Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಗರುಡ ಪುರಾಣ

ಗರುಡ ಪುರಾಣವು ಹಿಂದೂ ಧರ್ಮದ ಪುರಾಣಗಳಲ್ಲಿ ಒಂದು. ೧೯,೦೦೦ ಶ್ಲೋಕಗಳನ್ನು ಹೊಂದಿರುವ ಈ ಪುರಾಣವು ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿದೆ.


ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ. ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು.

ಗರುಡನು ಹಿಂದೂಧರ್ಮದಲ್ಲಿ ವಿಷ್ಣುವಿನ ವಾಹನವಾದ ದೇವತೆ. ಇವನು ವಿನತೆಯ ಮಗ.

ಗರುಡ ಪುರಾಣಲ್ಲಿ ಎಂತ ಹೇಳುತ್ತು ?!

ಗರುಡ ಪುರಾಣಲ್ಲಿ ಎಂತ ಹೇಳುತ್ತು ಹೇಳೇಕ್ಕಾರೆ ಅದರ ಓದಿ ನೋಡಿರೆ ಅಲ್ಲದೋ ಗೊಂತಪ್ಪದು!.

ಮದಲಿಂದಲೇ ಅದೊಂದು ಮಾತೋ.. ಕ್ರಮವೋ.. ಎಂತ ಮಣ್ಣೋ .. – ಗರುಡ ಪುರಾಣ ಅಂತೇ ಓದ್ಲಾಗ! . ಈ ಓದ್ಲಾಗದ ಪುರಾಣ ಇಪ್ಪದಾದರೂ ಎಂತಕ್ಕಪ್ಪ! ಮತ್ತೂ ಒತ್ತಾಯ ಮಾಡಿ ಕೇಳಿರೆ ಅದು ಸತ್ತ ಮನೇಲಿ ಓದುತ್ತ ಕ್ರಮ!! – ಆರು ಹೇಳಿದ್ದೋ ಉಮ್ಮ.. ಅವಕ್ಕೂ ಅರಡಿಯ. ಇರ್ಲಿ ಬಿಡಿ.

(‘ಅಂತೇ ಓದ್ಲಾಗದ್ರೆ ಎನಗಿಷ್ಟು ದಕ್ಷಿಣೆ ಕೊಟ್ಟು ಓದಿ’ ಹೇಳುಗು ನೆಗೆಮಾಣಿ!. ಬಿಡಿ).

ಸತ್ಯಕ್ಕಾರು, ಈ ಓದ್ಲಾಗ ಹೇಳಿ ಸುರುವಾದ್ದು ಯಾವ ಕಾಲಂದ ಹೇಳಿ ನವಗರಡಿಯ. ಕೇಳಿರೆ – ಮದಲಿಂದಲೇ ! ಅದೂ ಇರ್ಲಿ ಬಿಡಿ.

ಬರೇ ಓದ್ಲಾಗ ಹೇಳಿ ಮಾಂತ್ರ ಅಲ್ಲ ಕೆಲವು ಜೆನ ಗರುಡ ಪುರಾಣ ಪುಸ್ತಕವ ಮನೆಲಿ ಮಡಿಕ್ಕೊಂಬಲಾಗ ಹೇಳಿಯೂ ಗ್ರೇಶಿಯೊಂಡಿದ್ದವು !! – ಅದೂ ಇರ್ಲಿ ಬಿಡಿ.

ಯಾವುದೇ ಪುರಾಣವಾಗಲಿ, ಗ್ರಂಥವಾಗಲಿ - ಅದು ಅತ್ಯಮೂಲ್ಯ ಸಾಹಿತ್ಯವನ್ನೂ ಅರ್ಥವನ್ನೂ ಸೂಕ್ಷ್ಮರೂಪಲ್ಲಿ ಹೊಂದಿಪ್ಪದು. ಅದರ ಆಳ ಚಿಂತನೆ ಮಾಡಿದಷ್ಟೂ ಆಳವೇ ಹಾಂಗೂ ವಿಶಾಲವೇ. ಬರೇ ಸಾಮಾನ್ಯ ಜ್ಞಾನಂದ ಅದರ ಅರ್ತು ಜೀರ್ಣಿಸಿಗೊಂಬಲೆ ರಜ ಕಷ್ಟವೇ. ಅಷ್ಟಪ್ಪಗ ಊಹಾತ್ಮಕ ಚಿಂತನೆಗೊ ಪ್ರಾರಂಭ ಆವ್ತು. ವಿಷಯ ಎಲ್ಲಿಂದ ಎಲ್ಲಿಗೋ ಹೇಗಿ ಏನಕ್ಕೇನೋ ಅರ್ಥಂಗಳೂ ವಿವರಣೆಗಳೂ ಸೃಷ್ಟಿಯಾವ್ತು. ಅದರ ನಿಜ ಮೌಲ್ಯ ಕಳಕ್ಕೊಳ್ಳುತ್ತು. ಹೀಂಗಿರ್ಸು ಅಪ್ಪಲಾಗ, ಬೇಕಾಬೇಕಿ ಅದರ ಓದಲಾಗ ಹೇಳಿ ತಡೆ ನಾವೇ (ನಮ್ಮ ಪೂರ್ವಜರು ಸಹಿತ) ಹಾಕಿಗೊಂಡದ್ದಾದಿಕ್ಕೋ? – ಆದಿಪ್ಪಲೂ ಸಾಕು. ಇರ್ಲಿ ಬಿಡಿ.

ಗರುಡ ಪುರಾಣ ಓದ್ಲಾಗ., ಅದು ಸಾವಿನ ಮನೆಲಿ ಓದುಸ್ಸು. ಅದೆಂತಕೋ ಹಾಂಗೆ?! – ಇರ್ಲಿ ಬಿಡಿ.

ಗರುಡ ಪುರಾಣಲ್ಲಿ ಮನುಷ್ಯ ಜೀವನದ ಮತ್ತೆ ಸಾವಿನ ನಂತರದ ವಿಚಾರಂಗೊ ಹೇಳಲ್ಪಟ್ಟಿದು. ಧರ್ಮ ಅರ್ಥ ಕಾಮ ಮೋಕ್ಷ ಹೇಳ್ವ ಈ ನಾಲ್ಕು ವಿಧ ಪುರುಷಾರ್ಥ ಜೀವನಲ್ಲಿ ಸುರುವಾಣ ಮೂರು ಸಾಂಸರಿಕ ಜೀವನಲ್ಲಿ ಅನುಭವಿಸಿ ಮುಂದೆ ಸಂನ್ಯಾಸ ಸ್ವೀಕರಿಸಿ ಮೋಕ್ಷ ಸಾಧನೆ ಮಾಡೇಕ್ಕಪ್ಪದು. ಗರುಡ ಪುರಾಣವ ಅದರ ಆಳವಾಗಿ ಚಿಂತನೆ ಮಾಡಿರೆ ಈ ಜೀವನಲ್ಲಿ ಜಿಗುಪ್ಸೆ, ವೈರಾಗ್ಯ ಬಪ್ಪಲೆ ಸಾಧ್ಯತೆ ಇದ್ದು. ಇದರಿಂದ ಸಾಂಸಾರಿಕ ಜೀವನಲ್ಲಿ ಮಾಡೇಕ್ಕಪ್ಪ ಕರ್ತವ್ಯದ ಚ್ಯುತಿಗೆ ಬಲಿಯಪ್ಪ ಸಾಧ್ಯತೆ ಇದ್ದು ಹೇಳಿ ಕೆಲವರ ವಾದ. ಆಗಿಪ್ಪಲೂ ಸಾಕು – ಅದೂ ಇರ್ಲಿ ಬಿಡಿ.

ಹಾಂಗಾರೆ ಗರುಡ ಪುರಾಣ ಒದ್ಲೇ ಆಗ ಹೇದು ಏನೂ ಇಲ್ಲೆ ಹೇಳಿ ಆತಪ್ಪೋ!. ನಾವು ಮದಾಲು ಯಾವುದೇ ವಿಷಯವ ಜ್ಞಾನದ ದೃಷ್ಟಿಂದ ಓದೆಕು. ಮತ್ತೆ ಅದರ ಬುದ್ಧಿಪೂರ್ವಕವಾಗಿ ಚಿಂತನೆ ಮಾಡಿಕ್ಕಿ ಪ್ರಯೋಗದ ಬಗ್ಗೆ ನಿರ್ಧರಿಸೆಕು.

ನಿಂಗೊಗೆ ಗರುಡ ಪುರಾಣ ವಿಷಯ ಗೊಂತಿಪ್ಪಲೂ ಸಾಕು, ಆದರೆ ಎನಗರಡಿಯ ಇದಾ. ಹಾಂಗಾಗಿ ಒಂದರಿ ಓದಿ ನೋಡಿಕ್ಕಿವೋ° ಹೇಳಿ ಕಂಡತ್ತು. ನವಗೆ ಗೊಂತಾದ ವಿಷಯವ ನಾಕು ಜೆನಕ್ಕೆ ಗೊಂತುಮಾಡುಸದ್ರೆ ನವಗೆ ಒರಕ್ಕೂ ಬಾರ ಇದಾ. ಹಾಂಗೆ ಓದಿಗೊಂಡು ಹೋದಾಂಗೆ ಬೈಲಿಂಗೂ ಬರದು ತಿಳಿಶಿಕ್ಕುವೋ° ಹೇಳಿ ನಿಂಗಳ ಎದುರು ಬಂದು ಕೂಯ್ದೆ ಇದಾ.

ಅದಕ್ಕೆ ಮದಾಲು ಇದರ ಓದಲಕ್ಕೋ ಆಗದೋ ಹೇಳ್ತ ಜಿಜ್ಞಾಸೆ ನವಗೂ ಅಡ್ಡಿ ಆತು. ಹಾಂಗಾಗಿ ಪುಸ್ತಕದ ಅಕೇರಿಯಾಣ ಪುಟವ ಬಿಡಿಸಿ ಮದಾಲು ನೋಡಿಗೊಂಡಪ್ಪಗ ಕಂಡತ್ತು -

ಪ್ರಜ್ಞಾಹೀನಸ್ಯ ಪಠನಂ ಯಥಾಂಧಸ್ಯ ಚ ದರ್ಪಣಮ್ ।
ಅತಃ ಪ್ರಜ್ಞಾವತಾಂ ಶಾಸ್ತ್ರಂ ತತ್ತ್ವಜ್ಞಾನಸ್ಯ ಲಕ್ಷಣಮ್ ॥

(ಬುದ್ಧಿಹೀನಂಗೆ ಓದುವದು ಕುರುಡಂಗೆ ಕನ್ನಾಟಿ ಇಪ್ಪಾಂಗೆ ಆವ್ತು. ಹಾಂಗಾಗಿ ಪ್ರಜ್ಞಾವಂತರಿಂಗೆ ಶಾಸ್ತ್ರಂಗಳೂ, ತತ್ತ್ವಜ್ಞಾನ ನಿರ್ದೇಶಕಂಗೊ ಇಪ್ಪದು) - ಈ ವಿಷಯ ಎಲ್ಲಿಗೆ ಎತ್ತಿತ್ತು ಹೇಳಿರೆ ಅರ್ಥೈಸಿಗೊಂಬ ಶಕ್ತಿ ಇಲ್ಲದ್ದೆ ಓದಿರೆ, ತಥಾಕಲ್ಪಿತ ಅಸಮ್ಮತ ವ್ಯಾಖ್ಯಾನಕ್ಕೆ ಕಾರಣ ಆವ್ತು ಹೇಳ್ತ ಆರೋಪ ಸರಿ ಹೇಳಿ ಕಾಣ್ತು.

ಫಲಶ್ರುತಿಲಿ ಭಗವಂತ° ಹೇಳ್ತ° -

ಪುರಾಣಂ ಗಾರುಡಂ ಪುಣ್ಯಂ ಪವಿತ್ರಂ ಪಾಪನಾಶನಮ್ ।
ಶೃಣ್ವತಾಂ ಕಾಮನಾಪೂರಂ ಶ್ರೋತವ್ಯಂ ಸರ್ವದೈವ ಹಿ ॥

(ಈ ಗರುಡ ಪುರಾಣ ಪುಣ್ಯಕರವೂ ಪವಿತ್ರವೂ ಪಾಪನಾಶಕವೂ ಆಗಿದ್ದು. ಇದರ ಕೇಳಿದವನ ಇಚ್ಛೆ ಪೂರೈಸಲ್ಪಡುತ್ತು. ಹಾಂಗಾಗಿ ಇದರ ಏವಾಗಳೂ ಕೇಳೆಕು) – ಹೇಳ್ವಲ್ಯಂಗೆ ಗರುಡಪುರಾಣ ‘ಓದ್ಲಾಗ ‘ಹೇಳ್ವ ಮಾತಿನ ಅರ್ಥ ಬೇರೆಯೇ ಏನೋ ಇದ್ದು. ಗರುಡಪುರಾಣವೂ ಓದಿ ಅರ್ಥೈಸತಕ್ಕುದಾದ್ದೇ ಆಗಿದ್ದು ಹೇಳ್ವಲ್ಲಿ ಸಂಶಯವೇ ಇಲ್ಲೆ. ಪಿತೃಗೊಕ್ಕೆ ಮುಕ್ತಿಪ್ರದಾಯಕವಾದ, ಪುತ್ರವಿಷಯಕ ಅಭಿಲಾಷೆಗಳ ಪೂರ್ಣಗೊಳುಸುವ, ಇಹ-ಪರಲೋಕಂಗಳಲ್ಲಿ ಸುಖ ಪ್ರದಾನಿಯಾದ ಈ ಗರುಡ ಪುರಾಣವ ಆರು ಶ್ರವಣ ಮಾಡುತ್ತವೋ, ಶ್ರವಣ ಮಾಡುಸುತ್ತವೋ ಅವರಿಬ್ಬರ ಪಾಪಂಗಳೂ ತೊಳದು ಹೋವ್ತು, ಸದ್ಗತಿ ಪ್ರಾಪ್ತಿಯಾವ್ತು. ಹಾಂಗಾಗಿ ಸಮಸ್ತ ದುಃಖ ವಿನಾಶ ಮಾಡುವ, ಧರ್ಮ ಅರ್ಥ ಕಾಮ ಮೋಕ್ಷ ಈ ಚತುರ್ವಿಧ ಪುರುಷಾರ್ಥಂಗಳ ಸಾಧುಸುವಲ್ಲಿ ಸಹಕಾರಿಯಾದ ಈ ಗರುಡಪುರಾಣ ಪ್ರೇತಕಲ್ಪವ (= ಗರುಡ ಪುರಾಣ ಉತ್ತರ ಖಂಡ = ಪುರಾಣ ಸಾರೋದ್ಧಾರ) ಎಲ್ಲರು ಅಗತ್ಯ ಶ್ರವಣ ಮಾಡೇಕ್ಕಾದ್ದೇ ಹೇದು ಫಲಶ್ರುತಿ. ಗರುಡ ಪುರಾಣ ಮನುಷ್ಯನ ದುಃಖವ ದೂರ ಮಾಡುವ ಅಮೂಲ್ಯ ಗ್ರಂಥ. ಹಾಂಗಾಗಿ ಇದು ಸಾವಿನ ದುಃಖವ ನಿವಾರುಸಲೆ ಬೇಕಾಗಿ ಕುಟುಂಬದೋರಿಂಗೆ ಓದುಸೋದು ಹೇಳಿ ಒಂದು ಅರ್ಥಶೂನ್ಯ ವಾದ. ದುಃಖ ಬಪ್ಪದು ಅಜ್ಞಾನಂದ. ಹಾಂಗಾಗಿ ಇದು ಜ್ಞಾನಕ್ಕಾಗಿ ಇಪ್ಪ ಅಮೂಲ್ಯ ಗ್ರಂಥ ಹೇಳಿಯೇ ತಿಳಿಯೆಕು. ಬಾಕಿದ್ದ ವಿವರಂಗಳ ಆಯಾ ಸಂದರ್ಭಲ್ಲಿ ಓದಿಗೊಂಬೊ.

ಮಾನವನ ಇತಿಹಾಸಲ್ಲಿ ಯಕ್ಷಪ್ರಶ್ನೆಯಾಗಿ ಒಳುಕ್ಕೊಂಡಿಪ್ಪದು ಹುಟ್ಟು ಸಾವುಗೊ. ಹುಟ್ಟಿನ ಹಿಂದೆ ಎಂತರ, ಸಾವಿನ ಮುಂದೆ ಎಂತರ ಹೇಳ್ವದರ ಇದಮಿತ್ಥಂ ಹೇದು ಹೇಳ್ತೋರು ಆರೂ ಇಲ್ಲೆ. ಒಬ್ಬೊಬ್ಬ° ವೇದಾಂತಿಯೂ ಒಂದೊಂದು ರೀತಿಲಿ ತೀರ್ಮಾನವ ಹೇಳಿದ್ದರ ನಾವು ಅಪ್ಪು ಹೇಳಿ ನಂಬಿಗೊಂಡು ಹೋಪದಷ್ಟೆ. ಇದು ಪ್ರತ್ಯಕ್ಷಕ್ಕೆ ಅನುಭವಕ್ಕೆ ಸಿಕ್ಕುತ್ತಿಲ್ಲೆ. ಅನುಮಾನಂದ ನಿರ್ಧರುಸುವ ಸುಲಭ ವಿಷಯವೂ ಅಲ್ಲ. ಹಾಂಗಾಗಿ ಈ ಹುಟ್ಟು ಸಾವುಗಳ ಅಭೇದ್ಯ ಸಮಸ್ಯೆಯ ಉತ್ತರಕ್ಕೆ ಜಿಜ್ಞಾಸುಗೊ ಆಗಮ ಶಾಸ್ತ್ರಂಗಳನ್ನೇ ನಂಬಿದ್ದವು. ವೇದಾರ್ಥ ತತ್ವಸಾರವ ನೀಡುವದು ಪುರಾಣಂಗೊ. ಸಾಕ್ಷಾತ್ ನಾರಾಯಣಾವತಾರವಾದ ಶ್ರೀ ವೇದವ್ಯಾಸರೇ ಇವುಗಳ ಕರ್ತೃ ಹೇಳ್ವದು ಆಸ್ತೀಕ ಮತ. ಹೀಂಗೆ ಹದಿನೆಂಟು ಪುರಾಣಂಗಳಲ್ಲಿ (ಪ್ರಧಾನ ಪುರಾಣಂಗೊ ಹದಿನೆಂಟು + ಉಪಪುರಾಣಂಗೊ ನಾಲ್ಕು) ಗರುಡ ಪುರಾಣವೂ ಒಂದು.

ಮನುಷ್ಯ° / ಜೀವಿ ಈ ಲೋಕವ ಬಿಟ್ಟಮತ್ತೆ ತನ್ನ ಪರಲೋಕದ ಜೀವನವ ಯಾವ ಪ್ರಕಾರ ಸುಖ-ಸಮೃದ್ಧ ಹಾಂಗೂ ಶಾಂತಿಪ್ರದವಾಗಿ ಮಾಡ್ಳಕ್ಕು ಮತ್ತೆ ಮರಣಾನಂತರ ಆ ಜೀವಿಯ ಉದ್ಧಾರಕ್ಕಾಗಿ ಅವನ ಪುತ್ರಾದಿ ಕುಟುಂಬದೋರ ಕರ್ತವ್ಯ ಎಂತರ ಹೇಳ್ವ ವಿಚಾರ ಗರುಡ ಪುರಾಣಲ್ಲಿ ಇದ್ದು.

ಭಕ್ತನಾದ ಗರುಡಂಗೆ ಶ್ರೀಮನ್ನಾರಯಣ ಪ್ರೇಮಪುರಸ್ಸರವಾಗಿ ಹೇಳಿದ ಪುರಾಣ ಇದು. ಹಾಂಗಾಗಿ ಇದಕ್ಕೆ ಪ್ರಮಾಣ ಗ್ರಂಥ ಹೇದು ಹೆಸರು. ಸಕಲ ವೇದ ಶಾಸ್ತ್ರ ಪುರಾಣ ಇತಿಹಾಸಂಗಳ ಸಾರವಾದ ಗರುಡ ಪುರಾಣಲ್ಲಿ, ಪೂರ್ವಖಂಡ ಮತ್ತೆ ಉತ್ತರ ಖಂಡ ಹೇಳಿ ಎರಡು ಭಾಗ. ಪೂರ್ವ ಖಂಡಲ್ಲಿ ಒಟ್ಟು 229 ಅಧ್ಯಾಯಂಗೊ (8800 ಶ್ಲೋಕಂಗೊ) – ಅಗಸ್ತ್ಯ ಸಂಹಿತೆ, ಬೃಹಸ್ಪತಿ ಸಂಹಿತೆ ಮತ್ತೆ ಧನ್ವಂತರಿ ಸಂಹಿತೆಗೊ. ಅವುಗಳಲ್ಲಿ ದೇವಪೂಜಾವಿಧಿಗೊ, ದಾನ, ವ್ರತ, ನೀತಿ, ವ್ಯಾಕರಣ, ಮಂತ್ರ, ರಕ್ಷೆಗೊ, ಔಷಧಿಗೊ, ಸಾಮುದ್ರಿಕ ಶಾಸ್ತ್ರ, ನವರತ್ನಂಗೊ .. ಇತ್ಯಾದಿ ವಿಷಯಂಗೊ. ಮತ್ತೆ ಉತ್ತರ ಖಂಡಲ್ಲಿ 35 ಅಧ್ಯಾಯಂಗೊ (1280 ಶ್ಲೋಕಂಗೊ) ಜೀವಿಯ ಮರಣಾನಂತರದ ಗತಿಯ ನಿರೂಪಣೆ, ಪಾಪ ಪುಣ್ಯಂಗಳ ಫಲಂಗಳ ವಿವರಣೆ, ಮತ್ತೆ ಮನುಷ್ಯಂಗೆ ಪ್ರೇತತ್ವ ತಪ್ಪುಸುವ ಅಪರ ಕರ್ಮಂಗಳ ಸಂಕ್ಷೇಪ ವಿಷಯಂಗೊ ಅಡಕವಾಗಿಪ್ಪದು. ಗರುಡ ಪುರಾಣದ ಈ ಭಾಗಕ್ಕೆ ‘ಪ್ರೇತಕಲ್ಪ’ ಹೇಳಿಯೂ ಹೆಸರಿದ್ದು. ಇಡೀ ಗರುಡ ಪುರಾಣ ಭಗವಾನ್ ವೇದವ್ಯಾಸರಿಂದ ರಚಿತವಾದ್ದು. ಇದಕ್ಕೆ (ಈ ಗರುಡ ಪುರಾಣ ಉತ್ತರ ಖಂಡಕ್ಕೆ) ‘ಪುರಾಣ ಸಾರೋದ್ಧಾರ’ ಅಥವಾ ‘ಸಾರೋದ್ಧಾರ’ ಹೇಳಿಯೂ ಹೆಸರಿದ್ದು. ಧರ್ಮದ ಸಕಲ ತತ್ತ್ವಂಗಳೂ ಈ ಪುರಾಣಲ್ಲಿ ಕ್ರೋಢೀಕೃತವಾಗಿದ್ದು. ಗರುಡಲ್ಲಿ ಪ್ರತ್ಯೇಕವಾಗಿ ಇಂತದ್ದು ಹೇಳಿ ಹೊಸ ವಿಷಯಂಗ ಇಲ್ಲೆ. ವೇದ ಅರ್ಥಂಗ ಅಷ್ಟಾದಶ ಪುರಾಣಲ್ಲಿ ಬೇರೆ ಬೇರೆ ಆಯಾಮಲ್ಲಿ ವಿವರಿಸಿದ್ದದು. ಹಾಂಗೇ ಗರುಡ ಪುರಾಣಲ್ಲಿ ಬಪ್ಪಂತ ವಿಷಯಂಗ ಭಾಗವತ ಹಾಂಗೂ ಇತರ ಪುರಾಣಂಗಳಲ್ಲಿ ಮತ್ತು ಭಗವದ್ಗೀತೆಲಿ ಹೇಳಿದ ಆಶಯಂಗಳೇ. ಇಲ್ಲಿ ಬಂದಂತಹ ವಿಚಾರಂಗೊ ಭಗವಂತ° ಇತರ ಭಾಗಲ್ಲಿ ಹೇಳಿದ ವಿಚಾರಂಗಳೇ. ಇತರ ಪುರಾಣಂಗಳಲ್ಲಿ ಇಪ್ಪವ ಸಾರವ ಇಲ್ಲಿ ಹೇಳಿಪ್ಪದರಿಂದ ಇದಕ್ಕೆ ಪುರಾಣ ಸಾರೋದ್ಧಾರ ಹೇಳಿ ಹೆಸರು. ಹಾಂಗಾಗಿ ಇದಕ್ಕೆ ವಿಷ್ಣುಭಕ್ತರಾಗಲಿ, ಶಿವಭಕ್ತರಾಗಲಿ, ಶಕ್ತಿ ಆರಾಧಕರಾಗಿರಲಿ ಅಥವಾ ಇನ್ಯಾವುದೇ ಪೂಜಕರಾಗಿರಲಿ, ಎಲ್ಲೋರಿಂಗೂ ಇದು ಪೂಜ್ಯ ಮತ್ತೆ ಉಪಯುಕ್ತ. ಇಲ್ಲಿ ನಿರೂಪಿತವಾಗಿಪ್ಪ ದೇವರು ಸಾಕ್ಷಾತ್ ಆ ಶ್ರೀಮನ್ನಾರಯಣನಾದ ಭಗವಂತನೆ. ದೇವರ ನಂಬದ್ದರೂ, ನೀತಿಯುತ ಜೀವನವ ಗೌರವಿಸುವಲ್ಲಿ ಇದು ಉಪಯುಕ್ತ ಗ್ರಂಥ ಹೇಳಿ ವಿಮರ್ಶಕರು ಹೇಳಿದ್ದವು.

ಜೀವಾತ್ಮವು (ಮನುಷ್ಯ°) ಸ್ಥೂಲ ಶರೀರವ ಬಿಟ್ಟಮತ್ತೆ (ಮರಣಾನಂತರ) ಸೂಕ್ಷ್ಮ ದೇಹವ ಹೊಂದಿ (ಪ್ರೇತತ್ವ) ಹತ್ತು ದಿನ ಮರಣ ಹೊಂದಿದ ಮನೆ ಹತ್ರೆವೇ ಇದ್ದು ಬಂಧುಮಿತ್ರರು ಮಾಡುವ ಎಲ್ಲ ಕಾರ್ಯಂಗಳನ್ನೂ ನೋಡ್ಯೊಂಡು ಕೇಳ್ಯೊಂಡು ಇರ್ತು. ಆ ಸಮಯಲ್ಲಿ ಗರುಡ ಪುರಾಣ ಪಾರಾಯಣ ಮಾಡುವದರಿಂದ ಮೃತ ವ್ಯಕ್ತಿಗೂ ಪುಣ್ಯ ಮತ್ತು ಮನೆಯವಕ್ಕೂ ಪುಣ್ಯ ಲಭಿಸುತ್ತು.

ವಿಚಾರಪೂರ್ಣವಾಗಿಯೂ, ವೈಜ್ಞಾನಿಕವಾಗಿಯೂ, ಕಾವ್ಯದೃಷ್ಟಿಂದಲೂ, ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ, ಮನಃಶಾಸ್ತ್ರ ದೃಷ್ಟಿಂದಲೂ ಗರುಡಪುರಾಣ ಅಮೂಲ್ಯವಾಗಿದ್ದು ಹೇಳಿ ವಿಮರ್ಶಕರ ಅಭಿಪ್ರಾಯ.

ಸಾವಿನ ಆಚಿಗಾಣ ಜೀವನದ ಬಗ್ಗೆ ಗರುಡಪುರಾಣ ವಿವರವ ನೀಡುತ್ತು . ಗರುಡ ಪುರಾಣಲ್ಲಿ ದೇಹತ್ಯಾಗ ಮಾಡಿದ ‘ಆತ್ಮ’ದ ಸಂಚಾರವ ತನ್ನ ಗುರಿ ಮುಟ್ಟುತ್ತವರೇಂಗೆ ಇಪ್ಪ ವಿಚಾರಂಗೊ ವಿವರಿಸಲ್ಪಟ್ಟಿದು. ಅಬ್ಬೆ ಅಪ್ಪ ಗುರು ಹಿರಿಯರಲ್ಲಿ ಭಕ್ತಿ, ಜೀವನದ ವಿವಿಧ ಹಂತಂಗಳಲ್ಲಿ ಅನುಸರುಸೆಕ್ಕಾದ ನೀತಿ ಗರುಡಪುರಾಣಲ್ಲಿ ಉಲ್ಲೇಖವಾಗಿಪ್ಪದರಿಂದ ಇದು ಎಲ್ಲ ಸಮಯಲ್ಲೂ ಎಲ್ಲ ಮನೆಗಳಲ್ಲಿಯೂ ಓದೇಕ್ಕಾದ ಗ್ರಂಥ ಹೇಳಿ ವಿಮರ್ಶಕರ ನುಡಿ. ಮಾನವನ ಆಚಾರ ವಿಚಾರಂಗೊ, ಸತ್ಕರ್ಮ ದುಷ್ಕರ್ಮಂಗಳ ನಿರೂಪಣೆ ಅವುಗಳ ಫಲಂಗಳಾದ ಪುಣ್ಯಪಾಪಂಗಳ ಗತಿ, ಮಾತಾಪಿತೃಗೊಕ್ಕೆ ಮಕ್ಕೊ ಮಾಡೇಕ್ಕಪ್ಪ ಕಾರ್ಯಂಗೊ, ಸ್ಥೂಲ, ಸೂಕ್ಷ್ಮ ಇತ್ಯಾದಿ ದೇಹಂಗಳ ವಿವರಣೆ, ಪಾರಮಾರ್ಥಿಕ ತತ್ತ್ವಂಗಳ ಸರಳ ಪರಿಚಯ, ಸಾಕಾರ ನಿರಾಕಾರ ಬ್ರಹ್ಮನ ಅನುಸಂಧಾನ .. ಇವೆಲ್ಲ ಗರುಡಪುರಾಣಲ್ಲಿ ವಿವರಿಸಲ್ಪಟ್ಟ ಮುಖ್ಯ ಸಂಗತಿಗೊ.

‘ಗರುಡ ಪುರಾಣ -ಸಾರೋದ್ಧಾರ’ದ ಶ್ರವಣ ಮತ್ತೆ ಪಠನೆಂದ ಸಹಜವಾಗಿಯೇ ಪುಣ್ಯಲಾಭ, ಅಂತಃಕರಣದ ಪರಿಶುದ್ಧಿ., ಮತ್ತೆ , ಭಗವಂತನಲ್ಲಿ ಆಸಕ್ತಿ ಹಾಂಗೂ ಲೌಕಿಕ ವಸ್ತು ಭೋಗ ವಿಷಯಂಗಳಲ್ಲಿ ವಿರಕ್ತಿ ಆಗಿ ಹೋಪಲೆ ಸಾಧ್ಯ ಆವ್ತು. ಇದರಿಂದ ಮನಸ್ಸು ಶುಭ್ರವಾಗಿ ತನ್ನ ಉದ್ಧಾರಕ್ಕಾಗಿ ಎಂತ ಮಾಡೆಕ್ಕು ಹೇಳ್ವದರ ಬಗ್ಗೆ ಚಿಂತನೆ ಮಾಡ್ಳೆ ಒಳ್ಳೆ ಅವಕಾಶ ಇದ್ದು. ವ್ಯಕ್ತಿಗೆ ಇಹ-ಪರ ಲೋಕದ ಹಾನಿ ಲಾಭದ ಯಥಾರ್ಥ ಜ್ಞಾನವು / ಪರಿಚಯವು ಸಿಕ್ಕಿ ತನ್ನ ಕರ್ತವ್ಯದ ಬಗ್ಗೆ ಜಾಗೃತಿ ಮೂಡ್ಳೆ ಸಹಾಯಕ ಆವ್ತು. ಯಾವುದೇ ವೇದ, ಶಾಸ್ತ್ರ, ಪುರಾಣವಾಗಲಿ ಅದರ ಬರೇ ಓದುವ ಹವ್ಯಾಸಂದ ಓದಿರೆ ಬರೇ ಸಾಹಿತ್ಯ ಜ್ಞಾನ ಮಾತ್ರ ಸಿಕ್ಕುಗಷ್ಟೆ. ಅದರಲ್ಲಿ ಭಕ್ತಿ, ನಂಬಿಕೆ ವಿಶ್ವಾಸ ಮಡಿಕ್ಕೊಂಡು ಓದಿ ತಿಳಿವ ಮನಸ್ಸಿಂದ ಓದಿರೆ ತನ್ನ ಯಶಸ್ಸಿಂಗೆ ಉತ್ತಮ ಒಂದು ಮಾರ್ಗ ಸಾಧನ ಆವ್ತು.

ಗರುಡ° ಹೇಳಿರೆ ಒಂದು ಮಹಾ ಅದ್ಭುತ ಶಕ್ತಿ. ಅಂವ° ಸ್ವರ್ಗಂದ ಭೂಲೋಕಕ್ಕೆ ಅಮೃತವ ತಂದ ಮಹಾ ವೈದ್ಯ. ಈ ಅಮೃತ ದೇಹ ಮನಸ್ಸುಗಳ ಕಾಯಿಲೆಗೊಕ್ಕೆ ಇಪ್ಪದು ಅಲ್ಲ, ಅದು ಅಮರತ್ವವ ಪಡವ ಜ್ಞಾನಾಮೃತ. ಚೂಪಾದ ಕೊಕ್ಕು ಇಪ್ಪ ಗರುಡ° ಏಕಾಗ್ರದೃಷ್ಟಿಯ, ನಾಸಿಕಾಗ್ರಲ್ಲಿ ಏಕಾಗ್ರದೃಷ್ಟಿಯ ಮಡಿಕ್ಕೊಂಡು ಧ್ಯಾನ ಮಾಡುವ ಯೋಗಿಯ ಸಂಕೇತ. ಅತೀ ಎತ್ತರಕ್ಕೆ ಹಾರುವ ಪಕ್ಷಿಯಾದ ಅಂವ° ಮಾನವರಲ್ಲೇ ಅತೀ ಉನ್ನತ ಮಟ್ಟಲ್ಲಿ ಯೋಚಿಸುವ ಜ್ಞಾನಿಯ ಸಂಕೇತ, ಭಗವಂತನ ದರ್ಶನ, ಸ್ಪರ್ಶನ, ಸಂಭಾಷಣ, ಸಹಚರಣ ಮಾಡ್ಯೊಂಡು ಅವನನ್ನೇ ಏವತ್ತೂ ಹೊತ್ತೊಂಡಿಪ್ಪ ಗರುಡ° ಭಗವಂತನನ್ನೇ ಪವಿತ್ರ ಮನಸ್ಸಿನ ಮತ್ತೆ ಬ್ರಹ್ಮ ಕರ್ಮ ಸಂಯೋಜನೆ ಮಾಡುವ ಮಹಾಭಕ್ತನ ಸಂಕೇತ, ಚಂದ್ರಲೋಕಂದ ಅಮೃತವ ತಂದ ಗರುಡ° ಪ್ರಶಾಂತ ಪ್ರಕಾಶಸ್ವರೂಪ°, ಹುಟ್ಟು ಸಾವುಗಳ ದೂರ ಮಾಡುವ ಜ್ಞಾನದ ಸಂಕೇತ, ಭವ ಬಂಧನದ ದಾಸ್ಯಂದ ಬಿಡುಗಡೆಗೊಳುಸುವ ಸಂಕೇತ, ಸರ್ಪಂಗಳ ದಾಸ್ಯಂದ ತನ್ನಬ್ಬೆಯ ಬಿಡುಗಡೆ ಗೊಳುಸಿದ ಗರುಡ ಸರ್ವವಿಷಾಪಹಾರಿ ಜ್ಞಾನಾಮೃತದ ಸಂಕೇತ ಹೇದು ತಿಳುದೋರು ಹೇಳಿದ್ದದು.

ಗರುಡಪುರಾಣಲ್ಲಿ ಮರಣಾನಂತರ ಜೀವಿಯು ಏವ ಏವ ಅವಸ್ಥೆಗಳ ಹೊಂದುತ್ತ° ಹೇಳ್ವ ವಿಷಯಂಗಳ ಕೂಲಂಕುಷವಾಗಿ ವಿಚಾರ ಮಾಡಿದ್ದು. ಧರ್ಮ, ನಿಷ್ಠೆ, ಸತ್ಯದ ಬಲಂಗಳಿಂದ ಮರಣವನ್ನೂ ಜಯಿಸಲೆಡಿಗು. ಹೇಳಿರೆ., ಆತ್ಮವು ಸೃಷ್ಟಿಕರ್ತನಲ್ಲಿ ಐಕ್ಯವಾಗಿ ಜನ್ಮರಹಿತ ಮೋಕ್ಷವ ಪಡವಲೆ ಎಡಿಗು ಹೇಳಿ ಪಂಡಿತಕ್ಕಳ ಅಂಬೋಣ. ಹಾಂಗಾಗಿ ಮರಣಾನಂತರ ಅನೇಕ ಕರ್ಮಾಂಗಗಳ ಕಟ್ಟುನಿಟ್ಟಾಗಿ ಆಚರುಸೆಕ್ಕಾದ್ದು ಅಗತ್ಯ. ಮೋಕ್ಷ, ಸಾಧನೆ ಇಲ್ಲದ್ದೆ ಸಿಕ್ಕುತ್ತ ಹಾಂಗಿರ್ಸು ಅಲ್ಲ. ಪುರಾಣಂಗೊ ಹೇಳಿದ ಆಚರಣೆಗೊ ಮೃತ° ‘ಪುಣ್ಯ’ ಹೇಳ್ವ ಗುರಿಯ ಹೊಂದಲೆ ಇಪ್ಪ ಮೆಟ್ಳುಗೊ. “ಪಾಪವೇ ನರಕ, ಪುಣ್ಯವೇ ಸ್ವರ್ಗ”. ಇದು ಗರುಡಪುರಾಣದ ಅತೀ ಮುಖ್ಯ ಸಂದೇಶ.

ದೇಹದ ನಶ್ವರತೆಯನ್ನೂ ಆತ್ಮದ ಅಮರತ್ವವನ್ನೂ ಬೋಧುಸುವ ಈ ಗ್ರಂಥ, ವಿಯೋಗ ದುಃಖವನ್ನೂ, ಮರಣಭಯವನ್ನೂ ದೂರಮಾಡ್ಳೆ ಸಹಾಯಕ ಆವುತ್ತು. ಹಾಂಗಾಗಿ ಇದರ ಸಾವಿನ ಮನೆಲಿ ಓದೇಕ್ಕಪ್ಪದು ಹೇಳಿ ಮಾಡಿಗೊಂಡವು. ಆದರೆ ಯಥಾರ್ಥವಾಗಿ ವಿಯೋಗ ಸಮಯಲ್ಲಿ ಮಾಂತ್ರ ಅಲ್ಲ, ಇದು ಎಲ್ಲ ಸಮಯಲ್ಲಿಯೂ ಓದೇಕ್ಕಾದ ಗ್ರಂಥ ಹೇಳ್ವದು ತಿಳುದೋರ ಅಭಿಪ್ರಾಯ. ಮನುಷ್ಯ° ಬಾಲ್ಯ ಯೌವ್ವನ ಮತ್ತೆ ವೃದ್ಧಾಪ್ಯಲ್ಲಿ ಮಾಡುವ ಕೆಲಸಂಗಳಲ್ಲಿ ಏವುದು ಸರಿ, ಏವುದು ತಪ್ಪು ಹೇಳ್ವದರ ಗರುಡ ಪುರಾಣಲ್ಲಿ ಅನುಮಾನ ಇಲ್ಲದ್ದೆ ನಿಖರವಾಗಿ ಉಲ್ಲೇಖಿಸಲ್ಪಟ್ಟಿದು. ಈ ಬೋಧನೆಗಳ ಮುಪ್ಪಿಲ್ಲಿ ಕೇಳಿ ಪ್ರಯೋಜನ ಆದರೂ ಎಂತರ?!. ಅವುಗಳ ಅನುಷ್ಠಾನಕ್ಕೆ ತಪ್ಪಲೆ ಬೇಕಾದ ಜೀವನದ ಆಯಸ್ಸಿನ ಬಹುತೇಕ ಪ್ರಾಯವೇ ಕಳದು ಹೋಗಿರ್ತು. ಹಾಂಗಾಗಿ ಗರುಡಪುರಾಣದ ನೀತಿಯ ತಿಳಿಯೇಕ್ಕಾದ್ದು ಸಣ್ಣಪ್ರಾಯಲ್ಲಿಯೇ ಹೊರತು ದಂಟುಕುಟ್ಳೆ ಅಪ್ಪಗ ಅಲ್ಲ. ಮಕ್ಕಳ ಮನಸ್ಸಿಲ್ಲಿ ಗರುಡ ಪುರಾಣದ ಬೋಧನಾ ವಿಧಾನ ಜೀವನ ನೀತಿಯ ಬೇರೂರುಸುತ್ತು ಹೇಳ್ವದು ಪ್ರಾಜ್ಞರ ಅಭಿಪ್ರಾಯ.

ಜೀವನದ ಭವಿಷ್ಯವ ಸನ್ಮಾರ್ಗಲ್ಲಿ ರೂಪುಸಲೆ ಸಹಾಯಕವಪ್ಪ, ಸಾಧನಾಪಥಲ್ಲಿ ಉಪಯುಕ್ತವಪ್ಪ, ಮಾನವೀಯ ಮೌಲ್ಯಂಗಳ ಎತ್ತಿ ಹಿಡಿವ, ಮರಣಾನಂತರ ಜೀವಿಯ ಗತಿಯ ವಿವರುಸುವ ಈ ಗರುಡ ಪುರಾಣಲ್ಲಿ ಭಗವಂತ° ಗರುಡನ ಮೂಲಕ ನವಗೆ ಎಂತ ಹೇಳಿದ್ದ° ಹೇಳ್ವದರ ನಾವಿಲ್ಲಿ ಓದುವೋ°. ಗರುಡ ಪುರಾಣವ ಮೃತ ಸಂದರ್ಭಲ್ಲಿ ಓದುತ್ತರ/ಓದುಸುತ್ತರ ಬದಲು ಎಲ್ಲೋರು ಸಣ್ಣಪ್ರಾಯಂದಲೇ ಅಂಬಗಂಬಗ ಶ್ರವಣ / ಪಾರಾಯಣ ಮಾಡಿಗೊಂಡು ಹೋಗ್ಯೊಂಡಿದ್ದರೆ ಸದಾಚಾರ ಪ್ರವೃತ್ತಿ ಮನುಷ್ಯರಲ್ಲಿ ಇನ್ನೂ ಹೆಚ್ಚು ಉಳಿತ್ತಿತ್ತೋ ಏನೋ! ಹೇಳ್ವದು ವೈಯಕ್ತಿಕ ಅಭಿಪ್ರಾಯ. ಬಹುಶಃ ಕೆಲವು ಅಧ್ಯಾಯಂಗಳ ಓದಿದ ಮತ್ತೆ ನಿಂಗೊಗೂ ಹಾಂಗೇ ಅನುಸಲೂ ಸಾಕು.

ಇಲ್ಲಿ ಸಂಪೂರ್ಣ ಗರುಡ ಪುರಾಣವ ಬರೆತ್ತಿಲ್ಲೆ. ಸಾಮಾನ್ಯವಾಗಿ ನಮ್ಮಲ್ಲಿ ಪ್ರಚಲಿತ ಇಪ್ಪ ಪಾರಾಯಣದ ಭಾಗ, ಹೇಳಿರೆ , ಗರುಡ ಪುರಾಣದ ಉತ್ತರ ಖಂಡ = ಪ್ರೇತಕಾಂಡ (ಉತ್ತರಖಂಡ = ಸಕಲ ಶಾಸ್ತ್ರಂಗಳ ಸಾರ = ಪುರಾಣ ಸಾರೋದ್ಧಾರ)ವ ತೆಕ್ಕೊಂಡಿದು. [ಇಲ್ಲಿ ಬರವಲೆ ತೆಕ್ಕೊಂಡದು ಮೂಲ ಗರುಡ ಪುರಾಣ ಅಲ್ಲ. ಇದು ಸಾಮಾನ್ಯ ನಮ್ಮಲ್ಲಿ ಪ್ರಚಲಿತಲಿಪ್ಪ ಪಾರಾಯಣಕ್ಕೆ ಬಳಸುವ ಮೂಲ ಗರುಡಪುರಾಣಂದ ಭಟ್ಟಿ ಇಳಿಸಿದ ರೂಪ. ಮೂಲಗರುಡಪುರಾಣದ ಆಶಯವ ವಿದ್ವಾಂಸರು ಸಂಸ್ಕರಿಸಿ ಸುಲಭ ಪಾರಾಯಣಕ್ಕೆ ಅನುಕೂಲ ಅಪ್ಪಲೆ ಸಂಸ್ಕರಿಸಿ ಬರದ ಗರುಡಪುರಾಣ ಇದಾಗಿದ್ದು. ಮೂಲ ಗರುಡಪುರಾಣ ಬೇಕಾರೆ ಇಲ್ಲಿದ್ದು - ಇದರ್ಲಿ ಸುರುವಿಂದ ಅಕೇರಿವರೆಗೆ ವಿಸ್ತೃತವಾಗಿ ಇದ್ದು.]

ಸಾಹಿತ್ಯ ಶಿರೋಮಣಿ ಶ್ರೀಯುತ ಕುಳಮರ್ವ ವೆಂಕಪ್ಪ ಭಟ್ಟರು ಬರದ “ಪುನರ್ಜನ್ಮ – ಮರಣೋತ್ತರ ಜೀವನ” ಪುಸ್ತಕಲ್ಲಿ ಮರಣೋತ್ತರ ಜೀವನದ ಬಗ್ಗೆ ಬೇರೆ ಬೇರೆ ಪುರಾಣಂಗಳಲ್ಲಿ ಪ್ರತಿಪಾದಿತ ವಿಷಯಂಗಳ ಉದ್ಧರಿಸಿ ವ್ಯಾಖ್ಯಾನಿಸಿ ಅತಿ ಉಪಯುಕ್ತ ಮಾಹಿತಿಯ ನೀಡಿದ್ದವು. ನಾವೆಲ್ಲರೂ ನಿಶ್ಚಯವಾಗಿ ಆ ಪುಸ್ತಕವ ಓದಿ ವಿಷಯವ ತಿಳುಕ್ಕೊಳ್ಳೆಕು ಹೇಳ್ವ ಸದಾಶಯವ ಇಲ್ಲಿ ಹೇಳ್ಳೆ ಬಯಸುತ್ತೆ.

ಗರುಡಪುರಾಣ ಉತ್ತರಖಂಡಲ್ಲಿ ಹೇಳಿದ ಆ ಸಾರವ ಹೀರುವ ಪ್ರಯತ್ನ ಇಲ್ಲಿ ಮಾಡುವೋ°. ದೀರ್ಘ ವ್ಯಾಖ್ಯಾನಕ್ಕೆ ಹೋಗದ್ದೆ ಶ್ಲೋಕವನ್ನೂ ಶ್ಲೋಕಾರ್ಥವನ್ನು ಅರ್ಥೈಸಿಗೊಂಡು ಸರಳಾರ್ಥಲ್ಲಿ ಬರವಲೆ ಹೆರಡುವ ಕಾರ್ಯಕ್ಕೆ ನಿಂಗೊ ಎಲ್ಲೋರು ಪ್ರೋತ್ಸಾಹಿಸುತ್ತಿ ಹೇಳ್ವ ನಂಬಿಕೆಂದ ಎಲ್ಲೋರಿಂಗೂ ಉಪಯೋಗವಾಗಲಿ, ಎಲ್ಲೋರಿಂಗೂ ಒಳ್ಳೆದಾಗಲಿ ಹೇಳ್ವ ಸದಾಶಯಂದ ನಮ್ಮ ಆರಧ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಸ್ಮರಿಸಿಗೊಂಡು, ಎನ್ನ ಅಬ್ಬೆ ಅಪ್ಪ° ಕುಲಗುರು ಹಿರಿಯರ ನಂಬಿಗೊಂಡು, ನಿಂಗೊ ಎಲ್ಲೋರ ಅಶೀರ್ವಾದವ ಬೇಡಿಗೊಂಡು, ಅವಿಘ್ನಮಸ್ತು ಹೇಳಿ ವಿಘ್ನನಿವಾರಕನಾದ ಗಣಪತಿಯ ಮನಸಾ ಧ್ಯಾನಿಸಿ, ವಿದ್ಯಾವಾರಿಧಿ ಶಾರದೆಗೆ ನಮಿಸಿ, ಸರ್ವಶಕ್ತ ಭಗವಂತನ ಸೇವೆ ಹೇದು ಸಂಕಲ್ಪಿಸಿ, ‘ಶಾರದಮ್ಮ ಧಾರ್ಮಿಕ ಪ್ರಕಾಶನ’ದವರ ಮತ್ತು ‘ಶ್ರೀನಿಧಿ ಪಬ್ಲಿಕೇಶನ್’ನವರ ‘ಗರುಡ ಪುರಾಣ’, ಕುಳಮರ್ವ ವೆಂಕಪ್ಪ ಭಟ್ಟರ ‘ಪುನರ್ಜನ್ಮ’ ಪುಸ್ತಕಂಗಳ ಆಧಾರವಾಗಿ ಮಡಿಕ್ಕೊಂಡು ಬರವ ಈ ಗರುಡಪುರಾಣದ ಉತ್ತರಖಂಡ ಭಾಗವ ಕಂತು ಕಂತಾಗಿ ನಿಂಗಳ ಮುಂದೆ ಮಡುಗುತ್ತಾ ಇದ್ದೆ.