Jootoor Designs

Arrow Up

Arrow Down

  

ಅರವಿಂದ ನಾಡಕರ್ಣಿ

ಅರವಿಂದ ನಾಡಕರ್ಣಿದೂರದ ಮುಂಬಯಿಯಲ್ಲಿದ್ದರೂ ಕಾವ್ಯಾಸಕ್ತರ ಮನಸೆಳೆದ ನಾಡಕರ್ಣಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ೧೯೩೧ರ ಜನವರಿ ೧ರಂದು. ತಂದೆ ಶಂಕರ ದತ್ತಾತ್ರೇಯ ನಾಡಕರ್ಣಿ, ತಾಯಿ ಉಮಾಬಾಯಿ (ಭವಾನಿ), ಪ್ರಾರಂಭಿಕ ಶಿಕ್ಷಣ ಹಾಗೂ ಬಾಲ್ಯ ಕಳೆದದ್ದು ಹನೇಹಳ್ಳಿ ಹಾಗೂ ಬಂಕಿಕೊಡ್ಲು ಹಳ್ಳಿಗಳಲ್ಲಿ. ಮಾಧ್ಯಮಿಕ ಶಾಲೆಯಲ್ಲಿ ಗೌರೀಶ ಕಾಯ್ಕಿಣಿ, ಸು.ರಂ.ಎಕ್ಕುಂಡಿ ಮುಂತಾದವರ ಸಂಪರ್ಕದಿಂದ ಕವಿತೆ ಬರೆಯುವುದರ ಬಗ್ಗೆ ಮೂಡಿದ ಒಲವು.

ಬಿ.ಎಸ್ಸಿ ಪದವಿ ಪಡೆದದ್ದು ಮುಂಬಯಿಯ ರೂಯಿಯಾ ಕಾಲೇಜನಿಂದ. ಕೊಲ್ಲಾಪುರದ ಶಹಾಜೀ ಲಾ ಕಾಲೇಜಿನಿಂದ ಎಲ್‌.ಎಲ್‌ .ಬಿ ಪದವಿ. ಪುಣೆಯಲ್ಲಿದ್ದಾಗ ವಿ.ಕೃ. ಗೋಕಾಕ್‌, ರಂ.ಶ್ರೀ. ಮುಗಳಿಯವರ ಸಂಪರ್ಕದಿಂದ ಕವಿತೆಗಳ ರಚನೆ. ಜಯಂತಿ, ಜಯಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟಿತ.

ಉದ್ಯೋಗಿಯಾಗಿ ಸೇರಿದ್ದು ಮುಂಬಯಿಯ ಇನ್‌ಕಮ್‌ಟಾಕ್ಸ್‌ ಕಚೇರಿಯಲ್ಲಿ ಗುಮಾಸ್ತರಾಗಿ. ಕಚೇರಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗಳಿಸಿದ್ದು ಇನ್ ಸ್ಪೆಕ್ಟರ್ ಹುದ್ದೆ. ಈ ನೌಕರಿಯೂ ಬೇಡವೆನಿಸಿ ಸಲಹೆಗಾರರಾಗಿ ದುಡಿದು ನಿವೃತ್ತಿ.

ಮುಂಬಯಿಯ ಕನ್ನಡ ಸಂಘಗಳೊಡನೆ ನಿಕಟ ಸಂಪರ್ಕ. ಮಾತುಂಗ (ಪೂರ್ವ)ದಲ್ಲಿ ಪ್ರಾರಂಭಿಸಿದ ಕನ್ನಡ ಸಂಘದ ಕಾರ್ಯದರ್ಶಿಯಾಗಿ ರೂಪಿಸಿದ ಹಲವಾರು ಕಾರ್ಯಕ್ರಮಗಳು. ‘ಸಾಹಿತ್ಯ ಸಂಧ್ಯೆ’ ಕಾರ್ಯಕ್ರಮದಡಿ ಕನ್ನಡ ಮತ್ತು ಮರಾಠಿ ಕವಿಗಳನ್ನು ಒಂದೇ ವೇದಿಕೆಗೆ ತಂದು ಕವಿತಾ ವಾಚನ ನಡೆಸಿ, ಪರಸ್ಪರ ಅನುವಾದದ ಕಾರ್ಯ ಕೈಗೊಂಡು ಎಲ್ಲರ ಮೆಚ್ಚುಗೆ ಪಡೆದ ಕಾರ್ಯಕ್ರಮ. ‘ಸೃಜನ ವೇದಿ’ ಚತುರ್ಮಾಸ ಪತ್ರಿಕೆ ಪ್ರಾರಂಭಿಸಿ ೪ ವರ್ಷಗಳ ಕಾಲ ಹೊತ್ತ ಸಂಪಾದಕರ ಜವಾಬ್ದಾರಿ. ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಲ್ಲದೆ, ಮುಂಬಯಿಯ ಆಕಾಶವಾಣಿ ಕೇಂದ್ರದಿಂದ ಹಲವಾರು ರೂಪಕಗಳು ಪ್ರಸಾರ.

೧೯೯೨ರಲ್ಲಿ ಸಂಸ್ಕೃತ ಅಧ್ಯಯನದಲ್ಲಿ ಆಸಕ್ತರಾಗಿ ಮುಂಬಯಿ ವಿ.ವಿ.ದಿಂದ ಪ್ರಥಮ ರ್ಯಾಂಕ್‌ನಲ್ಲಿ ಡಿಪ್ಲೊಮ ಪಡೆದುದಲ್ಲದೆ ಎಂ.ಎ. ಪದವಿಯನ್ನು ಮೊದಲ ದರ್ಜೆಯಲ್ಲಿ ಗಳಿಸಿದರು .

ಇವರು ಬರೆದ ಹಲವಾರು ಕವಿತೆಗಳು ಪತ್ರಿಕೆಗಳಲ್ಲಿ ಬೆಳಕು ಕಂಡ ನಂತರ ‘ಕಾವ್ಯಾರ್ಪಣ’, ‘ಮಾಯಾವಿ’, ‘ಜರಾಸಂಧ’, ‘ನಾ ಭಾರತೀ ಕುಮಾರ’, ‘ನಗರಾಯಣ’, ‘ಆತ್ಮಭಾರತ’, ‘ಅಜ್ಞಾತ’, ‘ಜಂಕ್ಷನ್‌ ಕವಿತೆಗಳು’, ‘ಸಲೂನಿನಲ್ಲಿ ಹುಡುಗ’ ಮುಂತಾದ ಹತ್ತು ಕವನ ಸಂಕಲನಗಳಲ್ಲಿ ಸೇರಿವೆ. ಇವರು ಬರೆದ ವೈಚಾರಿಕ ಲೇಖನಗಳು ‘ಅಹತ’ ಎಂಬ ಸಂಗ್ರಹದಲ್ಲಿ ಪ್ರಕಟಗೊಂಡಿದೆ.

ಭಟ್ಕಳದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಸಮ್ಮೇಳದ ಅಧ್ಯಕ್ಷತೆ, ಶಂಬಾ ಜೋಶಿಯವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ೧೯೮ ೧ ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ‘ಆತ್ಮಭಾರತ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂತಾದ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದ ಅರವಿಂದ ನಾಡಕರ್ಣಿಯವರು ಕಾವ್ಯಜಗತ್ತಿನಿಂದ ದೂರವಾದದ್ದು ೨೦೦೮ರ ಮೇ ೧೯ ರಂದು.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌