Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಇತಿಹಾಸ

ಭಾರತದಲ್ಲಿ ಪ್ರಾಗೈತಿಹಾಸಿಕ ಧರ್ಮಕ್ಕೆ ಅತ್ಯಂತ ಮೊದಲಿನ ಪ್ರಮಾಣವು ಮುಂಚಿನ ಹರಪ್ಪಾ ಅವಧಿಯ (ಕ್ರಿ.ಪೂ. ೫೫೦೦-೨೬೦೦) ನವಶಿಲಾಯುಗದ ಕೊನೆಯ ಕಾಲಘಟ್ಟಕ್ಕೆ ಸೇರಿದೆ. ಪೂರ್ವಶಾಸ್ತ್ರೀಯ ಯುಗದ (ಕ್ರಿ.ಪೂ. ೧೫೦೦-೫೦೦) ನಂಬಿಕೆಗಳು ಮತ್ತು ಆಚರಣೆಗಳನ್ನು "ಐತಿಹಾಸಿಕ ವೈದಿಕ ಧರ್ಮ" ಎಂದು ಕರೆಯಲಾಗುತ್ತದೆ. ಆಧುನಿಕ ಹಿಂದೂ ಧರ್ಮವು ವೇದಗಳಿಂದ ಜೀವತಳೆದಿದೆ, ಮತ್ತು ಕ್ರಿ.ಪೂ. ೧೭೦೦-೧೦೦೦ ಕಾಲಕ್ಕೆ ಸೇರಿದ ಋಗ್ವೇದವು ವೇದಗಳಲ್ಲಿ ಅತ್ಯಂತ ಹಳೆಯದಾದದ್ದು. ವೇದಗಳು ಇಂದ್ರ, ವರುಣ ಮತ್ತು ಅಗ್ನಿಯಂತಹ ದೇವತೆಗಳ ಉಪಾಸನೆ, ಮತ್ತು ಸೋಮ ಕ್ರಿಯಾವಿಧಿಯ ಮೇಲೆ ಕೇಂದ್ರೀಕರಿಸುತ್ತವೆ. ಯಜ್ಞವೆಂದು ಕರೆಯಲಾಗುವ ಅಗ್ನಿಆಹುತಿಗಳನ್ನು ಮಾಡಲಾಗುತ್ತಿತ್ತು ಮತ್ತು ವೈದಿಕ ಮಂತ್ರಗಳನ್ನು ಪಠಿಸಲಾಗುತ್ತಿತ್ತು, ಆದರೆ ದೇವಸ್ಥಾನಗಳು ಅಥವಾ ಮೂರ್ತಿಗಳನ್ನು ನಿರ್ಮಿಸಲಾಗುತ್ತಿರಲಿಲ್ಲ. ಅತ್ಯಂತ ಹಳೆಯ ವೈದಿಕ ಸಂಪ್ರದಾಯಗಳು ಪಾರಸಿ ಧರ್ಮ ಮತ್ತು ಇತರ ಇಂಡೋ-ಯೂರೋಪಿಯನ್ ಧರ್ಮಗಳಿಗೆ ತೀಕ್ಷ್ಣ ಸಾದೃಶ್ಯಗಳನ್ನು ತೋರಿಸುತ್ತವೆ.

ಪ್ರಮುಖ ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಕ್ರೈಸ್ತಶಕದ ಪೂರ್ವದ ಕೊನೆಯ ಶತಮಾನಗಳು ಮತ್ತು ಕ್ರೈಸ್ತಶಕದ ಮೊದಲಿನ ಶತಮಾನಗಳ ದೀರ್ಘ ಕಾಲಾವಧಿಯಾದ್ಯಂತ ಸಂಕಲಿಸಲಾಗಿದೆ. ಅವು ಪ್ರಾಚೀನ ಭಾರತದ ಪ್ರಭುಗಳು ಮತ್ತು ಯುದ್ಧಗಳ ಪೌರಾಣಿಕ ಕಥೆಗಳನ್ನು ಹೊಂದಿವೆ, ಮತ್ತು ಅಲ್ಲಲ್ಲಿ ಮಧ್ಯದಲ್ಲಿ ಧಾರ್ಮಿಕ ಹಾಗೂ ದಾರ್ಶನಿಕ ಪ್ರಕರಣಗಳನ್ನು ಹೊಂದಿವೆ. ನಂತರದ ಪುರಾಣಗಳು ದೇವ ಮತ್ತು ದೇವಿಯರ ಕಥೆಗಳು, ಮನುಷ್ಯರೊಂದಿಗೆ ಅವರ ಸಂವಹನಗಳು ಮತ್ತು ರಾಕ್ಷಸರ ವಿರುದ್ಧ ನಡೆದ ಅವರ ಯುದ್ಧಗಳನ್ನು ವರ್ಣಿಸುತ್ತವೆ.

ಮೂರು ಪ್ರಮುಖ ಚಳುವಳಿಗಳು ಹಿಂದೂ ಚಿಂತನೆಯ ಒಂದು ಹೊಸ ಅವಧಿಯ ಹುಟ್ಟಿಗೆ ಆಧಾರವಾದವು: ಭಾರತದ ವಿಶಾಲವಾದ ಭೂರಾಶಿಯಾದ್ಯಂತ ಉಪನಿಷದಾಧಾರಿತ, ಜೈನ, ಮತ್ತು ಬೌದ್ಧ ತಾತ್ವಿಕ-ಧಾರ್ಮಿಕ ಚಿಂತನೆಯ ಆಗಮನ ಮತು ಪ್ರಸಾರ. ಮೋಕ್ಷ ಅಥವಾ ನಿರ್ವಾಣವನ್ನು ಪಡೆಯಲು ಒಬ್ಬರು ವೇದಗಳ ಅಧಿಕಾರ ಅಥವಾ ಜಾತಿಪದ್ಧತಿಯನ್ನು ಒಪ್ಪಿಕೊಳ್ಳುವುದು ಅಗತ್ಯವಲ್ಲವೆಂದು ಮಹಾವೀರ (ಜೈನರ ೨೪ನೆಯ ತೀರ್ಥಂಕರ) ಮತ್ತು ಗೌತಮ ಬುದ್ಧ (ಬೌದ್ಧ ಧರ್ಮದ ಸಂಸ್ಥಾಪಕ) ಇಬ್ಬರೂ ಬೋಧಿಸಿದರು. ಆತ್ಮ/ಚೇತನ ಅಥವಾ ದೇವರ ಅಸ್ತಿತ್ವವು ಅನಗತ್ಯವೆಂದೂ ಬುದ್ಧನು ಪ್ರತಿಪಾದಿಸಿದನು. ಬೌದ್ಧ ಧರ್ಮವು, ಕ್ರಿ.ಪೂ. ೩ನೆಯ ಶತಮಾನದಲ್ಲಿ ಭಾರತೀಯ ಉಪಖಂಡವನ್ನು ಏಕೀಕರಿಸಿದ ಮೌರ್ಯ ಸಾಮ್ರಾಜ್ಯದ ಅಶೋಕನ ಆಳ್ವಿಕೆಯ ಅವಧಿಯಲ್ಲಿ ಅತ್ಯುಚ್ಛ್ರಾಯ ಸ್ಥಿತಿ ತಲುಪಿತು. ಕ್ರಿ.ಶ. ೨೦೦ರ ನಂತರ, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವ-ಮೀಮಾಂಸ ಹಾಗೂ ವೇದಾಂತವನ್ನು ಒಳಗೊಡಂತೆ, ಹಲವಾರು ತತ್ವ ಸಿದ್ಧಾಂತಗಳು ಹಿಂದೂ ಸಿದ್ಧಾಂತದಲ್ಲಿ ವಿಧ್ಯುಕ್ತವಾಗಿ ಸಂಕೇತೀಕೃತಗೊಂಡವು. ಒಂದು ನಾಸ್ತಿಕ ಭೌತವಾದಿ ಪಂಥದ ಸಂಸ್ಥಾಪಕನಾದ ಚಾರ್ವಾಕನು ಕ್ರಿ.ಪೂ. ಆರನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಗಮನ ಸೆಳೆದನು. ಕ್ರಿ.ಪೂ. ೪೦೦ ಮತ್ತು ಕ್ರಿ.ಶ. ೧೦೦೦ರ ನಡುವೆ ಬೌದ್ಧಧರ್ಮವು ಅವನತಿಹೊಂದಿ ಹಿಂದೂ ಧರ್ಮವು ವಿಸ್ತರಿಸಿತು.

ಗುಪ್ತರ ಕಾಲದ ಅಂತ್ಯದ ನಂತರ ಸಂಸ್ಕೃತಾಧಾರಿತ ಸಂಸ್ಕೃತಿಯು ಅವನತಿಗೀಡಾಯಿತು. ಮೊದಲಿನ ಮಧ್ಯಯುಗದ ಪುರಾಣಗಳು ಸಾಂಸ್ಕೃತೀಕರಣಕ್ಕೀಡಾಗುತ್ತಿದ್ದ (ಅಕಲ್ಚರೇಶನ್) ಬರಹದ ಭಾಷೆಯಿರದ ಬುಡಕಟ್ಟು ಸಮಾಜಗಳ ನಡುವೆ ಒಂದು ಧಾರ್ಮಿಕ ಮುಖ್ಯವಾಹಿನಿಯನ್ನು ಸ್ಥಾಪಿಸಲು ನೆರವಾದವು. ಪುರಾಣಗಳ ರಚನಕಾರರ ಕೈಯಿಂದ ಬ್ರಾಹ್ಮಣ ಹಿಂದೂ ಧರ್ಮ ಮತ್ತು ಧರ್ಮಶಾಸ್ತ್ರಗಳ ತತ್ವಗಳು ಆಮೂಲಾಗ್ರ ರೂಪಾಂತರಕ್ಕೆ ಒಳಗಾದವು, ಪರಿಣಾಮವಾಗಿ ಎಲ್ಲ ಮುಂಚಿನ ಸಂಪ್ರದಾಯಗಳನ್ನು ಮರೆಮಾಡಿ ಒಂದು ಮುಖ್ಯವಾಹಿನಿ "ಹಿಂದೂ ಧರ್ಮ"ವು ಉದಯಿಸಿತು.

ಭಾರತಕ್ಕೆ ಇಸ್ಲಾಂ ಧರ್ಮವು ಅರಬ್ ವ್ಯಾಪಾರಿಗಳ ಆಗಮನ ಹಾಗೂ ಸಿಂಧ್‌ನ ವಿಜಯದೊಂದಿಗೆ ಏಳನೇ ಶತಮಾನದ ಆದಿಯಲ್ಲಿ ಬಂದಿತಾದರೂ, ನಂತರದ ಮುಸ್ಲಿಮರ ವಿಜಯದ ಅವಧಿಯಲ್ಲಿ ಅದು ಒಂದು ಪ್ರಮುಖ ಧರ್ಮವಾಗಲು ಪ್ರಾರಂಭಿಸಿತು. ಈ ಅವಧಿಯಲ್ಲಿ ಬೌದ್ಧಧರ್ಮವು ತ್ವರಿತವಾಗಿ ಅವನತಿಹೊಂದಿತು ಮತ್ತು ಹಲವು ಹಿಂದೂಗಳು ಇಸ್ಲಾಂ ಧರ್ಮಕ್ಕೆ ಮತಾಂತರಹೊಂದಿದರು. ಔರಂಗ್‌ಜ಼ೇಬ್‌ನಂತಹ ಅನೇಕ ಮುಸ್ಲಿಮ್ ಶಾಸಕರು ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದರು ಮತ್ತು ಮುಸ್ಲಿಮೇತರರನ್ನು ಹಿಂಸಿಸಿದರು; ಆದರೆ ಅಕ್ಬರ್‌ನಂತಹ ಕೆಲವರು ಹೆಚ್ಚು ಸಹಿಷ್ಣುವಾಗಿದ್ದರು. ಹಿಂದೂ ಧರ್ಮವು ತೀವ್ರ ಪರಿವರ್ತನೆಗಳಿಗೆ ಒಳಗಾಯಿತು, ಬಹುಮಟ್ಟಿಗೆ ರಾಮಾನುಜ, ಮಧ್ವ ಮತ್ತು ಚೈತನ್ಯರಂತಹ ಪ್ರಸಿದ್ಧ ಶಿಕ್ಷಕರ ಪ್ರಭಾವದಿಂದಾಗಿ. ಭಕ್ತಿ ಚಳುವಳಿಯ ಅನುಯಾಯಿಗಳು ಕೆಲವು ಶತಮಾನಗಳ ಹಿಂದೆ ವೇದಾಂತಿ ಆದಿ ಶಂಕರರಿಂದ ಕ್ರೋಡೀಕರಣಗೊಂಡ ಬ್ರಹ್ಮದ ಅಮೂರ್ತ ಪರಿಕಲ್ಪನೆಯಿಂದ ದೂರ ಸರಿದರು, ಮತ್ತು ಭಾವಾತ್ಮಕ, ಭಾವೋದ್ರಿಕ್ತ ಭಕ್ತಿಯೊಂದಿಗೆ ಹೆಚ್ಚು ಸುಲಭ ಗಮ್ಯ ಅವತಾರಗಳತ್ತ ಹೊರಳಿದರು, ವಿಶೇಷವಾಗಿ ಕೃಷ್ಣ ಮತ್ತು ರಾಮಾವತಾರಗಳತ್ತ.

ಐರೋಪ್ಯ ದೃಷ್ಟಿಕೋನದಿಂದ ಭಾರತೀಯ ಸಂಸ್ಕೃತಿಯನ್ನು ಅಧ್ಯಯನಮಾಡುವ ಒಂದು ಅಧ್ಯಯನ ವಿಭಾಗವಾಗಿ ಭಾರತಾಧ್ಯಯನವು (ಇಂಡಾಲಜಿ), ಮ್ಯಾಕ್ಸ್ ಮೂಲರ್ ಮತ್ತು ಜಾನ್ ವೂಡ್‌ರಾಫ಼್‌ರಂತಹ ವಿದ್ವಾಂಸರ ಮಾರ್ಗದರ್ಶನದಲ್ಲಿ, ೧೯ನೇ ಶತಮಾನದಲ್ಲಿ ಸ್ಥಾಪಿತವಾಯಿತು. ಅವರು ವೈದಿಕ, ಪೌರಾಣಿಕ ಮತ್ತು ತಾಂತ್ರಿಕ ಸಾಹಿತ್ಯ ಹಾಗೂ ತತ್ತ್ವಶಾಸ್ತ್ರವನ್ನು ಯೂರಪ್ ಮತ್ತು ಅಮೇರಿಕಾಕ್ಕೆ ತಂದರು. ಇದೇ ಅವಧಿಯಲ್ಲಿ, ಬ್ರಾಹ್ಮ ಸಮಾಜ ಹಾಗೂ ಥೀಯಸಾಫ಼ಿಕಲ್ ಸಸಾಯಿಟಿಯಂತಹ ಸಂಘಗಳು, ಸಮಾಜ ಸುಧಾರಣೆಯನ್ನು ಸ್ಥಾಪಿಸುವ ಪ್ರಯತ್ನವಾಗಿ, ಅಬ್ರಹಮೀ ಮತ್ತು ಧಾರ್ಮಿಕ ತತ್ತ್ವಶಾಸ್ತ್ರಗಳನ್ನು ಸುಸಂಗತಗೊಳಿಸಲು ಮತ್ತು ಒಂದುಗೂಡಿಸಲು ಪ್ರಯತ್ನಿಸಿದವು. ಈ ಅವಧಿಯು ಬಹಳ ಹೊಸತನವುಳ್ಳದ್ದಾಗಿದ್ದರೂ ದೇಶೀಯ ಸಂಪ್ರದಾಯದಲ್ಲಿ ಬೇರೂರಿದ ಚಳುವಳಿಗಳ ಉದಯವನ್ನು ಕಂಡಿತು. ಅವು ರಾಮಕೃಷ್ಣ ಪರಮಹಂಸ ಮತ್ತು ರಮಣ ಮಹರ್ಷಿಯಂತಹ ಗಣ್ಯವ್ಯಕ್ತಿಗಳು ಹಾಗೂ ಅವರ ಉಪದೇಶಗಳ ಮೇಲೆ ಆಧಾರಿತವಾಗಿದ್ದವು. ಅರವಿಂದ ಮತ್ತು ಸ್ವಾಮಿ ಪ್ರಭುಪಾದರನ್ನು ಒಳಗೊಂಡಂತೆ, ಪ್ರಖ್ಯಾತ ಹಿಂದೂ ತತ್ತ್ವಜ್ಞಾನಿಗಳು ಹಿಂದೂ ಧರ್ಮದ ಮೂಲಭೂತ ಪಠ್ಯಗಳನ್ನು ಸಮಕಾಲೀನ ಶ್ರೋತೃಗಳಿಗಾಗಿ ಹೊಸ ಆವೃತ್ತಿಗಳಲ್ಲಿ ಭಾಷಾಂತರಿಸಿದರು, ಪುನರ್ಪ್ರತಿಪಾದಿಸಿದರು ಮತ್ತು ಪರಿಚಯಿಸಿದರು, ಪರಿಣಾಮವಾಗಿ ಭಾರತ ಮತ್ತು ವಿದೇಶಗಳಲ್ಲಿ ಅನುಯಾಯಿಗಳನ್ನು ಮತ್ತು ಅನೇಕರ ಗಮನವನ್ನು ಸೆಳೆದರು. ಸ್ವಾಮಿ ವಿವೇಕಾನಂದ, ಪರಮಹಂಸ ಯೋಗಾನಂದ, ಬಿ. ಕೆ. ಎಸ್. ಅಯ್ಯಂಗಾರ್ ಮತ್ತು ಸ್ವಾಮಿ ರಾಮರಂತಹ ಇತರರೂ ಸಹ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯೋಗ ಮತ್ತು ವೇದಾಂತದ ಗೋಚರತೆಯನ್ನು ಹೆಚ್ಚಿಸುವಲ್ಲಿ ಸಾಧನವಾಗಿದ್ದಾರೆ. ಇಂದು, ಇಸ್ಕಾನ್ ಮತ್ತು ಸ್ವಾಮಿನಾರಾಯಣ ಮತದಂತಹ ಆಧುನಿಕ ಚಳುವಳಿಗಳು ವಿಶ್ವದಾದ್ಯಂತ ಬಹುಸಂಖ್ಯೆಗಳಲ್ಲಿ ಅನುಯಾಯಿಗಳನ್ನು ಆಕರ್ಷಿಸುತ್ತವೆ.