Jootoor Designs

Arrow Up

Arrow Down

  

ಪೂರ್ಣಚಂದ್ರ ತೇಜಸ್ವಿ

ಪೂರ್ಣಚಂದ್ರ ತೇಜಸ್ವಿಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.

ಜೀವನ : ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಇವರು ೧೯೩೮ ಸೆಪ್ಟೆಂಬರ್ ೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಧವಿ ಪಡೆದ ನಂತರ, ಮ್ಯ್ಲ್ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಇವರ ಮೊದಲ ಕೃತಿ ಲಿಂಗ ಬಂದ. ಈ ಕೃತಿಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೊತ್ತರ ಪದವಿಯ ನಂತರ ಒರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ದಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇವರ ಪತ್ನಿ ರಾಜೇಶ್ವರಿ. ಇವರೀಗ ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ ನಿರುತ್ತರದಲ್ಲಿ ಜೀವಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತ ಹಾಗು ಈಶಾನ್ಯೇ. ಇವರಿಬ್ಬರೂ ಸಾಫ್ಟ್ ವೇರ್ ಪರಿಣಿತರು.

ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ ನಿರುತ್ತರ ದಲ್ಲಿ ೨೦೦೭ ರ ಏಪ್ರಿಲ್ ೫ ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ.

ಸಾಹಿತ್ಯ : ವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಲೇಖನಿ ಓಡಿಸಿದ್ದಾರೆ. "ಬೃಹನ್ನಳೆ ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು" ಇವರ ಕವನ ಸಂಕಲನ. "ಅಬಚೂರಿನ ಪೋಸ್ಟಾಫೀಸು", "ಹುಲಿಯೂರಿನ ಸರಹದ್ದು","ಕಿರಗೂರಿನ ಗಯ್ಯಾಳಿಗಳು" ಇವರ ಕಥಾ ಸಂಗ್ರಹಗಳು. "ಚಿದಂಬರ ರಹಸ್ಯ", "ಕರ್ವಾಲೋ", "ಜುಗಾರಿ ಕ್ರಾಸ್", "ಮಾಯಾಲೋಕ-೧" ಇವರ ಕಾದಂಬರಿಗಳು. "ವ್ಯಕ್ತಿ ವಿಶಿಷ್ಟ ಸಿದ್ಧಾಂತ", ತೇಜಸ್ವಿ ಅವರ ಒಂದು ಚಿಂತನ ಮಂಥನ ವೈಚಾರಿಕ ಕೃತಿ.

ಇವರು ತಮ್ಮ ಮಲೆನಾಡು ಜೀವನದ ಅನುಭವದಿಂದ ಬರೆದ ಕೃತಿಗಳು 'ಪರಿಸರದ ಕಥೆ' ಮತ್ತು 'ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು'.

ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. ಇವರ "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಹಾಗು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಹಾಯುಧ್ಧ, ಹಾರುವ ತಟ್ಟೆಗಳು, ಮಹಾನದಿ ನೈಲ್ ಇತ್ಯಾದಿ.

ಅಲೆಮಾರಿಯ ಅಂಡಮಾನ್ ತೇಜಸ್ವಿಯವರ ಅಂಡಮಾನ್ ಪ್ರವಾಸ ಕಥನ. ಈ ಕೃತಿಯು ಕನ್ನಡ ಪ್ರವಾಸ ಕಥನಗಳಲ್ಲೇ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ.

ಪ್ರಶಸ್ತಿಗಳು : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೭ ರಲ್ಲಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೭ ರಲ್ಲಿ, ಪಂಪ ಪ್ರಶಸ್ತಿ ೨೦೦೧ ರಲ್ಲಿ, ರಾಜ್ಯೋತ್ಸವ ಪ್ರಶಸ್ತಿ

ಇತರೆ ಗೌರವಗಳು : ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ. "ಕುಬಿ ಮತ್ತು ಇಯಾಲ" ಚಿತ್ರವು ರಾಷ್ಟ್ರ ಪ್ರಶಸ್ತಿ ಗಳಿಸಿತು. "ಚಿದಂಬರ ರಹಸ್ಯ" ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಾಪ್ತವಾಯಿತು. ಕರ್ನಾಟಕ ಸಾಹಿತ್ಯ ಅಕಾಡಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.

ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ.

ಕಾವ್ಯ ಸಂಕಲನ : ಬೃಹನ್ನಳೆ ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು

ಕಾದಂಬರಿಗಳು : ಮಾಯಾಲೋಕ, ಚಿದಂಬರ ರಹಸ್ಯ, ಕರ್ವಾಲೋ, ಜುಗಾರಿ ಕ್ರಾಸ್, ನಿಗೂಢ ಮನುಷ್ಯರು

ಚಿತ್ರ ಸಂಕಲನ : ಮಾಯೆಯ ಮುಖಗಳು

ಸಣ್ಣ ಕಥೆಗಳ ಸಂಕಲನ : ಪರಿಸರದ ಕತೆ, ಅಬಚೂರಿನ ಪೋಸ್ಟಾಫೀಸು, ಹುಲಿಯೂರಿನ ಸರಹದ್ದು, ಕಿರಿಗೂರಿನ ಗಯ್ಯಾಳಿಗಳು, ಪಾಕಕ್ರಾಂತಿ ಮತ್ತು ಇತರ ಕತೆಗಳು, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು

ನಾಟಕ : ಯಮಳ ಪ್ರಶ್ನೆ

ಅನುವಾದಿತ ಕೃತಿಗಳು : ರುದ್ರಪ್ರಯಾಗದ ಭಯಾನಕ ನರಭಕ್ಷಕ - ಜಿಮ್ ಕಾರ್ಬೆಟ್‍ರವರ 'ಮ್ಯಾನ್ ಈಟಿಂಗ್ ಲೆಪಡ್೯ ಆಫ್ ರುದ್ರಪ್ರಯಾಗ್' ಕೃತಿಯ ಅನುವಾದ., ಪ್ಯಾಪಿಲಾನ್-೧,೨ - ಹೆನ್ರಿ ಷಾರಿಯೇ ರವರ 'Papillon' ಕೃತಿಯ ಅನುವಾದ, ಬೆಳ್ಳಂದೂರಿನ ನರಭಕ್ಷಕ(ಕಾಡಿನ ಕಥೆಗಳು ಭಾಗ ೧) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ, ಪೆದ್ದಚೆರುವಿನ ರಾಕ್ಷಸ(ಕಾಡಿನ ಕಥೆಗಳು ಭಾಗ ೨) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ, ಜಾಲಹಳ್ಳಿಯ ಕುರ್ಕ(ಕಾಡಿನ ಕಥೆಗಳು ಭಾಗ ೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ, ಮುನಿಶಾಮಿ ಮತ್ತು ಮಾಗಡಿ ಚಿರತೆ(ಕಾಡಿನ ಕಥೆಗಳು ಭಾಗ ೪), ಮಹಾ ಪಲಾಯನ ಇಂಗ್ಲೀಷ್ ಕೃತಿ ದಿ ಲಾಂಗ್ ವಾಕ್ ನ ರೂಪಾಂತರ

ವೈಜ್ನಾನಿಕ ಹಾಗು ಪ್ರಕೃತಿ ಕುರಿತ ಪುಸ್ತಕಗಳು : ಸಹಜ ಕೃಷಿ, ಮಿಸ್ಸಿಂಗ್ ಲಿಂಕ್, ಹಕ್ಕಿ ಪುಕ್ಕ, ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು-ಭಾಗ ೧, ಹೆಜ್ಜೆ ಮೂಡದ ಹಾದಿ - ಕನ್ನಡ ನಾಡಿನ ಹಕ್ಕಿಗಳು-ಭಾಗ ೨, ವಿಸ್ಮಯ -೧,೨,೩, ಫ್ಲೈಯಿಂಗ್ ಸಾಸರ್-ಭಾಗ ೧ ಮತ್ತು ೨, ನಡೆಯುವ ಕಡ್ಡಿ ಹಾರುವ ಎಲೆ, ಮನಸೋಬು ಪೂಕೋವೋಕ ರವರ "ಒಂದು ಹುಲ್ಲಿನ ಕ್ರಾಂತಿ " ಪುಸ್ತಕದ ವಿವರಣಾತ್ಮಕ ಕೃತಿ

ಆತ್ಮ ಕಥನ : ಅಣ್ಣನ ನೆನಪು ಕುವೆಂಪು ಅವರ ಕುರಿತು

ಪ್ರವಾಸ ಕಥನ : ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್

ವಿಮರ್ಶಾ ಕೃತಿಗಳು : ವ್ಯಕ್ತಿ ವಿಶಿಷ್ಟ ಸಿಧ್ಧಾಂತ, ವಿಮರ್ಶೆಯ ವಿಮರ್ಶೆ, ಹೊಸ ವಿಚಾರಗಳು