Jootoor Designs

Arrow Up

Arrow Down

  

ಡಾ. ಆರ್. ಗೋಪಾಲಕೃಷ್ಣ

ಡಾ. ಆರ್. ಗೋಪಾಲಕೃಷ್ಣವೃತ್ತಿಯಲ್ಲಿ ಮನಃಶಾಸ್ತ್ರದ ಪ್ರವಾಚಕರಾದರೂ ಪ್ರವೃತ್ತಿಯಲ್ಲಿ ಸುಗಮ ಸಂಗೀತಗಾರರಾದ ಗೋಪಾಲಕೃಷ್ಣರವರು ಹುಟ್ಟಿದ್ದು ಬೆಂಗಳೂರು. ತಂದೆ ರಾಮಸ್ವಾಮಿ, ತಾಯಿ ಜಯಮ್ಮ. ವಿದ್ಯಾಭ್ಯಾಸ ಬೆಂಗಳೂರು. ಮನಃಶಾಸ್ತ್ರ ಹಾಗೂ ಸಂಗೀತಕ್ಕೆ ಇರುವ ಗಾಢವಾದ ಸಂಬಂಧದ ಬಗ್ಗೆ ಸಂಶೋಧನೆ ನಡೆಸಿ Personality Dimensions of Musicians and Non Musicians :A Comparative Study ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ.

ಸಂಗೀತದ ಬಗ್ಗೆ ಬಾಲ್ಯದಿಂದಲೂ ಬೆಳೆದುಬಂದ ಆಸಕ್ತಿ. ವಿದ್ವಾನ್ ಎ. ಸುಬ್ಬರಾವ್ ಹಾಗೂ ಸಂಗೀತ ವಿದುಷಿ ಶ್ರೀಮತಿ ಅಂಬಾ ವೆಂಕಟರಮಣಯ್ಯ ರವರಿಂದ ಒಂದುವರೆ ದಶಕಕ್ಕು ಮೀರಿದ ಕರ್ನಾಟಕ ಸಂಗೀತದ ಅಭ್ಯಾಸ. ಡಿ.ಬಿ. ಹರೀಂದ್ರರವರಲ್ಲಿ ಐದು ವರ್ಷ ಹಿಂದೂಸ್ತಾನಿ ಸಂಗೀತ ಕಲಿಕೆ.

ಶಾಸ್ತ್ರೀಯ ಸಂಗೀತದ ಆಳವಾದ ಅಭ್ಯಾಸ ನಡೆಸಿದ್ದರೂ ಒಲಿದದ್ದು ಸುಗಮಸಂಗೀತದ ಕಡೆಗೆ. ೧೯೭೫ರಲ್ಲಿ ‘ಸಾರಿಣಿ ಕೃಷ್ಣ ಗಾನ ವೃಂದ’ದ ಹುಟ್ಟುಹಾಕಿ ಹಲವಾರು ಕಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ರವೀಂದ್ರ ಕಲಾಕ್ಷೇತ್ರ, ಭಾರತೀಯ ವಿದ್ಯಾಭವನ, ಶಿರಡಿ ಸಾಯಿ ಅಧ್ಯಾತ್ಮಿಕ ಕೇಂದ್ರ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಉಡುಪಿಯ ಕೃಷ್ಣಮಠ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಗಾಯನ. ಆಕಾಶವಾಣಿ, ದೂರದರ್ಶನದಲ್ಲೂ ನೀಡಿದ ಕಾರ್ಯಕ್ರಮಗಳು, ಹಲವಾರು ಧ್ವನಿ ಸುರಳಿಗಳ ಬಿಡುಗಡೆ, ಉಡುಪಿಯ ಕೃಷ್ಣ ಮಂದಿರದ ಗರ್ಭಗುಡಿಯಲ್ಲಿ ಪಂ. ಭೀಮಸೇನ ಜೋಷಿಯವರ ನಂತರ ಸಂಗೀತ ಕಲಾಪ ನಡೆಸಿಕೊಟ್ಟ ಏಕೈಕ ಸುಗಮಸಂಗೀತ ಕಲಾವಿದ ಎಂಬ ಹೆಗ್ಗಳಿಕೆ.

ಅಮೆರಿಕದ ವಾಷಿಂಗ್‌ಟನ್‌ನಲ್ಲಿ ನಡೆದ ಅಕ್ಕಾ ವಿಶ್ವ ಕನ್ನಡ ಸಮ್ಮೇಳನದಲ್ಲೂ ಪಾಲ್ಗೊಂಡು ನೀಡಿದ ಕಾರ್ಯಕ್ರಮ. ಇದೀಗ ಮನಃಶಾಸ್ತ್ರದ ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಮಾರ್ಗದರ್ಶನ, ಸದ್ಯ ಬೆಂಗಳೂರು ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರವಾಚಕರಾಗಿ ಸಲ್ಲಿಸುತ್ತಿರುವ ಸೇವೆ.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌