Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಆಚರಣೆಗಳು

ಹಿಂದೂ ಆಚರಣೆಗಳು ಸಾಮಾನ್ಯವಾಗಿ ದೇವರ ಅರಿವನ್ನು ಅರಸುವ ಮತ್ತು ಕೆಲವೊಮ್ಮೆ ದೇವತೆಗಳಿಂದ ಆಶೀರ್ವಾದಗಳನ್ನು ಬೇಡುವುದನ್ನು ಸಹ ಒಳಗೊಂಡಿರುತ್ತವೆ. ಹಾಗಾಗಿ, ಹಿಂದೂ ಧರ್ಮವು ದಿನನಿತ್ಯದ ಜೀವನದ ನಡುವೆಯೂ ಒಬ್ಬರಿಗೆ ದೈವತ್ವದ ಬಗ್ಗೆ ಚಿಂತಿಸಲು ನೆರವಾಗುವ ಉದ್ದೇಶದಿಂದ ಅನೇಕ ಆಚರಣೆಗಳನ್ನು ವೃದ್ಧಿಪಡಿಸಿದೆ. ಹಿಂದೂಗಳು, ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ, ಪೂಜೆಯಲ್ಲಿ (ಆರಾಧನೆ ಅಥವಾ ಗೌರವ) ಭಾಗವಹಿಸಬಹುದು. ಮನೆಯಲ್ಲಿ, ಹಿಂದೂಗಳು ಹಲವುವೇಳೆ ತಮ್ಮ ಇಷ್ಟದೇವತೆಗಳಿಗೆ ಸಮರ್ಪಿತವಾದ ಮೂರ್ತಿಗಳಿರುವ ಒಂದು ದೇವರಮನೆಯನ್ನು ನಿರ್ಮಿಸುತ್ತಾರೆ. ದೇವಸ್ಥಾನಗಳು ಸಾಮಾನ್ಯವಾಗಿ ಒಬ್ಬ ಮುಖ್ಯ ದೇವತೆಗೆ, ಜೊತೆಗೆ ಸಂಬಂಧಿತ ಅಪ್ರಧಾನ ದೇವತೆಗಳಿಗೆ, ಸಮರ್ಪಿತವಾಗಿರುತ್ತವೆಯಾದರೂ ಕೆಲವು ದೇವಸ್ಥಾನಗಳು ಅನೇಕ ದೇವತೆಗಳನ್ನು ಹೊಂದಿರುತ್ತವೆ. ದೇವಸ್ಥಾನಗಳಿಗೆ ಭೇಟಿ ನೀಡುವುದು ಅನಿವಾರ್ಯವಲ್ಲ, ಮತ್ತು ಹಲವರು ಧಾರ್ಮಿಕ ಹಬ್ಬಗಳ ಅವಧಿಯಲ್ಲಿ ಮಾತ್ರ ದೇವಸ್ಥಾನಗಳಿಗೆ ಭೇಟಿಕೊಡುತ್ತಾರೆ. ಹಿಂದೂಗಳು ತಮ್ಮ ಪೂಜೆಯನ್ನು ಮೂರ್ತಿಗಳ ಮೂಲಕ ಮಾಡುತ್ತಾರೆ. ಮೂರ್ತಿಯು ಆರಾಧಕ ಮತ್ತು ದೇವರ ನಡುವೆ ಒಂದು ಪ್ರತ್ಯಕ್ಷ ಸಂಪರ್ಕವಾಗಿ ಕೆಲಸಮಾಡುತ್ತದೆ. ದೇವರು ಸರ್ವಾಂತರ್ಯಾಮಿಯಾಗಿರುವುದರಿಂದ ಮೂರ್ತಿಯನ್ನು ಹಲವುವೇಳೆ ದೇವರ ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ. ಮೂರ್ತಿಯನ್ನು ಬರಿಯ ಕಲ್ಲು ಅಥವಾ ಕಟ್ಟಿಗೆಯಾಗಿ ಭಾವಿಸದೇ ದೈವತ್ವದ ಪ್ರಕಟವಾದ ರೂಪವಾಗಿ ಭಾವಿಸಬೇಕೆಂದು ಪದ್ಮ ಪುರಾಣವು ಹೇಳುತ್ತದೆ. ಆರ್ಯ ಸಮಾಜದಂತಹ ಕೆಲವು ಹಿಂದೂ ಪಂಥಗಳು ಮೂರ್ತಿಗಳ ಮೂಲಕ ದೇವರನ್ನು ಪೂಜಿಸುವುದನ್ನು ನಂಬುವುದಿಲ್ಲ.

ಹಿಂದೂ ಧರ್ಮವು ಕಲೆ, ವಾಸ್ತುಶಾಸ್ತ್ರ, ಸಾಹಿತ್ಯ ಮತ್ತು ಪೂಜೆಯಲ್ಲಿ ಧಾರ್ಮಿಕವನ್ನು ಚಿತ್ರಿಸಲು ಸಂಕೇತ ಸಮೂಹ ಮತ್ತು ವಿಗ್ರಹ ನಿರ್ಮಾಣಶಾಸ್ತ್ರದ ವಿಕಸಿತ ವ್ಯವಸ್ಥೆಯನ್ನು ಹೊಂದಿದೆ. ಈ ಸಂಕೇತಗಳು ತಮ್ಮ ಅಂತರಾರ್ಥವನ್ನು ಧರ್ಮಗ್ರಂಥಗಳು, ಪುರಾಣ ಸಂಗ್ರಹಗಳು, ಅಥವಾ ಸಾಂಸ್ಕೃತಿಕ ಸಂಪ್ರದಾಯಗಳಿಂದ ಪಡೆಯುತ್ತವೆ. (ಪರಬ್ರಹ್ಮವನ್ನು ನಿರೂಪಿಸುವ) ಓಂ ವರ್ಣ ಮತ್ತು (ಶುಭವನ್ನು ಸಂಕೇತೀಕರಿಸುವ) ಸ್ವಸ್ತಿಕ ಚಿಹ್ನೆಗಳು ಹಿಂದೂ ಧರ್ಮವನ್ನೇ ಪ್ರತಿನಿಧಿಸುವಷ್ಟು ದೊಡ್ಡದಾಗಿ ಬೆಳೆದಿವೆ, ಮತ್ತು ತಿಲಕದಂತಹ ಇತರ ಚಿಹ್ನೆಗಳು ಮತದ ಒಬ್ಬ ಅನುಯಾಯಿಯನ್ನು ಗುರುತಿಸುತ್ತವೆ. ಹಿಂದೂ ಧರ್ಮವು, ಕಮಲ, ಚಕ್ರ ಮತ್ತು ವೀಣೆಯನ್ನು ಒಳಗೊಂಡಂತೆ, ಹಲವು ಸಂಕೇತಗಳನ್ನು ನಿರ್ದಿಷ್ಟ ದೇವತೆಗಳೊಂದಿಗೆ ಸಂಬಂಧಿಸುತ್ತದೆ.

ಧಾರ್ಮಿಕ ಸಂಸ್ಕಾರಗಳು

ಹಿಂದೂಗಳು ಬಹುಸಂಖ್ಯೆಯಲ್ಲಿ ದೈನಂದಿನ ಆಧಾರದ ಮೇಲೆ ಧಾರ್ಮಿಕ ಸಂಸ್ಕಾರಗಳಲ್ಲಿ ಭಾಗವಹಿಸುತ್ತಾರೆ. ಬಹುತೇಕ ಹಿಂದೂಗಳು ಮನೆಯಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುತ್ತಾರೆ, ಆದರೆ ಸಂಸ್ಕಾರಗಳ ಆಚರಣೆಯು ಪ್ರದೇಶಗಳು, ಹಳ್ಳಿಗಳು, ಮತ್ತು ವ್ಯಕ್ತಿಗಳ ನಡುವೆ ಬಹಳವಾಗಿ ಬದಲಾಗುತ್ತವೆ. ಶ್ರದ್ಧಾವಂತ ಹಿಂದೂಗಳು ಪ್ರಾತಃಕಾಲದಲ್ಲಿ ಸ್ನಾನದ ನಂತರ ಪೂಜೆ, (ಸಾಮಾನ್ಯವಾಗಿ ಒಂದು ಕೌಟುಂಬಿಕ ದೇವಸ್ಥಾನದಲ್ಲಿ ಮತ್ತು ವಿಶಿಷ್ಟವಾಗಿ ಒಂದು ದೀಪವನ್ನು ಬೆಳಗುವುದು ಮತ್ತು ದೇವತೆಗಳ ಮೂರ್ತಿಗಳಿಗೆ ನೈವೇದ್ಯಾರ್ಪಣೆಯನ್ನು ಒಳಗೊಳ್ಳುತ್ತದೆ) ಧಾರ್ಮಿಕ ಸಾಹಿತ್ಯದ ಪಠನ, ಭಜನೆ, ಧ್ಯಾನ, ಮಂತ್ರಗಳ ಪಠನ, ಧರ್ಮಗ್ರಂಥಗಳ ವಾಚನ ಇತ್ಯಾದಿ ದಿನನಿತ್ಯದ ಕೆಲಸಗಳನ್ನು ನೆರವೇರಿಸುತ್ತಾರೆ. ಪಾವಿತ್ರ್ಯ ಮತ್ತು ಮಾಲಿನ್ಯದ ನಡುವಣ ವಿಭಜನವು ಧಾರ್ಮಿಕ ಸಂಸ್ಕಾರದಲ್ಲಿನ ಒಂದು ಗಮನಾರ್ಹ ವೈಶಿಷ್ಟ್ಯವಾಗಿದೆ. ಧಾರ್ಮಿಕ ಸಂಸ್ಕಾರ ವಿಧಾನಗಳ ಮೊದಲು ಅಥವಾ ಅವುಗಳ ಅವಧಿಯಲ್ಲಿ ಪರಿಹರಿಸಿಕೊಳ್ಳಲೇಬೇಕಾದ ಅಥವಾ ಹೊರಗುಮಾಡಬೇಕಾದ ಆಚರಿಸುವವನ ಸ್ವಲ್ಪ ಪ್ರಮಾಣದ ಅಪವತ್ರಿತತೆ ಅಥವಾ ಮಲಿನತೆಯನ್ನು ಧಾರ್ಮಿಕ ವಿಧಿಗಳು ಭಾವಿಸಿಕೊಳ್ಳುತ್ತವೆ. ಹಾಗಾಗಿ ಶುದ್ಧೀಕರಣವು, ಸಾಮಾನ್ಯವಾಗಿ ನೀರಿನಿಂದ, ಬಹುತೇಕ ಧಾರ್ಮಿಕ ಕಾರ್ಯಗಳ ಒಂದು ವಿಶಿಷ್ಟ ಲಕ್ಷಣವಾಗಿದೆ. ಇತರ ವೈಶಿಷ್ಟ್ಯಗಳು, ಕಾಲ ಕಳೆದಂತೆ ಶೇಖರಣೆಯಾಗಿ ಮುಂದಿನ ಜಗತ್ತಿನಲ್ಲಿ ಕಷ್ಟಗಳನ್ನು ಕಡಿಮೆಮಾಡುವ, ದಾನದ ನೆರವೇರಿಕೆ ಅಥವಾ ಸುಕರ್ಮಗಳ ಮೂಲಕ ಪಡೆದ ಸಮರ್ಪಣೆಯ ಫಲದಾಯಕತೆಯಲ್ಲಿನ ನಂಬಿಕೆ ಮತ್ತು ಪುಣ್ಯದ ಪರಿಕಲ್ಪನೆಯನ್ನು ಒಳಗೊಂಡಿವೆ. ಅಗ್ನಿ ಆಹುತಿಯ ವೈದಿಕ ವಿಧಿಗಳು (ಯಜ್ಞ) ಈಗ ಕೇವಲ ಸಾಂದರ್ಭಿಕ ವಾಡಿಕೆಗಳಾಗಿವೆಯಾದರೂ ಸಿದ್ಧಾಂತದಲ್ಲಿ ಬಹಳ ಪವಿತ್ರವೆಂದು ಭಾವಿಸಲಾಗಿದೆ. ಆದರೆ ಹಿಂದೂ ವಿವಾಹ ಮತ್ತು ಶವ ಸಂಸ್ಕಾರ ಸಮಾರಂಭಗಳಲ್ಲಿ ಯಜ್ಞ ಮತ್ತು ವೈದಿಕ ಮಂತ್ರಗಳ ಪಠನ ಈಗಲೂ ರೂಢಿಯಲ್ಲಿವೆ. ಕ್ರಿಯಾವಿಧಿಗಳು, ಉಪಚಾರಗಳು ಕಾಲದೊಂದಿಗೆ ಬದಲಾಗುತ್ತವೆ. ಉದಾಹರಣೆಗೆ, ಕಳೆದ ಕೆಲವು ನೂರು ವರ್ಷಗಳಲ್ಲಿ, ಆಗಮ ಶಾಸ್ತ್ರದಿಂದ ವಿಧಿಸಲ್ಪಟ್ಟ ರೂಢಿಯಲ್ಲಿದ್ದ ಷೋಡಶೋಪಚಾರಗಳ ವರ್ಗದಲ್ಲಿನ ಧಾರ್ಮಿಕ ನಾಟ್ಯ ಮತ್ತು ಸಂಗೀತ ನಿವೇದನೆಗಳಂತಹ ಕ್ರಿಯಾವಿಧಿಗಳನ್ನು ಅನ್ನ ಮತ್ತು ಸಿಹಿ ಭಕ್ಷ್ಯಗಳ ನಿವೇದನೆಗಳಿಂದ ಬದಲಾಯಿಸಲಾಯಿತು.

ಜನನ, ವಿವಾಹ, ಮತ್ತು ಮರಣದಂತಹ ಸಂದರ್ಭಗಳು ಹಲವುವೇಳೆ ವಿಸ್ತಾರವಾದ ವರ್ಗಗಳ ಧಾರ್ಮಿಕ ಸಂಪ್ರದಾಯಗಳನ್ನು ಒಳಗೊಳ್ಳುತ್ತವೆ. ಹಿಂದೂ ಧರ್ಮದಲ್ಲಿ, ಜೀವನ ಚಕ್ರದ ಸಂಸ್ಕಾರಗಳು, ಅನ್ನಪ್ರಾಶನ (ಶಿಶುವಿಗೆ ನೀಡುವ ಮೊದಲ ಗಟ್ಟಿ ಆಹಾರದ ಸಂದರ್ಭ), ಉಪನಯನ (ಮೇಲು ಜಾತಿಯ ಮಕ್ಕಳು ಶಾಸ್ತ್ರೋಕ್ತ ವಿದ್ಯಾಭ್ಯಾಸದಲ್ಲಿ ತಮ್ಮ ಉಪಕ್ರಮದ ಸಂದರ್ಭದಲ್ಲಿ ಒಳಗೊಳ್ಳುವ "ಪವಿತ್ರವಾದ ದಾರದ ಸಮಾರಂಭ") ಮತ್ತು ಶ್ರಾದ್ಧ (ಮೃತರ ಹೆಸರಿನಲ್ಲಿ ಜನರಿಗೆ ಔತಣನೀಡಿ ಸತ್ಕರಿಸುವ ಕ್ರಿಯಾವಿಧಿ) ಒಳಗೊಳ್ಳುತ್ತವೆ. ಭಾರತದಲ್ಲಿನ ಬಹುತೇಕ ಜನರಿಗೆ, ಯುವ ದಂಪತಿಗಳ ಮದುವೆ ತೀರ್ಮಾನ ಮತ್ತು ಮದುವೆಯ ಕರಾರುವಾಕ್ಕಾದ ದಿನಾಂಕ ಹಾಗೂ ಕಾಲಗಳು ಜ್ಯೋತಿಷಿಗಳ ಸಮಾಲೋಚನೆಯಲ್ಲಿ ತಂದೆತಾಯಂದಿರಿಂದ ನಿರ್ಧರಿಸಲ್ಪಡುವ ವಿಷಯಗಳಾಗಿವೆ. ಮರಣಾನಂತರ, ಸಂನ್ಯಾಸಿಗಳು, ಹಿಜಿಡ, ಮತ್ತು ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೊರತು ಬೇರೆಲ್ಲರಿಗೂ ದಹನಸಂಸ್ಕಾರವು ಅನಿವಾರ್ಯವೆಂದು ಪರಿಗಣಿಸಲಾಗುತ್ತದೆ. ದಹನಸಂಸ್ಕಾರವನ್ನು ವಿಶಿಷ್ಟವಾಗಿ ಬಟ್ಟೆಯಿಂದ ಶವವನ್ನು ಸುತ್ತಿ ಅದನ್ನು ಚಿತೆಯ ಮೇಲೆ ಸುಟ್ಟು ನೆರವೇರಿಸಲಾಗುತ್ತದೆ.

ತೀರ್ಥಯಾತ್ರೆ ಮತ್ತು ಹಬ್ಬಗಳು

ತೀರ್ಥಯಾತ್ರೆಯು ಹಿಂದೂ ಧರ್ಮದಲ್ಲಿ ಕಡ್ಡಾಯವಲ್ಲವಾದರೂ ಬಹಳ ಜನ ಅನುಯಾಯಿಗಳು ಅವನ್ನು ಕೈಗೊಳ್ಳುತ್ತಾರೆ. ಹಿಂದೂಗಳು ಅಲಹಾಬಾದ್, ಹರಿದ್ವಾರ, ವಾರಾಣಸಿ, ಮತ್ತು ವೃಂದಾವನವನ್ನು ಒಳಗೊಂಡಂತೆ ಭಾರತದ ಹಲವಾರು ಧಾರ್ಮಿಕ ನಗರಗಳನ್ನು ಗೌರವಿಸುತ್ತಾರೆ. ಪ್ರಸಿದ್ಧವಾದ ದೇವಾಲಯ ನಗರಗಳು, ಒಂದು ಪ್ರಮುಖ ವೈಷ್ಣವ ಜಗನ್ನಾಥ ದೇವಸ್ಥಾನ ಮತ್ತು ರಥಯಾತ್ರೆ ಉತ್ಸವದ ತಾಣವಾದ ಪುರಿ; ತಿರುಮಲ ವೆಂಕಟೇಶ್ವರ ದೇವಾಲಯದ ನೆಲೆಯಾದ ತಿರುಪತಿ; ಮತ್ತು ವೈಷ್ಣೋ ದೇವಿ ದೇವಸ್ಥಾನದ ತವರಾದ ಕಟ್ರಾವನ್ನು ಒಳಗೊಳ್ಳುತ್ತವೆ. ನಾಲ್ಕು ಪವಿತ್ರ ಸ್ಥಳಗಳಾದ ಪುರಿ, ರಾಮೇಶ್ವರ, ದ್ವಾರಕೆ, ಮತ್ತು ಬದರಿನಾಥ (ಅಥವಾ ಪರ್ಯಾಯವಾಗಿ ಹಿಮಾಲಯ ಪಟ್ಟಣಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ, ಮತ್ತು ಯಮುನೋತ್ರಿ) ಚಾರ್ ಧಾಮ್ (ನಾಲ್ಕು ನಿವಾಸಗಳು) ತೀರ್ಥಯಾತ್ರಾ ಸಂಚಾರವೆಂದು ಕರೆಸಿಕೊಳ್ಳುತ್ತದೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವು ಹಿಂದೂ ತೀರ್ಥಯಾತ್ರೆಗಳ ಪೈಕಿ ಅತ್ಯಂತ ಪವಿತ್ರವಾದದ್ದು; ಇದರ ನೆಲೆಯು ಅಲಹಾಬಾದ್, ಹರಿದ್ವಾರ, ನಾಸಿಕ್ ಮತ್ತು ಉಜ್ಜೈನ್‌ಗಳ ಮಧ್ಯೆ ಆವರ್ತವಾಗುತ್ತದೆ. ಶಕ್ತಿಯನ್ನು ಪೂಜಿಸಲಾಗುವ ಶಕ್ತಿ ಪೀಠಗಳು ಮತ್ತೊಂದು ಪ್ರಮುಖವಾದ ತೀರ್ಥಯಾತ್ರೆಗಳ ವರ್ಗವಾಗಿದೆ, ಮತ್ತು ಇವುಗಳಲ್ಲಿ ಕಾಲಿಘಾಟ್ ಹಾಗೂ ಕಾಮಾಖ್ಯ ಎರಡು ಪ್ರಧಾನ ಪೀಠಗಳು.

ಹಿಂದೂ ಧರ್ಮವು ವರ್ಷದಾದ್ಯಂತ ಅನೇಕ ಹಬ್ಬಗಳನ್ನು ಹೊಂದಿದೆ. ಹಿಂದೂ ಪಂಚಾಂಗವು ಅವುಗಳ ದಿನಾಂಕಗಳನ್ನು ಗೊತ್ತುಮಾಡುತ್ತದೆ. ಹಬ್ಬಗಳು ವಿಶಿಷ್ಟವಾಗಿ, ಹಲವುವೇಳೆ ಋತುಗಳ ಬದಲಾವಣೆಗಳೊಂದಿಗೆ ತಾಳೆಹೊಂದುವ, ಹಿಂದೂ ಪುರಾಣದ ಘಟನೆಗಳನ್ನು ಆಚರಿಸುತ್ತವೆ. ಮುಖ್ಯವಾಗಿ ನಿರ್ದಿಷ್ಟ ಪಂಥಗಳಿಂದ ಅಥವಾ ಭಾರತೀಯ ಉಪಖಂಡದ ನಿಶ್ಚಿತ ಪ್ರದೇಶಗಳಲ್ಲಿ ಆಚರಿಸಲಾಗುವ ಹಬ್ಬಗಳಿವೆ. ಮಹಾ ಶಿವರಾತ್ರಿ, ಹೋಳಿ, ರಾಮ ನವಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದುರ್ಗಾ ಪೂಜೆ, ಮತ್ತು ದೀಪಾವಳಿ, ವ್ಯಾಪಕವಾಗಿ ಆಚರಿಸಲಾಗುವ ಕೆಲವು ಹಿಂದೂ ಹಬ್ಬಗಳು.