Jootoor Designs

Arrow Up

Arrow Down

  

ಸಂಸ

ಸಂಸಹೆಸರಿನಷ್ಟೇ ನಿಗೂಢ ವ್ಯಕ್ತಿತ್ವದ ಸಂಸರು ಹುಟ್ಟಿದ್ದು ಯಳಂದೂರು ತಾಲ್ಲೂಕಿನ ಅಗರ ಗ್ರಾಮ. ಹುಟ್ಟಿದ ಹೆಸರು ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್, ತಂದೆ ನರಸಿಂಹ ಪಂಡಿತರು, ತಾಯಿ ಗೌರಮ್ಮ. ಒಡಹುಟ್ಟಿದ ಅಣ್ಣನಿಗಿಂತ ತಂಗಿಯೊಡನೆ ಅನ್ಯೋನ್ಯತೆ-ಪ್ರೀತಿ.

ಪ್ರಾಥಮಿಕ ಶಿಕ್ಷಣ ಕೊಳ್ಳೆಗಾಲದ ಕುನಗನಹಳ್ಳಿ. ಮಾಧ್ಯಮಿಕ ಶಿಕ್ಷಣ ಕೊಳ್ಳೆಗಾಲದ ತಾಲ್ಲೂಕು ಬೋರ್ಡ್ ಮಿಡ್ಲ್

ಸ್ಕೂಲ್. ಹೈಸ್ಕೂಲು ಓದಿದ್ದು ಮೈಸೂರಿನ ಮರಿಮಲ್ಲಪ್ಪ ಹೈಸ್ಕೂಲು. ಮೆಟ್ರಿಕ್ಯುಲೇಷನ್ ಮುಗಿಸದಿದ್ದರೂ ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ. ತಂದೆಯ ಮರಣದಿಂದ ಕಡಿದ ಸಾಂಸಾರಿಕ ಬಂಧನ.

ಹತ್ತಿದ ಸಾಹಿತ್ಯದ ಹುಚ್ಚು. ೧೭ರ ಹರೆಯದಲ್ಲೇ ‘ಕೌಶಲ’ ಕಾದಂಬರಿ ಪ್ರಕಟಣೆ. ೧೯೧೯ರಿಂದ-೧೯೩೫ರವರೆಗೆ ಮೈಸೂರು ಶಾರದಾ ವಿಲಾಸ ಶಾಲೆ, ಮಂಗಳೂರಿನ ಪ್ರೆಸ್, ಹೆಬ್ಬಾಲೆಯ ರೂರಲ್ ಎ.ವಿ. ಹೈಸ್ಕೂಲು, ರೈಲ್ವೆ ಗುಮಾಸ್ತೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಮುಂತಾದೆಡೆ ಉದ್ಯೋಗ. ಒಂದೆಡೆ ನಿಲ್ಲದ ಜೀವ. ದೇಶಾಟನೆ ಸುಮಾರು ೨೦ ವರ್ಷಗಳು. ಫಿಜಿ ದ್ವೀಪ, ಟಿಬೆಟ್, ಅಫಘನಿಸ್ತಾನ, ಬಲೂಚಿಸ್ತಾನ, ಬರ್ಮಾ, ದಕ್ಷಿಣ ಆಫ್ರಿಕಾಕ್ಕೆ ಭೇಟಿ. ಕಡೆಗೆ ಮೈಸೂರಿನಲ್ಲಿ ಕಂಡ ನೆಲೆ.

ಮೈಸೂರಿನ ಅರಸರ ಚರಿತ್ರೆಯನ್ನೊಳಗೊಂಡ ಸುಮಾರು ೨೩ ನಾಟಕಗಳ ರಚನೆ. ಉಳಿದಿರುವುದು ಆರು ನಾಟಕಗಳು. ಸುಗುಣ ಗಂಭೀರ, ವಿಗಡ ವಿಕ್ರಮರಾಯ, ವಿಜಯ ನಾರಸಿಂಹ, ಬಿರುದಂತೆಂಬರ ಗಂಡ, ಬೆಟ್ಟದ ಅರಸು ಮತ್ತು ಮಂತ್ರ ಶಕ್ತಿ.

ಕೌಶಲ ಮತ್ತು SHERLOCK HOMES IN JAIL ಎರಡು ಕಾದಂಬರಿಗಳು. ಶ್ರೀಮಂತೋದ್ಯಾನ ವರ್ಣನಂ, ಸಂಸಪದಂ, ಈಶಪ್ರಕೋಪನ, ನರಕ ದುರ್ಯೋಧನೀಯಂ, ಅಚ್ಚುಂಬ ಪದ್ಯಕಾವ್ಯಗಳ ರಚನೆ. ಇವುಗಳಲ್ಲಿ ಮೊದಲೆರಡು ಲಭ್ಯ.

ಚಿಕ್ಕ ವಯಸ್ಸಿನಲ್ಲೇ ತಂದೆಯ ಸಾವಿನಿಂದ ಅನಾಥ ಭಾವ. ತನ್ನನ್ನು ಕಂಡರೆ ಲೋಕಕ್ಕೆ ಸಹನೆಯಿಲ್ಲ. ಇತರರು ತನ್ನ ಬಾಳನ್ನು ಕೆಡಿಸಲು ಯತ್ನಿಸುತ್ತಿದ್ದಾರೆ, ತನ್ನ ಕೃತಿಗಳನ್ನು ಕದ್ದು ಕೃತಿ ಚೌರ‍್ಯ ಹೊರೆಸುತ್ತಿದ್ದಾರೆ. ಚಾರಿತ್ರ್ಯವಧೆ ಮಾಡುತ್ತಿದ್ದಾರೆ, ಪೊಲೀಸರು ಹಿಂಸಿಸಲು ಬೆನ್ನಟ್ಟಿದ್ದಾರೆ ಎಂಬ ಭ್ರಮೆಯಿಂದ ಪರ‍್ಸಿಕ್ಯೂಷನ್ ಕಾಂಪ್ಲೆಕ್ಸ್‌ಗೆ ಒಳಗಾಗಿ ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಸಣ್ಣ ಕೊಠಡಿಯಲ್ಲಿ ೧೪.೨.೧೯೩೯ರಂದು ಆತ್ಮಹತ್ಯೆ ಮಾಡಿಕೊಂಡರು.

ಕಾದಂಬರಿಗಳು

 • ಕೌಶಲ
 • Sherlock Homes in jail

ಕಾವ್ಯ

 • ಶ್ರೀಮಂತೋದ್ಯಾನವರ್ಣನಂ
 • ಸಂಸ ಪದಮ್
 • ಈಶಪ್ರಕೋಪನ
 • ನರಕದುರ್ಯೋಧನೀಯಮ್
 • ಅಚ್ಚುಂಬ ಶತಕ

ನಾಟಕಗಳು

 • ಸುಗುಣ ಗಂಭೀರ
 • ಮಹಾಪ್ರಭು
 • ದೃಷ್ಟಿದಾನ
 • ಶರಣಾಗತ ಪರಿಪಾಲಕ
 • ರತ್ನಸಿಂಹಾಸನಾರೋಹಣ
 • ಮುತ್ತಿನ ಮೂಗುತಿ
 • ರಾಜವಿಭವೋತ್ಸವ
 • ತೆರಕಣಾಂಬಿ
 • ಅಮಂಗಳಾವಾಪ
 • ಬೊಕ್ಕಳಿಕ
 • ಬೆಟ್ಟದ ಅರಸು
 • ಜಗಜಟ್ಟಿ
 • ವಿಗಡ ವಿಕ್ರಮರಾಯ
 • ಚಲಗಾರ ಚನ್ನಯ್ಯ
 • ವಿಜಯನಾರಸಿಂಹ
 • ಮುಸ್ತಾಫ ವಿಜಯ
 • ತುಂಗ ನಿರ್ಯಾತನ
 • ನಂಜುಂಡ ನರಿ
 • ಶಪಥಮಂಗಳ
 • ಹಂಗಳ
 • ಸಂಚಿಯ ಹೊನ್ನಿ
 • ಬಿರುದೆಂತಂಬರ ಗಂಡ
 • ಮಂತ್ರಶಕ್ತಿ
 • Lali and Mammal

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌