Jootoor Designs

Arrow Up

Arrow Down

  

ಶ್ರೀನಿವಾಸ್ ಜಿ. ಕಪ್ಪಣ್ಣ

ಶ್ರೀನಿವಾಸ್ ಜಿ. ಕಪ್ಪಣ್ಣರಂಗ ಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಪ್ರಮುಖ ಸಾಂಸ್ಕೃತಿಕ ಸಂಘಟಕರೆಂದೇ ಖ್ಯಾತಿ ಪಡೆದಿರುವ ಶ್ರೀನಿವಾಸ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಗಿರಿಯಪ್ಪ, ತಾಯಿ ಶ್ರೀಮತಿ ಜಯಮ್ಮ. ವಿದ್ಯಾಭ್ಯಾಸ ನ್ಯಾಷನಲ್ ಕಾಲೇಜಿನಿಂದ ಪಡೆದ ಪದವಿ, ಉದ್ಯೋಗಕ್ಕಾಗಿ ಸೇರಿದ್ದು ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಸೀನಿಯರ್ ಕಲಾವಿದರಾಗಿ ಸಲ್ಲಿಸಿದ ಸೇವೆ.

ಶಾಲಾ ದಿನಗಳಿಂದಲೇ ನಾಟಕದತ್ತ ಒಲವು. ೧೯೬೪ರಲ್ಲಿ ನ್ಯಾಷನಲ್ ಕಾಲೇಜು ಹಿಷ್ಟ್ರಿಯಾನಿಕ್ ಕ್ಲಬ್‌ನಲ್ಲಿ ಪ್ರಯೋಗದ ಮೊದಲ ಹಂತ. ನಾಟಕಗಳಿಗೆ ಸ್ಟೇಜ್, ಬೆಳಕು ವಿನ್ಯಾಸದಲ್ಲಿ (Lighting) ಪಡೆದ ವಿಶೇಷ ಪರಿಶ್ರಮ.

೧೯೭೨ರಲ್ಲಿ ನಟರಂಗ ನಾಟಕ ತಂಡದ ಹುಟ್ಟು. ತಂಡದ ಸಂಘಟನೆಯ ಜವಾಬ್ದಾರಿ. ಪೋಲಿಕಿಟ್ಟಿ, ಕಾಕನ ಕೋಟೆ, ತುಘಲಕ್, ಜೆಗೆವಾರ, ವೆಯಿಟಿಂಗ್ ಫಾರ್ ಗಾಡೋ, ಮಿಡ್ ಸಮರ್ ನೈಟ್ಸ್‌ಡ್ರೀಮ್, ಕಾಕೇಶಿಯನ್ ಜಾಕ್ ಸರ್ಕಲ್, ಸಂಕ್ರಾಂತಿ, ಶೋಕ ಚಕ್ರ, ಸಿರಿಸಂಪಿಗೆ, ಅಧಃ ಪಾತಾಳ, ನಮ್ಮೊಳಗೊಬ್ಬ ನಾಜೂಕಯ್ಯ, ತಲೆದಂಡ – ತಂಡ ಪ್ರದರ್ಶಿಸಿದ ಪ್ರಮುಖ ನಾಟಕಗಳು. ಇದೇ ಕಲಾವಿದರ ತಂಡದಿಂದ ಕಾಕನ ಕೋಟೆ ಚಲನ ಚಿತ್ರ ನಿರ್ಮಾಣ.

ಸಿಯೋಲ್, ದಕ್ಷಿಣ ಕೊರಿಯಾ, ಜಪಾನ್, ಹಾಂಗ್‌ಕಾಂಗ್, ಸಿಂಗಪೂರ್ ದೇಶಗಳ ನಾಟಕೋತ್ಸವ, ವಿಚಾರ ಸಂಕಿರಣಗಳಲ್ಲಿ ಭಾಗಿ, ನೃತ್ಯ, ರಂಗಭೂಮಿಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ನೃತ್ಯೋತ್ಸವ ಸಂಘಟನೆಯ ಜವಾಬ್ದಾರಿ.

ಸಾರ್ಕ್ ಉತ್ಸವ, ರಷ್ಯಾ ಸಾಂಸ್ಕೃತಿಕ ಉತ್ಸವ, ಪೀಟರ್ ಬ್ರೂಕ್ ಮಹಾಭಾರತದ ಬಗ್ಗೆ ನಡೆದ ರಾಷ್ಟ್ರೀಯ ಗೋಷ್ಠಿ, ರಾಷ್ಟ್ರೀಯ ಕ್ರೀಡಾಮೇಳ, ಮಕ್ಕಳ ಚಲನ ಚಿತ್ರೋತ್ಸವ ಮುಂತಾದುವುಗಳ ಸಂಘಟನಾ ಹೊಣೆ.

ಕೊಲಂಬೊ, ಬಾಂಗ್ಲಾ, ಜರ್ಮನಿ, ಎಕ್ಸ್‌ಪೊ, ವಿಶ್ವ ಕನ್ನಡ ಸಮ್ಮೇಳನ, ದೆಹಲಿಯ ಗಣರಾಜ್ಯೋತ್ಸವ ಮುಂತಾದೆಡೆಗಳ ಸಾಂಸ್ಕೃತಿಕ ತಂಡದ ಕಲಾ ನಿರ್ದೇಶನದ ಜವಾಬ್ದಾರಿ.

ಸಂದ ಪ್ರಶಸ್ತಿಗಳು-ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗ ಪ್ರತಿಷ್ಠಾನ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದುವು.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌