Jootoor Designs

Arrow Up

Arrow Down

  

ರಂಜಾಳ ಗೋಪಾಲ ಶೆಣೈ

ರಂಜಾಳ ಗೋಪಾಲ ಶೆಣೈವಿಶ್ವವಿಖ್ಯಾತ ಶಿಲ್ಪಿ ಗೋಪಾಲ ಶೆಣೈರವರು ಹುಟ್ಟಿದ್ದು ಕಾರ್ಕಳದ ಹತ್ತಿರದ ರಂಜಾಳದಲ್ಲಿ. ತಂದೆ ಜನಾರ್ಧನ ಶೆಣೈ, ಶ್ರೀ ವೆಂಕಟ್ರಮಣ ದೇವಳದ ಸಂಸ್ಕೃತ ಪಾಠಶಾಲೆಯಲ್ಲಿ ಏಳನೆಯ ತರಗತಿಯವರೆಗೆ ಓದು. ಬಾಲಕನಾಗಿರುವಾಗಲೇ ಮಣ್ಣಿನ ಗಣಪತಿ ನಿರ್ಮಿಸಿ ಊರವರ ಗಮನ ಸೆಳೆದಿದ್ದರು. ಶಿಲ್ಪಕಲೆ ವಂಶ ಪಾರಂಪರ್ಯವಾಗೇನೂ ಬಂದಿರದಿದ್ದರೂ ತಂದೆ ಜನಾರ್ಧನ ಶೆಣೈರವರು ಶ್ರೀಮದ್ಭುವನೇಂದ್ರಸ್ವಾಮಿಗಳಲ್ಲಿ ಕಲಿತ ಶಿಲ್ಪಕಲೆ.

ಚಿತ್ರಕಲೆಯಲ್ಲಿ ಆಸಕ್ತಿಯಿದ್ದ ಗೋಪಾಲ ಶೆಣೈರವರು ಮದರಾಸು ಸರಕಾರದ ಚಿತ್ರಕಲಾ ಶಾಲೆಯಿಂದ ಇಂಟರ್ ಮೀಡಿಯೆಟ್ ಪರೀಕ್ಷೆ ಪಾಸು ಮಾಡಿದರು. ವೆಂಕಟ್ರಮಣ ದೇವಳದ ಸಂಸ್ಕೃತ ಪಾಠಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಎಂಟು ವರ್ಷಗಳ ಕಾಲ ಸಲ್ಲಿಸಿದ ಸೇವೆ. ಆ ಅವಧಿಯಲ್ಲಿ ಸಂಸ್ಕೃತ ಮಹಾಕಾವ್ಯ, ಧರ್ಮಗ್ರಂಥ, ಜೈನ ಶಾಸ್ತ್ರಗಳ ವಿಶೇಷಾಧ್ಯಯನ. ಕಲಿಕೆಗಾಗಿ ಪ್ರಾರಂಭಿಸಿದ್ದು ಉಂಗುರದ ನೀಲಿ, ಪಚ್ಚೆ, ಕೆಂಪು ಕಲ್ಲುಗಳಲ್ಲಿ ಮೋನೋಗ್ರಾಂ ಕೆತ್ತನೆ. ಶಿಲ್ಪದಷ್ಟೇ ಚಿತ್ರಕಲೆಯಲ್ಲೂ ಪರಿಣತರು. ಹಿರಿಯಂಗಡಿ ಮಾನಸ್ತಂಭಗಳ ಮೇಲೆ ಅನೇಕ ವರ್ಣಚಿತ್ರಗಳ ಕೆತ್ತನೆ.

ಕುಂಚ, ವರ್ಣಗಳೊಡನೆ ಆಟವಾಡುತ್ತ ಶ್ರೀಮದ್ಭುವನೇಂದ್ರ ಶಿಲ್ಪಶಾಲೆ ಸ್ಥಾಪಿಸಿ ಸುತ್ತಿಗೆ, ಉಳಿ, ಚಾಣಗಳನ್ನು ಹಿಡಿದರು. ರಂಜಾಳರಿಗೆ ಮೊದಲ ಕೀರ್ತಿ ತಂದ ಶಿಲ್ಪ ಕಾರ್ಕಳದ ವೆಂಕಟ್ರಮಣ ದೇವಳದ ಗರುಡ ಮಂಟಪದ ನಾಲ್ಕು ಕಂಭಗಳ ಕಲಾವೈಖರಿ. ಪ್ರತಿ ಸ್ತಂಭದಲ್ಲೂ ಹೇರಳವಾದ ಕುಸುರಿ ಕೆಲಸ, ಚಿಗುರೆಲೆ, ಮೊಗ್ಗು, ಹೂವು, ಮಕರಂದ ಹೀರುವ ಜೇನ್ನೊಣ, ಹಕ್ಕಿ, ದ್ರಾಕ್ಷಿಗೊಂಚಲು, ಅಳಿಲು, ಗುಬ್ಬಚ್ಚಿಗೂಡು, ಕೊಕ್ಕಿನಿಂದ ತಿನಿಸು ಕಸಿಯುತ್ತಿರುವ ಹಕ್ಕಿ ಮುಂತಾದ ಕಲಾವೈಭವ.

ಧರ್ಮಸ್ಥಳಕ್ಕೆ ಕೆತ್ತಿಕೊಟ್ಟ ಬಾಹುಬಲಿಯ ೩೯ ಅಡಿ ಎತ್ತರದ ಮೂರ್ತಿ, ಉತ್ತರ ಪ್ರದೇಶದ ಫಿರೋಜ್‌ ನಗರಕ್ಕೆ ಬಾಹುಬಲಿ, ಜಪಾನಿನ ತ್ಸುಬೇಸಾ ಬೌದ್ಧ ಮಂದಿರಕ್ಕೆ ೬೭ ಅಡಿ ಎತ್ತರದ ಬುದ್ಧಮೂರ್ತಿ, ಜಪಾನಿನ ನಾಲಾ ಯಾತ್ರಾಸ್ಥಳಕ್ಕೆ ಮಲಗಿರುವ ಬುದ್ಧ, ಮುಂಬಯಿಗಾಗಿ ರಾಮ, ಲಕ್ಷ್ಮಣ, ಸೀತೆ, ಹನುಮಂತ ವಿಗ್ರಹ, ಲಂಡನೆಗೆ ಶೇಕ್ಸ್‌ಪಿಯರನ ವಿಗ್ರಹ ಹೀಗೆ ಪ್ರಪಂಚದಾದ್ಯಂತ ಹರಡಿದ ಕೀರ್ತಿ.

ಸಂದ ಗೌರವಗಳಿಗೆ ಲೆಕ್ಕವಿಲ್ಲ. ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಧರ್ಮಸ್ಥಳದ ಹೆಗ್ಗಡೆಯವರಿಂದ ಬಂಗಾರದ ಕಡಗ, ಶಿಲ್ಪ ವಿಶಾರದ ಬಿರುದು, ಕಾಶೀ ಮಠದಿಂದ ‘ಶಿಲ್ಪ ಸಾಮ್ರಾಜ್ಯ ಚಕ್ರವರ್ತಿ’ ಬಿರುದು, ಭಾರತ ಸರಕಾರದ ಮಾಸ್ಟರ್ ಕ್ರಾಫ್ಟ್‌ಸ್‌ಮನ್ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದುವು.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌