Jootoor Designs

Arrow Up

Arrow Down

  

ಅಶೋಕ್ ಕುಮಾರ್

ಅಶೋಕ್ ಕುಮಾರ್ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಪ್ರಕಾರಗಳಲ್ಲಿ ವಿಶೇಷ ಪ್ರಾವೀಣ್ಯತೆ ಪಡೆದಿರುವ ಅಶೋಕ್‌ ಕುಮಾರ್ ರವರು ಹುಟ್ಟಿದ್ದು ಬೆಂಗಳೂರು. ತಂದೆ ಎಚ್.ವಿ. ಅನಂತರಾಜಯ್ಯ, ತಾಯಿ, ರಾಜಮ್ಮ. ಓದಿದ್ದು ಬಿ.ಕಾಂ. ಆಯ್ಕೆ ಮಾಡಿಕೊಂಡದ್ದು ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಪ್ರಕಾರಗಳು. ಭರತನಾಟ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪಡೆದ ವಿದ್ವತ್ ಪದವಿ.

ಶ್ರೀಮತಿ ರಾಧಾ ಶ್ರೀಧರ್ ಮತ್ತು ಶ್ರೀಮತಿ ಭಾನುಮತಿ ಇವರಲ್ಲಿ ಸತತವಾಗಿ ೨೦ ವರ್ಷಕಾಲ ಪಡೆದ ಕಠಿಣ ಶಿಕ್ಷಣ. ಶ್ರೀಮತಿ ಸುನಂದಾ ದೇವಿಯವರಲ್ಲಿ ಕೂಚಿಪುಡಿ ಶಿಕ್ಷಣ. ಶ್ರೀಮತಿ ಮಾಯಾರಾವ್‌ರವರ ನಾಟ್ಯ ಸ್ಕೂಲ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿಯಲ್ಲಿ ಕಥಕ್ ಮತ್ತು ಕೊರಿಯಾಗ್ರಫಿ ತಂತ್ರದಲ್ಲಿ ವಿಶೇಷಾಭ್ಯಾಸ.

ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿದ ನೃತ್ಯ ಕಾರ್ಯಕ್ರಮಗಳು. ಮಲೇಶಿಯಾ, ಸಿಂಗಪೂರ್, ಆಸ್ಟ್ರೇಲಿಯಾಗಳಲ್ಲಿ ವಿಶೇಷ ಆಹ್ವಾನಿತರಾಗಿ ನೀಡಿದ ನೃತ್ಯ ಕಾರ್ಯಕ್ರಮ. ಒಂಬತ್ತು ಮಂದಿ ಅಂಧ ಕಲಾವಿದರಿಗೆ ನೃತ್ಯ ಶಿಕ್ಷಣ ನೀಡಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅಂಧರಿಂದ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ.

ನಾಟ್ಯಾಂಜಲಿ ಉತ್ಸವ, ಸಾರ್ಕ್ ಸಮ್ಮೇಳನ, ಭಾರತ್ ಕಲಾಚಾರ್ ಅಕಾಡಮಿ, ಶಂಕರಾಭರಣ ಟ್ರಸ್ಟ್ (ಚೆನ್ನೈ) ನಾರದ ಗಾನಸಭೆ ಮುಂತಾದ ಉತ್ಸವಗಳಲ್ಲಿ ಭಾಗಿ. ಭಾರತ ಸರಕಾರದ ನ್ಯಾಷನಲ್ ಡಾನ್ಸ್ ಕಾರ್ಯಕ್ರಮ, ದೂರದರ್ಶನಗಳಲ್ಲೂ ನೀಡಿದ ಕಾರ್ಯಕ್ರಮ.

ಕಲಿಯುಗ ನಾಟ್ಯಾಚಾರ್ಯ, ಯುವ ಕಲಾಭಾರತಿ, ನಾಟ್ಯಶಿಲ್ಪಿ, ನಾಟ್ಯ ನಿಟಿಲಾಕ್ಷಿ, ಕರ್ನಾಟಕ ಜ್ಯೋತಿ, ನಾಟ್ಯಶ್ರೀ, ಬಾಯನ್ಸೀ ಬ್ಯೂಟಿಫುಲ್ ಪೀಪಲ್ ಅವಾರ್ಡ್, ಬಾಯನ್ಸಿ ರೋಟರಿ ಡಿಸ್ಟ್ರಿಕ್ಟ್ ಅವಾರ್ಡ್ ಮುಂತಾದ ಪ್ರಶಸ್ತಿಗಳು. ದೆಹಲಿಯ ಸ್ಟೇಟ್ಸ್‌ಮನ್, ದಿ ವಲಯಮ್ ಮೆಯಿಲ್ (ಮಲೇಶಿಯಾ) ನ್ಯೂ ಸ್ಟೇಟ್ಸ್ ಟೈಮ್ (ಆಸ್ಟ್ರೇಲಿಯಾ) ಟೈಮ್ (ಯು.ಕೆ.) ಮುಂತಾದ ಪತ್ರಿಕೆಗಳಿಂದ ಪ್ರಶಂಸೆ. ನಾಟ್ಯಾಂಜಲಿ ಶಾಲೆ ಸ್ಥಾಪಿಸಿ ಭರತನಾಟ್ಯ, ಜಾನಪದ, ಕೂಚಿಪುಡಿ ಪ್ರಕಾರಗಳಲ್ಲಿ ಯುವಜನತೆಗೆ ನೀಡುತ್ತಿರುವ ಶಿಕ್ಷಣ. ೩೦ ಅಂಧರ ತಂಡವನ್ನು ರೂಪಿಸಿರುವ ಅಪರೂಪದ ಸಾಹಸಿ ನೃತ್ಯಪಟು.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌