Jootoor Designs

Arrow Up

Arrow Down

  

ಎಂ.ಎಸ್. ಸುಂಕಾಪುರ

ಎಂ.ಎಸ್. ಸುಂಕಾಪುರಮುಳಗುಂದದಲ್ಲಿ ಜನಿಸಿದ ಎಂ.ಎಸ್.ಸುಂಕಾಪುರರವರ ತಂದೆ ತಾಯಿಗಳು ಸಣ್ಣ ಬಸಪ್ಪ ಮತ್ತು ಸಿದ್ದಮ್ಮ. ಪ್ರಾಥಮಿಕ ಶಿಕ್ಷಣ ಮುಳಗುಂದ. ಹೈಸ್ಕೂಲು ಕಲಿತದ್ದು ಗದುಗಿನ ಮುನಿಸಿಪಲ್ ಹೈಸ್ಕೂಲು. ಪದವಿಗೆ ಸೇರಿದ್ದು ಬೆಳಗಾವಿಯ ಲಿಂಗರಾಜ ಕಾಲೇಜು. ಸುಂಕಾಪುರರವರ ಮನೆತನವೆ ಜನಪದಗಳ ತವರು. ಜನಪದ ಕಲೆಗಳ ಬಗ್ಗೆ ವಿಶೇಷವಾದ ಆಕರ್ಷಣೆ. ಸುಗ್ಗಿ ಕುಣಿತ, ಸೋಬಾನಪದ, ಜಾನಪದ ಕಥೆ ಹೇಳುವ ಕಲೆ ಕರಗತ.

೧೯೪೬ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಬಿ.ಎ. ಪದವಿ. ರ‍್ಯಾಂಕ್ ವಿಜೇತರು. ದೊರೆತ ಫೆಲೋಶಿಪ್‌ನಲ್ಲಿ ಎಂ.ಎ. ವ್ಯಾಸಂಗ. ೧೯೫೭ರಲ್ಲಿ “ಕನ್ನಡ ಸಾಹಿತ್ಯದಲ್ಲಿ ಹಾಸ್ಯ” ವಿಷಯದ ಬಗ್ಗೆ ಸಂಶೋಧನಾ ಪ್ರಬಂಧ ರಚನೆ. ಡಾಕ್ಟರೇಟ್ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ ನೇಮಕ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಕಟ್ಟುವಲ್ಲಿ ಅಹರ್ನಿಶಿ ದುಡಿತ. ಡಾ. ಆರ್.ಸಿ. ಹಿರೇಮಠರ ಸಹಯೋಗ. ಗುಲಬರ್ಗ ಸ್ನಾತಕೋತ್ತರ ಕೇಂದ್ರದ ಆರಂಭ. ಮುಖ್ಯಸ್ಥರಾಗಿ ಅಕಾರ ಸ್ವೀಕಾರ, ಕೆಲವರ್ಷಾ ನಂತರ ಧಾರವಾಡಕ್ಕೆ ಮರುಪಯಣ. ನಿವೃತ್ತಿಯವರೆಗೂ ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದ ನಿರ್ದೇಶಕರ ಹೊಣೆಗಾರಿಕೆ.

ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯ ಗೀಳು. ಹರಟೆ, ನಾಟಕಗಳ ರಚನೆಯ ಹವ್ಯಾಸ, ನಾಟಕಕಾರರು-ಶ್ರೇಷ್ಠನಟರು. ಶೋಭಮಾಲ ಸ್ವತಂತ್ರ ಪ್ರಕಾಶನ ಸಂಸ್ಥೆಯ ಪ್ರಾರಂಭ. ಪ್ರಭುಲಿಂಗಲೀಲೆ, ಶಬರ ಶಂಕರ ವಿಲಾಸ ಮುಂತಾದ ಹನ್ನೊಂದು ಕೃತಿಗಳು ಸಂಪಾದಿತ. ಸೋಮನಾಥ ಚರಿತೆ, ರಾಜಶೇಖರ ವಿಳಾಸ ಮೊದಲಾದ ಹನ್ನೆರಡು ಕೃತಿಗಳ ಸಹಸಂಪಾದನೆ. ಒಂಬತ್ತು ವಚನ ಸಾಹಿತ್ಯ ಕೃತಿಗಳು. ಗುಮ್ಮಟ ಶತಕ, ರಕ್ಷಾಶತಕ, ಚನ್ನವೀರೇಶ್ವರ ಶತಕ, ನಿಜಲಿಂಗಶತಕ ಮುಂತಾದ ಏಳು ಶತಕಗಳು ಸಂಪಾದಿತ. ಚೌಪದನಗಳು, ಹೋಳಿ ಹಾಡು ಮೊದಲಾದ ೯ ಜಾನಪದ ಸಂಪಾದಿತ ಕೃತಿಗಳು. ಶ್ರೀಕೃಷ್ಣ ಪಾರಿಜಾತ, ಅಲ್ಲಮಪ್ರಭು ಸಣ್ಣಾಟ ಮೊದಲಾದ ೬ ಯಕ್ಷಗಾನ ಬಯಲಾಟ ಕೃತಿಗಳು. ‘ನಗೆಹೊಗೆ’ ಏಕಾಂಕ ಸಂಗ್ರಹ, ಗಪ್‌ಚಿಪ್ ಹರಟೆಗಳ ಸಂಗ್ರಹ. ನಗೆಗಾರ ನಯಸೇನ, ಜೀವನದಲ್ಲಿ ಹಾಸ್ಯ, ರೇಡಿಯೋ ನಾಟಕಗಳು ಮುಂತಾದ ಕೃತಿ ಪ್ರಕಟಣೆ. ನಿಧನರಾದದ್ದು ೩೦.೬.೧೯೯೨ರಲ್ಲಿ.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌