Jootoor Designs

Arrow Up

Arrow Down

  

ಟಿ. ಎಂ. ಸುಬ್ಬರಾಯ

ಟಿ. ಎಂ. ಸುಬ್ಬರಾಯಪ್ರಖ್ಯಾತ ಕಥೆಗಾರರು, ಕಾದಂಬರಿಕಾರರು, ಯಕ್ಷಗಾನ ಪ್ರಸಂಗ ಲೇಖಕರು ಆದ ಟಿ. ಎಂ. ಸುಬ್ಬರಾಯರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಬಣ್ಣೂ ಮನೆ (ಬಾನುಮನೆ) ಗ್ರಾಮದ ತೆಂಕೋಡು ಮನೆಯಲ್ಲಿ.

ತಂದೆ ಟಿ.ವಿ. ಮಹಾಬಲಗಿರಿಯಪ್ಪ, ತಾಯಿ ಫಣಿಯಮ್ಮ.

ಪ್ರಾರಂಭಿಕ ಶಿಕ್ಷಣ ತುಮರಿ, ಹಿರೇ ಭಾಸ್ಕರದಲ್ಲಿ. ಪ್ರೌಢಶಾಲಾಭ್ಯಾಸ ಸಾಗರದ ಮುನಿಸಿಪಲ್ ಹೈಸ್ಕೂಲಿನಿಂದ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಿಂದ ಪದವಿ ಪಡೆದ ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಬೆಳಗಾವಿಯ ಸರಕಾರಿ ಶಿಕ್ಷಣ ಕಾಲೇಜಿನಿಂದ ಪಡೆದ ವೃತ್ತಿ ಶಿಕ್ಷಣ.

ಉದ್ಯೋಗಕ್ಕೆ ಸೇರಿದ್ದು ಶಿರಸಿಯ ಆವೇ ಮರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತಿ.

ಶಾಲಾ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ಕಾದಂಬರಿ, ಯಕ್ಷಗಾನ ಪ್ರಸಂಗಗಳ ರಚನೆಯಲ್ಲಿ ಅಭಿರುಚಿ ಬೆಳೆಸಿಕೊಂಡಿದ್ದು ಬರೆದ ಹಲವಾರು ಕಥೆಗಳು ಪ್ರಕಟಿತ. ಸುಮಾರು ಆರುನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಬರೆದಿದ್ದು ಮಯೂರ, ಪ್ರಜಾವಾಣಿ, ತರಂಗ, ತುಷಾರ ಮುಂತಾದ ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿವೆ.

ಕೆಲವು ಸಣ್ಣ ಕಥೆಗಳು ತೆಲುಗು, ಮಲಯಾಳಂ ಭಾಷೆಗಳಿಗೂ ಅನುವಾದಗೊಂಡಿವೆ. ಇವರು ಬರೆದ ಸಣ್ಣ ಕಥೆಗಳು ಸುಮಾರು ಆರು ಸಂಕಲನಗಳಾದ ಕೆರೆ, ಲಿಂಡಾ…ಬೆಲಿಂಡಾ, ಶಾಶ್ವತಿ ಮತ್ತು ಇತರ ಕಥೆಗಳು. ನೂರ ಇಪ್ಪತ್ತ್ಯೆದು ಕಥೆಗಳು, ಭಾಗ ೧, ನೂರ ಇಪ್ಪತ್ತ್ಯೆದು ಕಥೆಗಳು, ಭಾಗ ೨ ಮತ್ತು ಋತುಪರ್ಣ ಮತ್ತು ಇತರ ಕಥೆಗಳು ಮುಂತಾದವುಗಳಲ್ಲಿ ಸೇರಿವೆ.

ಪತ್ರಿಕೋದ್ಯಮಿಯಾಗಿಯೂ ಕಾರ‍್ಯ ನಿರ್ವಹಿಸುತ್ತಿರುವ ಸುಬ್ಬರಾಯರು ಉದಯವಾಣಿ ಪತ್ರಿಕೆಗಾಗಿ ೨೭ ವರ್ಷಗಳ ಕಾಲ ವರದಿಗಾರರಾಗಿ, ಆದದ್ದು – ಆಗಬೇಕಾದ್ದು, ಉತ್ತರ ಕನ್ನಡ ಜಿಲ್ಲಾ ವಾರ್ತಾಪತ್ರ, ಶಿರಸಿ ತಾಲ್ಲೂಕು ವಾರ್ತಾಪತ್ರ, ಬಲ್ಲಿರೇನಯ್ಯಾ…, ಅನನ್ಯ = ಅನ್ಯೋನ್ಯ, ಮಹಿಳಾ ಸಾಧಕಿಯರು ಮುಂತಾದ ಅಂಕಣಗಳನ್ನು ನಿರ್ವಹಿಸಿದ್ದಾರೆ.

ಕಾದಂಬರಿ ಕ್ಷೇತ್ರದಲ್ಲಿಯೂ ಅಗಾಧ ಸೇವೆ ಸಲ್ಲಸಿದ್ದು ಸುಮಾರು ೬೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಅನಾವರಣ, ಅರುಣರಾಗ, ಅದೃಷ್ಟ, ಅಂತರಾಳ, ಇಳಿಬಿಸಿಲು, ತೆರೆದಿಟ್ಟ ಬೆಳಕು, ಬೇರು ಬಿಳಲು, ಮಡೇ ಮನೆ, ಉತ್ತರಾ, ಹಿನ್ನೀರು ಮುಂತಾದವುಗಳು.

ಯಕ್ಷಗಾನದ ತವರೂರಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆದ ಇವರಿಗೂ ಯಕ್ಷಗಾನದಲ್ಲಿ ಒಲವು ಬೆಳೆದು ಅಶೋಕ ಸುಂದರಿ, ಅಕ್ಷರ ಸಾಕ್ಷಾತ್ಕಾರ, ಕಾರ್ಗಿಲ್ ವಿಜಯ, ಮಧುಕೇಶ್ವರ ಮಹಾತ್ಮೆ, ಮಯೂರ ವಿಜಯ, ಮಯೂರ‍್ನ ಗೆಲ್ವು, ವೀರ ಋತು ದ್ವಜ, ಮಧುಕೇಶ್ವರ ವೈಭವಂ, ಸಾಕ್ಷರ ವಿಜಯ, ಕುಸುಮ ಕಾಮಿನಿ ಮುಂತಾದ ೧೦ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳು, ಸುಮಾರು ೩೫ಕ್ಕೂ ಹೆಚ್ಚು ಬಾನುಲಿ ನಾಟಕಗಳನ್ನು ರಚಿಸಿದ್ದಾರೆ.

ಎರಡು ಬಾರಿ ಅಮೇರಿಕಾ ಪ್ರವಾಸ ಕೈಗೊಂಡು ಬರೆದ ಪ್ರವಾಸ ಕಥನಗಳು ‘ಡಲ್ಲಾಸ್ ಡೈರಿ’ ಹಾಗೂ ‘ಹ್ಯೂಸ್ಟನ್ ನಲ್ಲಿ ನಲವತ್ತು ದಿವಸಗಳು.

ಇವರ ಮತ್ತೆರಡು ಮಹತ್ತರ ಕೃತಿಗಳು ಸಮಜೋ ಸಾಂಸ್ಕೃತಿಕ ಅಧ್ಯಯನ ಸಂಶೋಧನೆಯ ‘ಹವ್ಯಕ ಜನಪ್ರತಿನಿಧಿಗಳು’, ಹಾಗೂ ಆತ್ಮ ಚರಿತ್ರೆ ‘ರಾಯ ಕೇಳೆಂದ’, ಇವಲ್ಲದೆ ಹಲವಾರು ಕಿರು ಹೊತ್ತಿಗೆಗಳು ಮತ್ತು ವಿವಿಧ ವಿಷಯಗಳ ಮೇಲೆ ಸಾಂದರ್ಭಿಕವಾಗಿ ಲೇಖನಗಳನ್ನು ಬರೆದಿದ್ದಾರೆ.

ಶಿರಸಿ ತಾಲ್ಲೂಕು ಖಾಸಗಿ ಪ್ರೌಢಶಾಲಾ ಶಿಕ್ಷಕ – ಶಿಕ್ಷಕೇತರ ಸಂಘದ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಶಿರಸಿ ತಾಲ್ಲೂಕು ಘಟಕ, ಶಿರಸಿ ತಾಲ್ಲೂಕು ಪತ್ರಕರ್ತರ ಸಂಘದ ಸ್ಥಾಪಕ, ಉತ್ತರ ಕನ್ನಡದಲ್ಲಿ ಪತ್ರಿಕಾ ಮಂಡಲಿ ಮುಂತಾದವುಗಳ ಅಧ್ಯಕ್ಷರಾಗಿ, ಶಿರಸಿ, ಸಿದ್ಧಾಪುರಗಳಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಮತ್ತು ಶಿರಸಿಯಲ್ಲಿ ನಡೆದ ೫೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ‍್ಯದರ್ಶಿಯಾಗಿ, ಮಾರಿಕಾಂಬ ದೇವಸ್ಥಾನದ ತ್ರಿಶತಮಾನೋತ್ಸವ ಮತ್ತು ಹವ್ಯಕ ಮಹಾ ಸಮ್ಮೇಳನದ ಸಂಯೋಜಕರು ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ‍್ಯ ನಿರ್ವಹಿಸಿರುವ ಸುಬ್ಬರಾಯರಿಗೆ ಕೆ. ಶಾಮರಾವ್ ದತ್ತಿ ನಿಧಿ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ಅಖಿಲ ಭಾರತ ಹವ್ಯಕ ಮಹಾ ಸಭಾ ಬೆಂಗಳೂರು ಮತ್ತು ಹೊಸ ನಗರ ತಾಲ್ಲೂಕಿನ ನಿಟ್ಟೂರಿನ ಆದಿತ್ಯ ಲೋಕದಿಂದ ‘ಶ್ರೇಷ್ಠ ಸಾಹಿತ್ಯ ಸೇವಾ ಪುರಸ್ಕಾರ’ ಮುಂತಾದವುಗಳು ದೊರೆತಿವೆ.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌