Jootoor Designs

Arrow Up

Arrow Down

  

ಶ್ರೀನಿವಾಸ ಉಡುಪ

ಶ್ರೀನಿವಾಸ ಉಡುಪ‘ಶ್ರೀಮುಖ’, ‘ಹೋಶ್ರೀ’, ‘ಶ್ರೀಶ’ ಮುಂತಾದ ಕಾವ್ಯನಾಮಗಳಿಂದ ಕಥೆ, ಕವನ ಕಾದಂಬರಿಗಳ ಮೂಲಕ ಸಾಹಿತ್ಯಾಸಕ್ತರಿಗೆ ಪರಿಚಿತರಾಗಿದ್ದ ಶ್ರೀನಿವಾಸ ಉಡುಪರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಲ್ಲುಂಡೆಯಲ್ಲಿ ೧೯೩೩ ರ ಜನವರಿ ೮ ರಂದು. ತಂದೆ ಸುಬ್ಬರಾಯ ಉಡುಪರು, ತಾಯಿ ವೆಂಕಟಲಕ್ಷ್ಮಮ್ಮ.

ಎರಡು ವರ್ಷದ ಮಗುವಾಗಿದ್ದಾಗ ತೀವ್ರವಾದ ಜ್ವರಕ್ಕೆ ತುತ್ತಾಗಿ ಕಾಲುಗಳ ಶಕ್ತಿ ಕಳೆದುಕೊಂಡು ಬೆಂಗಳೂರಿಗೆ ಹೋಗಿ ವಿದ್ಯುತ್‌ ಚಿಕಿತ್ಸೆ ಪಡೆಯಬೇಕಾಯಿತು. ಎಂಟನೆಯ ವರ್ಷದಲ್ಲೆ ತಂದೆತಾಯಿಗಳನ್ನು ಕಳೆದುಕೊಂಡರೂ ಧೃತಿಗೆಡದೆ ಸೋದರಮಾವನ ಆಶ್ರಯದಲ್ಲಿ ಬೆಳೆದರು.

ಪ್ರಾರಂಭಿಕ ಶಿಕ್ಷಣ ಗಾಜನೂರಿನ ಪ್ರಾಥಮಿಕ ಶಾಲೆ, ಹೊಸ ನಗರದ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ. ೧೯೫೪ ರಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ತೇರ್ಗಡೆ . ಮನೆಯಲ್ಲಿ ಕಲಿತದ್ದು ಹಿಂದಿ ಭಾಷೆ. ಕಾಲೇಜು ಕಲಿಯಲಾರದೆ ಜೀವನ ನಿರ್ವಹಣೆಗಾಗಿ ಆಯ್ದುಕೊಂಡದ್ದು ಉದ್ಯೋಗ. ತೀರ್ಥಹಳ್ಳಿ ತಾಲ್ಲೂಕಿನ ಅರಳಿ ಸುರಳಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರಾಗಿ ನೇಮಕ. ಅಲ್ಲಿಂದ ಹೆದ್ದೂರು, ಹೊಸನಗರದ ವಿದ್ಯಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತ ಕೆಲಸ ಕೆಲಕಾಲ. ಈ ಸಂಧರ್ಭದಲ್ಲಿ ಶರಾವತಿ ಕಣಿವೆ ಯೋಜನೆಯ ಲೋಕೋಪಯೋಗಿ ಇಲಾಖೆಗೆ ಸೇರಿ ಕಾರ್ಗಲ್ಲಿನಲ್ಲಿ ಗುಮಾಸ್ತರಾಗಿ ಸೇರಿದ್ದು ಸಾಹಿತ್ಯಕೃಷಿಗೆ ಬಹಳಷ್ಟು ಅನುಕೂಲಕರವದ ವಾತಾವರಣವನ್ನು ಕಲ್ಪಿಸಿತು.

ಸುಮಾರು ೬೦ ಕಾದಂಬರಿಗಳು, ೧೩ ಕಥಾಸಂಕಲನಗಳು, ೧೬ ಮಕ್ಕಳ ಕೃತಿಗಳು, ೬ ನಾಟಕಗಳು, ೮ ಸಂಪಾದಿತ ಕೃತಿಗಳು, ಒಂದು ವಿಮರ್ಶೆ ಹಾಗೂ ಒಂದು ಕ್ಷೇತ್ರ ದರ್ಶನ ಕೃತಿ ಸೇರಿ ಅವರ ಸಾಹಿತ್ಯ ಕೃತಿಗಳ ಒಟ್ಟು ಸಂಖ್ಯೆಯೇ ಸುಮಾರು ೧೦೫.

ಇವರು ಬರೆದ ನೂರಾರು ಕಥೆಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲದೆ ವಿಶೇಷಸಂಚಿಕೆಗಳಲ್ಲಿ ಪ್ರಕಟಗೊಂಡು ‘ಮನೆಗೆ ಬಂದ ಮಗಳು’ (೧೯೫೭), ‘ನಿರಾಶೆಯ ಕೊನೆಯಲ್ಲಿ’ (೧೯೫೯), ಕಪ್ಪುಬೆಳಗಿತು, ಅವಳ ಕಥೆ (೧೯೬೦), ಬದುಕು, ಹೆಗ್ಗಡತಿ ಹೆತ್ತ ದೆವ್ವ (೧೯೬೫), ಹೊಸ ಕಥೆಗಳು (೧೯೬೭), ಪುರಾಣ ಕಥೆಗಳು (೧೯೭೩), ಸಂಭಾವಿತ (೧೯೭೭) ಮುಂತಾದ ಕಥಾ ಸಂಕಲನಗಳಲ್ಲಿ ಸೇರಿವೆ.

ಕೆಂಪುತುಟಿ, ಅವಳ ಬಳೆ, ಬಾಳಿನ ವೈಭವ, ಸೂರ್ಯಮುಖಿ, ಪ್ರೇಮದ ಮನೆ, ಶೀಲವಂತೆ, ಪ್ರೇಮಸಮರ, ಜೀವನದ ಜೊತೆಗಾರ, ತುಂಬಿದ ಬಾಳು, ಒಲಿದು ಬಂದವಳು, ಸೋತ ಹೃದಯ, ಹೆಣ್ಣಿನ ಹೃದಯ, ಮನೆಗೆ ಬಂದವಳು, ಆಕರ್ಷಣೆ ಮುಂತಾದ ೬೦ ಕಾದಂಬರಿಗಳು. ಇವುಗಳಲ್ಲಿ ನಲವತ್ತಕ್ಕೂ ಹೆಚ್ಚು ಕಾದಂಬರಿಗಳು ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಪುಸ್ತಕ ರೂಪದಲ್ಲೂ ಬಂದಿವೆ.

ತಮ್ಮ ದೈಹಿಕ ನ್ಯೂನತೆಯನ್ನೂ ಲೆಕ್ಕಿಸದೆ ಸದಾ ಸಾಹಿತ್ಯದ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದ್ದ ಉಡುಪರು ಹಲವಾರು ಸಂಘ-ಸಂಸ್ಥೆಗಳೊಡನೆ ನಿಕಟಸಂಪರ್ಕ ಹೊಂದಿದ್ದರು. ಶಿವಮೊಗ್ಗ ಜಿಲ್ಲಾ ಬರಹಗಾರರ ಸಂಘ, ಸಾಗರ ಕನ್ನಡ ಸಂಘ, ನವಚೇತನ ಯುವ ಸಂಘ, ರಾಷ್ಟ್ರೋತ್ಥಾನ ಬಳಗ, ಮಲೆನಾಡು ಗಮಕ ಕಲಾ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತಿನ ನಾಗರಿಕ ವೇದಿಕೆ ಇತ್ಯಾದಿಗಳಲ್ಲಿ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ದುಡಿದಿದ್ದಾರೆ.

ಹಲವಾರು ಸಾಹಿತ್ಯ ಸಮ್ಮೇಳನಗಳು ಸಂಘಟಕರಾಗಿಯೂ ದುಡಿದಿದ್ದಾರೆ. ಶಿವಮೊಗ್ಗ ಜಿಲ್ಲಾ ಬರಹಗಾರರ ಸಮ್ಮೇಳನದ ಕಾರ್ಯದರ್ಶಿಯಾಗಿ, ಹುಂಚದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ, ಸಾಗರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಹೊತ್ತ ಜವಾಬ್ದಾರಿಗಳು.

ಮಲೆನಾಡ ಈ ಕಥೆಗಾರರನ್ನು ಅರಸಿ ಬಂದ ಪ್ರಶಸ್ತಿಗಳು ಹಲವಾರು. ‘ಅವರು ಭೂತನಾಡನ್ನು ದಾಟಿ ಬಂದರು’ ಕಥೆಗೆ ೧೯೬೦ ರಲ್ಲಿ ಬೆಂಗಳೂರಿನ ಪೀಪಲ್‌ ಆರ್ಟಿಸ್ಟ್‌ಸ್‌ ಅಸೋಸಿಯೇಷನ್‌ ಪ್ರಶಸ್ತಿ; ‘ಅಮೃತಮಯಿ’ ನಾಟಕಕ್ಕೆ ೧೯೬೨ ರಲ್ಲಿ ಬೆಂಗಳೂರು ಆಕಾಶವಾಣಿ ಪ್ರಶಸ್ತಿ; ‘ಒಲಿದು ಬಂದವಳು’ ಕಾದಂಬರಿಗೆ ೧೯೬೭ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ; ‘ರೇಷ್ಮೆಸೀರೆ’ ನಾಟಕಕ್ಕೆ ೧೯೭೫ ರಲ್ಲಿ ವಿಶಾಲ ಕರ್ನಾಟಕ ದೀಪಾವಳಿ ನಾಟಕ ಸ್ಪರ್ಧಾ ಪ್ರಶಸ್ತಿ; ‘ಸಂಭಾವಿತ’ ಕಥಾಸಂಕಲನಕ್ಕೆ ೧೯೭೮ ರಲ್ಲಿ ದೇವರಾಜ ಬಹದ್ದೂರ್ ಪ್ರಶಸ್ತಿ; ಲಕ್ಷ್ಮೀ ಶ್ರೀನಿವಾಸ ಕಾದಂಬರಿಗೆ ತಿರುಪತಿ ತಿರುಮಲ ಧಾರ್ಮಿಕ ಪ್ರಶಸ್ತಿ ಮುಂತಾದವುಗಳ ಜೊತೆಗೆ ಶಿವಮೊಗ್ಗ ಹಾಗೂ ಹೊಸನಗರ ಕನ್ನಡ ಸಂಘ, ಪ್ರಬುದ್ಧ ಕರ್ನಾಟಕ ಚಿನ್ನದ ಹಬ್ಬದ ಸಂದರ್ಭದಲ್ಲಿ, ರಾಷ್ಟೋತ್ಥಾನ, ಹೇಮಂತ ಸಾಹಿತ್ಯ ಪ್ರಕಾಶನ ಸಂಸ್ಥೆಗಳಿಂದ, ೧೯೭೬ ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದ ಉಡುಪರು ಸಂಘಟನೆ, ಸಾಹಿತ್ಯ ಚಟುವಟಿಕೆ ಹೀಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲೆ ತೊಡಗಿಕೊಂಡಿದ್ದು ಸಾಹಿತ್ಯಪ್ರಿಯರಿಂದ ದೂರವಾದದ್ದು ೨೦೦೦ ದ ಮಾರ್ಚ್ ೯ ರಂದು.

ಕಥಾಸಂಕಲನ

 • ನಿರಾಶೆಯ ಕೊನೆಯಲ್ಲಿ
 • ಪುರಾಣ ಕಥೆಗಳು
 • ಬದುಕು
 • ಮನೆಗೆ ಬಂದ ಮಗಳು
 • ಹೆಗ್ಗಡತಿ ಹೆತ್ತ ದೆವ್ವ
 • ಹೊಸ ಕಥೆಗಳು

ನಾಟಕ

 • ರೇಷ್ಮೆ ಸೀರೆ
 • ಅಮೃತ ಹೃದಯ
 • ಗಣಪತಿ ಭರವಸೆ
 • ಮದುವೆ ಹೆಣ್ಣು

ಕಾದಂಬರಿ

 • ಒಲಿದು ಬಂದವಳು
 • ಕೆಂಪು ತುಟಿ
 • ಜೀವನದ ಜೊತೆಗಾರ
 • ತುಂಬಿದ ಬಾಳು
 • ಪ್ರೇಮದ ಮನೆ
 • ಬಾಳಿನ ವೈಭವ
 • ಮನೆಗೆ ಬಂದವಳು
 • ವಿಜಯಲಕ್ಷ್ಮಿ
 • ಶೀಲವಂತೆ
 • ಸೋತ ಹೃದಯ
 • ಸ್ನೇಹಶೀಲೆ

ಮಕ್ಕಳ ಕಾದಂಬರಿ

 • ಅಭಿಮನ್ಯು

ಮಕ್ಕಳ ಪದ್ಯಗಳು

 • ಪಾಪು ಪದ್ಯಗಳು

ಪುರಸ್ಕಾರ

 • ‘ಒಲಿದು ಬಂದವಳು’ ಕೃತಿಗೆ ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.
 • ‘ಅಮೃತ ಹೃದಯ’ ನಾಟಕ ಅಖಿಲ ಭಾರತ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಪುರಸ್ಕಾರ ಪಡೆದಿದೆ.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌