Jootoor Designs

Arrow Up

Arrow Down

  

ಎಚ್.ಆರ್. ಶಂಕರನಾರಾಯಣ

ಎಚ್.ಆರ್. ಶಂಕರನಾರಾಯಣಹಾ.ರಾ. ಕಾವ್ಯನಾಮದ ಶಂಕರನಾರಾಯಣರವರು ಹುಟ್ಟಿದ್ದು ತುಮಕೂರು. ತಂದೆ ರಾಮಾಶಾಸ್ತ್ರಿ, ತಾಯಿ ಲಕ್ಷ್ಮೀದೇವಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕುಣಿಗಲ್. ಮಳವಳ್ಳಿಯಲ್ಲಿ ಹೈಸ್ಕೂಲು. ಮೈಸೂರು ಕಾಲೇಜಿನಲ್ಲಿ ಬಿ.ಎ. ಪದವಿ, ಬೆಂಗಳೂರು ಲಾ ಕಾಲೇಜಿನಿಂದ ಬಿ.ಎಲ್. ಪದವಿ. ಕೆಲಕಾಲ ಪತ್ರಕರ್ತರ ಕೆಲಸ. ವೀರಕೇಸರಿ ಸೀತಾರಾಮಶಾಸ್ತ್ರಿಗಳ ವಾರ್ತಾಪತ್ರಿಕೆ ಮತ್ತು ಜನವಾಣಿ. ತುಮಕೂರಿನ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕ ಮತ್ತು ವಕೀಲಿ ವೃತ್ತಿ ಆರಂಭ. ಜೊತೆಗೆ ಸಾಹಿತ್ಯದ ಒಲವು. ಅಂದಿನ ವಿಕಟ ವಿನೋದಿನಿ, ಕೊರವಂಜಿ ಪತ್ರಿಕಾ ಬಳಗಕ್ಕೆ ಸೇರ‍್ಪಡೆ. ಕೊರವಂಜಿಯ ರಾ.ಶಿ. (ಎಂ.ಶಿವರಾಂ) ರವರಿಂದ ಹಾ.ರಾ. ಕಾವ್ಯನಾಮ.

ತುಮಕೂರಿನಲ್ಲಿ ಜಿಲ್ಲಾ ಸಾಹಿತ್ಯ ಸಂಘ ಸ್ಥಾಪನೆ. ಹಲವಾರು ಸಾಹಿತಿಗಳಿಗೆ ಸನ್ಮಾನ. ಜಿಲ್ಲಾ ಸಾಹಿತಿಗಳ ಕೈಪಿಡಿ, ‘ಸಮರಸ’ ಗ್ರಂಥ ಪ್ರಕಟಣೆ. ಕೆಲಕಾಲ ರೇಣುಕಾಚಾರ್ಯ ಲಾ ಕಾಲೇಜಿನಲ್ಲಿ ಅಧ್ಯಾಪನ. ತುಮಕೂರಿನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾವಣೆ. ಇನ್ನಷ್ಟು ಬೆಳೆದ ಸಾಹಿತ್ಯ ಸಂಪರ್ಕ. ಹಾಸ್ಯಬರಹಗಳ ಹುಲುಸಾದ ಬೆಳೆ, ಹಾಸ್ಯ ಉಪನ್ಯಾಸಗಳು. ಸುಮಾರು ೩೦೦ಕ್ಕೂ ಹೆಚ್ಚು ಹಾಸ್ಯ ಲೇಖನ ಪ್ರಕಟಿತ. ಆಕಾಶವಾಣಿಯಲ್ಲಿ ಪ್ರಸಾರ ಭಾಷಣ. ವಕೀಲಿ ವೃತ್ತಿ. ಕೋರ್ಟಿನಲ್ಲಿ ಕನ್ನಡದಲ್ಲೇ ವಾದ-ಪ್ರತಿವಾದ. ಹಾಸ್ಯಭರಿತ ವಾದ-ಪ್ರತಿವಾದ ಕೇಳಲು ಕಿಕ್ಕಿರಿಯುತ್ತಿದ್ದ ಜನ. ವಿನೋದ, ತರಂಗ, ಮಲ್ಲಿಗೆ, ಅಪರಂಜಿ ಪತ್ರಿಕೆಗಳಿಗೆ ಹಾಸ್ಯ ಬರಹ. ತಮ್ಮದೇ ಗುಲಾಬಿ ಪ್ರಕಾಶದಲ್ಲಿ ಪುಸ್ತಕ ಪ್ರಕಟಣೆ-ಕಬ್ಬು ಕುಡುಗೋಲು, ನಗೆ-ನಾಣ್ಯ, ಹಿಂದೇನಾ ಮುಂದೇನಾ ಎಂದೆಂದೂ ಹಿಂಗೇನಾ, ಗಿಲ್ಟ್ ಆರ್ ನಾಟ್ ಗಿಲ್ಟ್, ಯಾರಿಗೆ ತಲೆ ಸರಿಯಾಗಿದೆ, ಸುಬ್ಬನ ಬುರುಡೆಗಳು, ವಕ್ರೇಶ ವಚನಗಳು ಮತ್ತು ಲಾಯರಿ ಅನುಭವದ ‘ವಕೀಲಿ ದಿನಗಳು’ ಪುಸ್ತಕಗಳು. ಇತ್ತೀಚಿನ ಪ್ರಕಟಣೆ ‘ನಗೆಯು ಬರುತಿದೆ’. ೮೦ರ ಹುಟ್ಟುಹಬ್ಬಕ್ಕೆ ‘ಸಮಗ್ರ ಹಾಸ್ಯ’ ಮಂದಸ್ಮಿತ ಪ್ರಕಟಿತ.

ಬಂದ ಪ್ರಶಸ್ತಿಗಳು ಹಲವಾರು-ಅತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಗೊರೂರು ಪ್ರಶಸ್ತಿ, ಪಡುಕೋಣೆ ರಮಾನಂದ ಪ್ರಶಸ್ತಿ, ೧೯೯೯ರಲ್ಲಿ ಚೆನ್ನೈನಲ್ಲಿ ಬೆಳ್ಳಿತಟ್ಟೆಯೊಡನೆ ಶಾಲು ಸನ್ಮಾನ. ಹೈಕೋರ್ಟು ವಕೀಲರಿಂದ ಸನ್ಮಾನ. ವಕೀಲರ ಸಂಘದಿಂದ ಸನ್ಮಾನ. ಸಂವಾದ, ಪ್ರಜಾವಾಣಿ, ವಿಜಯ ಕರ್ನಾಟಕ, ಭಾವನಾ ಪತ್ರಿಕೆಗಳಲ್ಲಿ ವ್ಯಕ್ತಿತ್ವ ಪರಿಚಯ ಪ್ರಕಟಿತ. ಇಂದು ಕೂಡಾ ವೃತ್ತಿ-ಪ್ರವೃತ್ತಿ ಎರಡರಲ್ಲೂ ಯುವಕರನ್ನು ನಾಚಿಸುವ ಕಾರ್ಯ ತತ್ಪರತೆ.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌