Jootoor Designs

Arrow Up

Arrow Down

  

ಎಸ್. ಬಾಲಸುಬ್ರಹ್ಮಣ್ಯಂ (ಎಸ್. ಬಾಲಿ)

ಎಸ್. ಬಾಲಸುಬ್ರಹ್ಮಣ್ಯಂ (ಎಸ್. ಬಾಲಿ)ಹಲವಾರು ವಾದ್ಯಗಳ ನುಡಿಸುವಿಕೆಯಲ್ಲಿ ಪ್ರಖ್ಯಾತರಾಗಿರುವ ಬಾಲಿಯವರು ಹುಟ್ಟಿದ್ದು ಬೆಂಗಳೂರಿನ ಸಂಗೀತ ಕಲಾಭಿರುಚಿಯ ಕುಟುಂಬದಲ್ಲಿ. ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್, ತಾಯಿ ಸಾವಿತ್ರಿ. ಎಳವೆಯಿಂದಲೇ ಸಂಗೀತದತ್ತ ಒಲವು. ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಕಲಿತದ್ದು ಮೃದಂಗ. ಹಲವಾರು ಶಾಸ್ತ್ರೀಯ ಹಾಗೂ ಲಘು ಸಂಗೀತಗಾರರಿಗೆ ನೀಡಿದ ಮೃದಂಗ ಪಕ್ಕವಾದ್ಯ ಸಹಕಾರ.

ಮೃದಂಗವನ್ನು ಒಂದು ಭದ್ರ ಬುನಾದಿಯ ಮೇಲೆ ಕಲಿತದ್ದು, ತಬಲ, ಢೋಲಕ್, ಢೋಲ್ಕಿ, ಖೋಲ್, ಖಂಜಿರ ಮುಂತಾದ ವಾದ್ಯ ನುಡಿಸಲು ಪಡೆದ ಪರಿಣತಿ. ಸಕಲ ಲಯ ವಾದ್ಯಗಳ ನುಡಿಸುವಿಕೆಯಲ್ಲಿ ಪರಿಣತಿ ಪಡೆದ ಏಕೈಕ ಲಯವಾದ್ಯಗಾರರೆಂಬ ಹೆಗ್ಗಳಿಕೆ. ಸಂಗೀತಗಾರರಿಂದ, ಸಂಗೀತ ಪ್ರೇಮಿಗಳಿಂದ ಪಡೆದ ‘ರಿದಮ್ ಕಿಂಗ್’ ಬಿರುದು.

ಹೆಸರಾಂತ ಗಾಯಕರುಗಳಾದ ಬಾಳಪ್ಪ ಹುಕ್ಕೇರಿ, ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಶ್ಯಾಮಲಭಾವೆ, ಅಶ್ವತ್ಥ್, ರತ್ನಮಾಲಾ ಪ್ರಕಾಶ್ ಮುಂತಾದ ಗಾಯಕ ಗಾಯಕಿಯರುಗಳಿಗೆ ನೀಡಿದ ಸಾಥಿ. ಚಲನಚಿತ್ರ, ನೃತ್ಯ, ನಾಟಕ, ಕಿರುತೆರೆ, ಧ್ವನಿಮುದ್ರಣ ಕಾರ್ಯಗಳಲ್ಲಿ, ಖ್ಯಾತ ಸಂಗೀತಗಾರರುಗಳಾದ ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಟಿ.ಜಿ. ಲಿಂಗಪ್ಪ, ಅನಂತಸ್ವಾಮಿ, ಅಶ್ವತ್ಥ್-ವೈದಿ ಮುಂತಾದವರ ಸಂಗೀತ ಸಂಯೋಜನೆಗಳಿಗೆ ಲಯ ಸಂಯೋಜನೆ. ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್-ಅರೇಂಜರ್-ಕಂಡಕ್ಟರ್ ಎಂಬ ಹೆಗ್ಗಳಿಕೆ, ಹಲವಾರು ಧ್ವನಿಸುಗರಳಿ, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ. ಅಮೆರಿಕಾ ಸಂಯುಕ್ತ ಸಂಸ್ಥಾನ, ಅರಿಜೋನದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂಗೀತ ಕಾರ್ಯಕ್ರಮದ ಜಯಭೇರಿ.

ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ ಅಹಮ್‌ದರವರ ನಿತ್ಯೋತ್ಸವದಲ್ಲಿ ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ನೀಡಿದ ವಾದ್ಯದ ನೆರವು, ರಾಜ್ಯ ಸಂಗೀತ ನೃತ್ಯ ಅಕಾಡಮಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿಂದ ತಾಳ ಬ್ರಹ್ಮ, ಲಯ ಚಕ್ರವರ್ತಿ, ಕಲಾಕೋವಿದ ಮುಂತಾದ ಬಿರುದು ಸನ್ಮಾನಗಳು.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌