Jootoor Designs

Arrow Up

Arrow Down

  

ಚದುರಂಗ

ಚದುರಂಗಚದುರಂಗ ಕಾವ್ಯನಾಮದ ಎಂ. ಸುಬ್ರಹ್ಮಣ್ಯರಾಜ ಅರಸುರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕಲ್ಲಹಳ್ಳಿ. ತಂದೆ ಮುದ್ದುರಾಜ ಅರಸು, ತಾಯಿ ಗೌರಮ್ಮಣ್ಣಿ. ಮೈಸೂರು ಅರಸು ಮನೆತನದ ಸಂಬಂಧ. ಜಯಚಾಮರಾಜ ಒಡೆಯರ ಓರಗೆಯವರು. ಮೈಸೂರು ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ. ಕಾಲೇಜು ಕಲಿತದ್ದು, ಬೆಂಗಳೂರು ಇಂಟರ್ ಮೀಡಿಯಟ್ ಕಾಲೇಜು ಮತ್ತು ಮೈಸೂರು ಮಹಾರಾಜ ಕಾಲೇಜು. ವೈದ್ಯರಾಗಬೇಕೆಂಬ ಆಸೆ. ಸೇರಿದ್ದು ಪುಣೆಯಲ್ಲಿ ಕಾನೂನು ಮತ್ತು ಎಂ.ಎ. ಕಲಿಯಲು. ವಿದ್ಯಾಭ್ಯಾಸ ಸ್ಥಗಿತ.

ಬಾಲ್ಯದಲ್ಲಿ ಕಥೆ ಕೇಳುವ, ಸೃಷ್ಟಿಸಿ ಹೇಳುವ ಚತುರತೆ. ಒಳಗೊಬ್ಬ ಕಥೆಗಾರನ ಉದಯ. ಯೌವನದಲ್ಲಿ ಸ್ವಾತಂತ್ರ್ಯ ಚಳವಳಿ, ಗಾಂಧಿ ವಿಚಾರಧಾರೆಗೆ ಮರುಳು. ಸಾಂಪ್ರದಾಯಿಕ ಕಟ್ಟುಪಾಡು ವಿರೋಧಿಸಿ ಮದುವೆ. ಕುಟುಂಬದಲ್ಲಿ ಕೋಲಾಹಲ. ಮೈಸೂರು ತೊರೆದು ಹುಟ್ಟಿದ ಹಳ್ಳಿಯ ಕಡೆ ಪಯಣ. ಕೃಷಿ ವೃತ್ತಿ, ಬರವಣಿಗೆ.

ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ರೂಢಿಗತ. ಮೊದಲ ಕತೆ ಛಾಯಾಪತ್ರಿಕೆಯಲ್ಲಿ ಪ್ರಕಟ. ಇವರ ಸಾಹಿತ್ಯ ಪ್ರೇರಕರು ಮಾಸ್ತಿ ಮತ್ತು ಗೊರೂರರು. ಜೀವನದಲ್ಲಿ ನರಳದಿದ್ದರೆ ದೊಡ್ಡ ಸಾಧನೆ ಅಸಾಧ್ಯವೆಂಬ ನಂಬಿಕೆ. ೧೯೪೪ರಲ್ಲಿ ಮೊದಲ ಕಥಾಸಂಕಲನ ‘ಸ್ವಪ್ನಸುಂದರಿ’ ಪ್ರಕಟ. ಇಣುಕು ನೋಟ, ಶವದ ಮನೆ, ಬಂಗಾರದ ಗೆಜ್ಜೆ, ಮೀನಿನ ಹೆಜ್ಜೆ, ಬಣ್ಣದ ಬೊಂಬೆ ಕಥಾ ಸಂಕಲನಗಳು. ನಗರ ಮತ್ತು ಗ್ರಾಮ್ಯಬದುಕಿನ ಲೋಭ, ಅನ್ಯಾಯಗಳ ಚಿತ್ರಣ-ಕಥೆಗಳ ಜೀವಾಳ, ೧೯೫೦ರಲ್ಲಿ ಮೊದಲ ಕಾದಂಬರಿ ‘ಸರ್ವ ಮಂಗಳ’ ಕಾದಂಬರಿ ಲೋಕದಲ್ಲಿ ಹೊಸ ಅಲೆಗೆ ಹಾಡಿದ ನಾಂದಿ. ಮಾನವೀಯ ಸಂಬಂಧಗಳ ಅನಾವರಣ. ಎರಡನೆಯ ಕಾದಂಬರಿ ಉಯ್ಯಾಲೆ. ಹೆಣ್ಣುಗಂಡಿನ ಸೂಕ್ಷ್ಮ ಮನಸ್ಸಿನ ಚಿತ್ರಣ. ಮೂರನೆಯ ಮಹಾತ್ವಾಕಾಂಕ್ಷೆಯ ಕೃತಿ ವೈಶಾಖ. ರಚಿಸಿದ ನಾಟಕ-ಇಲಿಬೋನು ಮತ್ತು ಕುಮಾರರಾಮ. ಕಾವ್ಯರಚನೆ-ನಂಜುಂಡ ಕವಿಯ ರಾಮನಾಥಚರಿತೆ.

ಒಲಿದು ಬಂದ ಪುರಸ್ಕಾರಗಳು. ಮಂಡ್ಯದ ೬೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಲನಚಿತ್ರವಾದ ಸರ್ವಮಂಗಳ, ಉಯ್ಯಾಲೆಗೆ ಚಲನಚಿತ್ರ ಪ್ರಶಸ್ತಿ. ನಿಧನರಾದದ್ದು ೧೯.೧೦.೧೯೯೮ರಲ್ಲಿ.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌