸಂಗೀತ ಸುಧಾಕರ, ಪಂಚಾಕ್ಷರಿ ಗವಾಯಿ ಶತಮಾನೋತ್ಸವ ಸಂದರ್ಭದ ‘ಗಾನ ಶಾರ್ದೂಲ’ ಮುಂತಾದ ಗೌರವಗಳು.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌