Jootoor Designs

Arrow Up

Arrow Down

  

ಪ್ರೊ. ಲಕ್ಷ್ಮಣ್ ತೆಲಗಾವಿ

ಪ್ರೊ. ಲಕ್ಷ್ಮಣ್ ತೆಲಗಾವಿಇತಿಹಾಸಜ್ಞ, ಸಂಶೋಧಕ, ಸಂಶೋಧನ ಮಾರ್ಗದರ್ಶಕರಾದ ಲಕ್ಷ್ಮಣ್‌ ತೆಲಗಾವಿಯವರು ಹುಟ್ಟಿದ್ದು ಕೋಟೆಕೊತ್ತಲಗಳ ನಾಡಾದ ಚಿತ್ರದುರ್ಗದಲ್ಲಿ ಜನವರಿ ೧ ರ ೧೯೪೭ ರಲ್ಲಿ. ತಂದೆ ಡಿ. ಪರಸಪ್ಪತೆಲಗಾವಿ, ತಾಯಿ ಚಂದ್ರಮ್ಮ. ಪ್ರಾರಂಭಿಕ ಹಾಗೂ ಕಾಲೇಜಿನವರೆಗೆ ಶಿಕ್ಷಣ ಪಡೆದದ್ದು ಚಿತ್ರದುರ್ಗದಲ್ಲಿ. ಸರಕಾರಿ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ಚರಿತ್ರೆಯ ವಿಷಯದಲ್ಲಿ ಮೈಸೂರು ವಿ.ವಿ. ದಿಂದ ಎಂ.ಎ. ಪದವಿ. ಪ್ರೊ.ಬಿ. ಷೇಕ್‌ಅಲಿಯವರ ಮಾರ್ಗದರ್ಶನದಲ್ಲಿ ‘ಚಿತ್ರದುರ್ಗ ನಾಯಕ ಅರಸರು’ ವಿಷಯದಲ್ಲಿ ಕೈಗೊಂಡ ಸಂಶೋಧನೆ.

ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧಕ ವೃತ್ತಿ. ೧೯೭೫-೭೯ರ ನಡುವೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ಚರಿತ್ರೆಯ ಬೋಧನೆ. ೧೯೮೦-೮೨ ರ ನಡುವೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ. ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯಲ್ಲಿ ಸಂಪಾದಕರಾಗಿ ಕೆಲಕಾಲ. ನಂತರ ಹಂಪಿ ಕನ್ನಡ ವಿ.ದಿಂದ ಚರಿತ್ರೆ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಡೀನ್‌ ಆಗಿ, ಸಂದರ್ಶನ ಪ್ರಾಧ್ಯಾಪಕರಾಗಿ, ಯು.ಜಿ.ಸಿ ಎಮಿರಿಟಸ್‌ ಫೆಲೊ ಆಗಿ ನಿರ್ವಹಿಸಿದ ಹಲವಾರು ಹುದ್ದೆಗಳು. ಕೆಲವು ಎಂ.ಫಿಲ್‌, ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.

ಸಂಘ ಸಂಸ್ಥೆಗಳ, ಸಂಶೋಧಕ ತಂಡಗಳಲ್ಲಿ ನಿರ್ವಹಿಸಿದ ಜವಾಬ್ದಾರಿಗಳು. ಚಿತ್ರದುರ್ಗ ಸಂಶೋಧನ ತಂಡದ ಸಂಸ್ಥಾಪಕ ನಿರ್ದೇಶಕರಾಗಿ, ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಾಪಕ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ಇತಿಹಾಸ ಅಕಾಡಮಿಯ ಪ್ರಧಾನಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದ ಸದಸ್ಯರಾಗಿ, ಕರ್ನಾಟಕ ಗ್ಯಾಸೆಟಿಯರ್ ಸಲಹಾ ಸಮಿತಿಯ ಸದಸ್ಯರಾಗಿ [ಬೆಳಗಾವಿ, ಮೈಸೂರು, ಬೆಂಗಳೂರು (ನಗರ ಮತ್ತು ಗ್ರಾಮಾಂತರ) ಕೊಡಗು ಜಿಲ್ಲೆಗಳ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ರಚನೆ], ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಪ್ರಾದೇಶಿಕ ಐತಿಹಾಸಿಕ ದಾಖಲೆಗಳ ಪರಿವೀಕ್ಷಣಾ ಸಮಿತಿಯ ಸದಸ್ಯರಾಗಿ, ಧಾರವಾಡದ ಕರ್ನಾಟಕದ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗದ ಸದಸ್ಯರಾಗಿ ಹೊತ್ತ ಜವಾಬ್ದಾರಿಯುತ ಸ್ಥಾನಗಳು.

ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ವಿಚಾರ ಸಂಕಿರಣ, ಕಮ್ಮಟ, ಸಮ್ಮೇಳನ ಉತ್ಸವಗಳಲ್ಲಿ ಭಾಗಿ.

ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು, ದಾವಣಗೆರೆ, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಕೈಗೊಂಡ ಪ್ರಮುಖ ಶೋಧನ ಕಾರ್ಯಗಳು ಹಾಗೂ ಅಧ್ಯಯನಗಳ ಜೊತೆಗೆ ಶಿಲಾಶಾಸನಗಳು, ತಾಮ್ರಪಟಗಳು, ಹಿತ್ತಾಳೆ ಮತ್ತು ಕಂಚಿನ ಪಟಗಳು, ಶಾತವಾಹನ ಕಾಲೀನ ನಾಣ್ಯಗಳು, ಕಾಗದ ಪತ್ರಗಳು ಮುಂತಾದವುಗಳನ್ನು ಚಿತ್ರದುರ್ಗ, ನಿಡುಗಲ್ಲೂ, ಮುದ್ದಾಪುರ, ತೊರೆ ಓಬೇನಹಳ್ಳಿ, ಹರ್ತಿಕೋಟೆ, ಆನೆಗೊಂದಿ ಮುಂತಾದೆಡೆಗಳಿಂದ ಚಾರಿತ್ರಿಕ ದಾಖಲೆಗಳ ಸಂಗ್ರಹಣೆ.

ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ ಗ್ರಂಥಗಳ ರಚನೆ ಮತ್ತು ಪ್ರಕಟಣೆ, ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್‌ ಇನ್‌ಸೈಟ್‌, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ ; ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ಪ್ರಕಟಿಸಿವೆ.

ಇದರ ಜೊತೆಗೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವುಗಳಲ್ಲಿ ಚಂದ್ರವಳ್ಳಿ, ಹುಲ್ಲೂರು ಶ್ರೀನಿವಾಸ ಜೋಯಿಸರ ಐತಿಹಾಸಿಕ ದಾಖಲೆಗಳು, ಐತಿಹಾಸಿಕ ಚಿತ್ರದುರ್ಗ, ಮಿರ್ಜಿಅಣ್ಣಾರಾಯ, ಹರತಿಸಿರಿ, ಸಂಶೋಧನ ಮುಂತಾದ ಅಭಿನಂದನ ಗ್ರಂಥಗಳೂ ಸೇರಿವೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೆಲವು ಸಂಘ ಸಂಸ್ಥೆಗಳಿಗಾಗಿ ಸ್ಮರಣ ಸಂಚಿಕೆಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಹೀಗೆ ಬರೆದ ಲೇಖನಗಳು ಸುಮಾರು ೨೦೦ ಕ್ಕೂ ಹೆಚ್ಚು.

ರಾಜ್ಯ ಪ್ರವಾಸೋದ್ಯಮ, ಅನುರಾಗ್‌ ಕ್ರಿಯೇಷನ್ಸ್‌, ವಾಗೀಶ್‌ ವಿಷನ್ಸ್, ಮೇ|| ಕ್ಲಿಕ್‌ ಮೀಡಿಯಾ ಅನ್‌ಲಿಮಿಟೆಡ್‌ ಸಂಸ್ಥೆಗಳ ಸಾಕ್ಷ್ಯಚಿತ್ರಗಳ ತಯಾರಿಕೆಯಲ್ಲಿ ನಿರೂಪಣಾ ಸಾಹಿತ್ಯರಚನೆ, ಮಾರ್ಗದರ್ಶನ ಮುಂತಾದ ಚಟುವಟಿಕೆಗಳಲ್ಲಿ ಭಾಗಿ.

ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಚಿತ್ರದುರ್ಗದ ಮುರುಘಾ ಮಠದಿಂದ ‘ಸಂಶೋಧನ ನಿಧಿ’ ಪ್ರಶಸ್ತಿ, ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡಮಿಯಿಂದ ‘ಶ್ರೀ ಗುರು ರವಿದಾಸರತ್ನ’, ಹಿರಿಯೂರಿನ ಏಕನಾಥೇಶ್ವರಿ ಸಂಗೀತ ವಿದ್ಯಾಲಯದಿಂದ ‘ಇತಿಹಾಸಭೂಷಣ’ ಮುಂತಾದ ಪ್ರಶಸ್ತಿಗಳ ಜೊತೆಗೆ ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ.

ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡಮಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಫೆಲೋಷಿಪ್‌

ಪಾಣಿಪತ್‌ ಹರಿಯಾಣದ ಸುಭದ್ರಕುಮಾರಿ ಚೌಹಾಣ್‌ ಜನ್ಮಶತಾಬ್ದಿ ಸಮ್ಮಾನ-ದೆಹಲಿಯ ಮಹಾತ್ಮ ಜ್ಯೋತಿ ಬಾಪುಲೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಪುರಸ್ಕಾರಗಳು ದೊರೆತಿವೆ.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌