Jootoor Designs

Arrow Up

Arrow Down

  

ಸಾ.ಕೃ. ಪ್ರಕಾಶ್

ಸಾ.ಕೃ. ಪ್ರಕಾಶ್ಹಾಸ್ಯಲೇಖಕ, ಪತ್ರಿಕೋದ್ಯಮಿಯಾಗಿದ್ದ ಪ್ರಕಾಶ್‌ರವರು ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ತಂದೆ ಎಸ್‌. ಕೃಷ್ಣಮೂರ್ತಿ, ತಾಯಿ ಕೌಸಲ್ಯಮ್ಮ, ಓದಿದ್ದು ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ, ಬಿ.ಇ. ಪದವಿಯ ನಂತರ ಉದ್ಯೋಗ ಹುಡುಕಿಕೊಂಡದ್ದು ಜನರಲ್‌ ಕನ್‌ಸ್ಟ್ರಕ್ಷನ್‌ ಕಂಪನಿ, ಥರ್ಮಲ್‌ ಇನ್‌ಸುಲೇಷನ್‌ ವರ್ಕ್ಸ್ ಬೆಂಗಳೂರು ಮತ್ತು ಅಹಮದಾಬಾದ್‌ನ ಐ.ಎಸ್.ಆರ್.ಓ.ದಲ್ಲಿ ಕೆಲಕಾಲ.

ಸ್ವತಂತ್ರ ಉದ್ಯೋಗಿಯಾಗಬೇಕೆಂದು ಟೆಲಿಫೋನಿಗೆ ಸಂಬಂಧಿಸಿದ ಉಪಕರಣಗಳ ತಯಾರಿಕೆ ಮತ್ತು ವಿತರಣೆಯ ಜೊತೆಗೆ ಎಲೆಕ್ಟ್ರಿಕಲ್‌ ಅಂಗಡಿ ತೆರೆದು ವಿದ್ಯುಚ್ಛಕ್ತಿ ಉಪಕರಣಗಳ ಮಾರಾಟ ಮತ್ತು ದುರಸ್ತಿ ಕೆಲಸ.

ಬಾಲ್ಯದಿಂದಲೂ ಸಾಹಿತ್ಯದ ಕಡೆ ಬೆಳೆದ ಒಲವು. ಹೈಸ್ಕೂಲು-ಕಾಲೇಜಿನಲ್ಲಿದ್ದಾಗಲೇ ಪ್ರಖ್ಯಾತ ಬರಹಗಾರರ ಕಾದಂಬರಿಗಳ ಓದು-ಚರ್ಚೆ. ಧ್ರುವ ಮಾಸ ಪತ್ರಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿ ಮತ್ತು ಮಲ್ಲಿಗೆ ಮಾಸ ಪತ್ರಿಕೆಯ ಸಂಪಾದಕರ ಬಳಗ ಸೇರಿ ೩ ವರ್ಷಕಾಲ ಹೊತ್ತ ಸಂಪಾದಕರ ಜವಾಬ್ದಾರಿ.

ಬರವಣಿಗೆಯಲ್ಲಿ ತೊಡಗಿಸಿಕೊಂಡು ಬರೆದದ್ದು ಹಾಸ್ಯಬರಹಗಳು. ‘ಜ್ಯೇಷ್ಠನಿಗೆ ಬಂದ ಅನಿಷ್ಟ’, ‘ನಗೆಗೆ ದಾರಿಯಾವುದಯ್ಯ’, ‘ಮಿಸಿಸ್ಟ್ರುಸುಳ್ಳು ಹೇಳ್ತಾರಾ’, ‘ವೈದ್ಯೋನಾರಾಯಣೋಹರಿಃ’, ‘ಮಂತ್ರಿ ಆಗ್ತೀಯಾ?’ ‘ಇರುಳು ಕಂಡ ಬಾವಿ’, ‘ಎಲ್ಲರಂತಲ್ಲ ನನ ಹೆಂಡತಿ’, ‘ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ’ ಮುಂತಾದ ಹಾಸ್ಯಸಂಕಲನಗಳು ಪ್ರಕಟಗೊಂಡಿವೆ.

‘ಮೃತ್ಯುಕೂಪ’, ‘ಲವ್‌ಮಾಡೋಣ’, ‘ಸೇಡಿನಸುಳಿ’, ‘ಸಾಯಲು ಸಮಯವಿಲ್ಲ’, ‘ರಾಧೇಯ’, ‘ಮೀನಿನ ಹೆಜ್ಜೆ’ ಮುಂತಾದ ೧೫ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳು, ‘ನಗೆಲೇಸು’, ‘ನಕ್ಕರದೇಸ್ವರ್ಗ’, ‘ನಗೆತುಂತುರು’, ‘ನಗುನಗುತಾನಲಿ’, ‘ನಗೆನಂದನ’, ‘ಲರ್ನಿಂಗ್‌ ಲೈಸನ್ಸ್‌’, ‘ಹಾಸ್ಯತರಂಗ’, ‘ಹಾಸ್ಯಸುಧಾ’, ‘ರೆಮಿ ಅಂಡ್‌ ಶೋ’, ‘ಹಾಸ್ಯಪಲ್ಲವಿ’ ಮುಂತಾದ ನಗೆ ತುಣುಕು (ಜೋಕ್ಸ್‌) ಗಳ ಸಂಕಲನಗಳಲ್ಲದೆ ಮಕ್ಕಳಿಗಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಯಂತ್ರಮಾನವ, ಕೇಳುಮಗುವೆಕಥೆಯಾ, ಚಾಣಕ್ಯ, ಬೇತಾಳಕಥೆಗಳು, ವಿದ್ಯಾರಣ್ಯ ಮುಂತಾದ ೧೨ ಕೃತಿಗಳು.

ಹಲವಾರು ಪುಸ್ತಕಗಳನ್ನು ತಮ್ಮ ಸ್ವಂತ ಪ್ರಕಾಶನ ‘ಪಲ್ಲವಿ ಪ್ರಕಾಶನ’ದಡಿಯಲ್ಲೂ ಹೊರತಂದಿದ್ದಾರೆ. ಸಾಮಾನ್ಯರಿಗಾಗಿ ಬರೆದದ್ದು ರಾಮಾಯಣ, ಮಹಾಭಾರತ ಮತ್ತು ಚಾರಿತ್ರಿಕ ಪಾತ್ರಗಳನ್ನೊಳಗೊಂಡ ಕಥಾಚಿತ್ರಣದ ‘ಕೇಳರಿಯದ ಕಿರುಗತೆಗಳು’ ಮತ್ತು ‘ಕೇಳಲೇಬೇಕಾದ ಕಥೆಗಳು?

ಸುಧಾ, ತರಂಗ, ಮಂಗಳ ಪತ್ರಿಕೆಗಳಿಗಾಗಿ ನಿರ್ವಹಿಸಿದ ಹಾಸ್ಯತುಣುಕುಗಳ ಅಂಕಣಗಳಲ್ಲದೆ ದೂರದರ್ಶನದಲ್ಲಿ ಗೀತಪ್ರಿಯರ ನಿರ್ದೇಶನದಲ್ಲಿ ‘ರೋಜಾರಾಮಾಯಣ’, ‘ನಂಬಿಕೆಟ್ಟವರಿಲ್ಲವೊ’, ‘ಮನೆಮಾರಾಟ’, ‘ಅಪಘಾತ’, ಟಿ.ಎನ್‌.ಸೀತಾರಾಂ ನಿರ್ದೇಶನದಲ್ಲಿ ‘ರಹಸ್ಯ’ ಮತ್ತು ವಿಶ್ವಪ್ರಸಾದರ ನಿರ್ದೇಶನದಲ್ಲಿ ‘ಕಾರ್ಡಿಯಾಕ್‌ ಅರೆಸ್ಟ್‌’ ‘ಸುಪಾರಿ’, ‘ಸಂಕ್ರಾಂತಿ’, ‘ದಶಮಗ್ರಹ’ ಮುಂತಾದ ಧಾರಾವಾಹಿಗಳು ಪ್ರಸಾರಗೊಂಡಿವೆ.

ಅನೇಕ ಪ್ರಕಾಶನ ಸಂಸ್ಥೆಗಳೊಡನೆ ನಿಕಟಸಂಪರ್ಕ. ಅನಂತ ಪ್ರಕಾಶನ, ವನಸುಮ ಪ್ರಕಾಶನ, ಜ್ಯೋತಿ ಪ್ರಕಾಶನ, ವಿಜಯಪ್ರಕಾಶನ ಮತ್ತು ಸಂಘ-ಸಂಸ್ಥೆಗಳು ನಡೆಸುವ ಸಾಹಿತ್ಯ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಪಾಲ್ಗೊಂಡಿದ್ದಾರೆ. ಗೊರೂರು ಸಾಹಿತ್ಯಪ್ರಶಸ್ತಿ, ರತ್ನಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಕಾಶ್‌ರವರು ಹಾಸ್ಯಲೋಕದಿಂದ ಮರೆಯಾದದ್ದು ೨೦೦೩ ರ ಜನವರಿ ೨೩ ರಂದು.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌